'ಐಎಂಎ ಅಧ್ಯಕ್ಷನ ಆಡಿಯೊದಲ್ಲಿ ಶಿವಾಜಿನಗರ ಶಾಸಕ'

Update: 2019-06-11 05:59 GMT

ಬೆಂಗಳೂರು, ಜೂ.11: ಹಲಾಲ್ ಆದಾಯದ ಹೆಸರಿನಲ್ಲಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂ.ಗಳನ್ನು ಹೂಡಿಕೆ ಮಾಡಿಸಿಕೊಂಡಿದ್ದ ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಖಾನ್ ಎಂದು ಪರಿಚಯಿಸಿಕೊಂಡಿರುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ, ನಗರ ಪೊಲೀಸ್ ಆಯುಕ್ತರಿಗೆ ಕಳುಹಿಸಿರುವ ಆಡಿಯೋ ಸಂದೇಶ ವೈರಲ್ ಆಗಿದೆ.

ಆಡಿಯೋ ಸಂದೇಶದಲ್ಲಿ ಏನಿದೆ ?

ಶಿವಾಜಿನಗರದ ಸ್ಥಳೀಯ ಶಾಸಕರು 400 ಕೋಟಿ ರೂ. ಪಡೆದು ವಾಪಸ್ ಕೊಟ್ಟಿಲ್ಲ. ಟಿಕೆಟ್ ಸಿಕ್ಕಿದಾಗ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದರು. ಅದನ್ನು ಕೇಳಲು ಹೋದರೆ, ಹಣ ವಾಪಸ್ ಕೊಡುವ ಬದಲು, ಕಚೇರಿಗೆ ರೌಡಿಗಳನ್ನು ಕಳುಹಿಸಲು ಪ್ರಾರಂಭಿಸಿದರು. ಇದರಿಂದಾಗಿ ನನ್ನ ಕಚೇರಿಯಲ್ಲಿ ಸಮಸ್ಯೆಗಳು ಪ್ರಾರಂಭವಾದವು. ನನ್ನ ಹಾಗೂ ನನ್ನ ಕುಟುಂಬಕ್ಕೆ ಪ್ರಾಣಾಪಾಯವಿತ್ತು. ಇದರಿಂದಾಗಿ, ನನ್ನ ಕುಟುಂಬವನ್ನು ಬೆಂಗಳೂರು ಹೊರವಲಯದ ಹಳ್ಳಿಯೊಂದರಲ್ಲಿ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂತು. ನಾನು ಬೆಂಗಳೂರಿನಲ್ಲೇ ಇದ್ದೇನೆ, ದಕ್ಷಿಣ ಬೆಂಗಳೂರಿನಲ್ಲಿದ್ದೇನೆ. ಆದರೆ, ನೀವು ಈ ನನ್ನ ಆಡಿಯೊ ಕೇಳಿಸಿಕೊಳ್ಳುವಷ್ಟರಲ್ಲಿ ನಾನು ಈ ಜಗತ್ತಿನಿಂದ ಹೊರಟು ಹೋಗಿರುತ್ತೇನೆ. ಸರ್, ಈ ಆಡಿಯೊ ಮಾಡಿರುವುದು ಒಂದೇ ಉದ್ದೇಶಕ್ಕೆ, ಅದೇನೆಂದರೆ ನನ್ನ ಬಳಿ 500 ಕೋಟಿ ರೂ. ಆಸ್ತಿ ಇದೆ. ಬೆಂಗಳೂರಿನಲ್ಲಿ 500 ಕೋಟಿ ಮೌಲ್ಯದ ಆಸ್ತಿ ಮತ್ತು 33 ಸಾವಿರ ಕ್ಯಾರೆಟ್ ವಜ್ರ ಹಾಗೂ ಚಿನ್ನಾಭರಣವಿದೆ. ಇದನ್ನೆಲ್ಲಾ ಮಾರಾಟ ಮಾಡಿ ಹೂಡಿಕೆದಾರರಿಗೆ ಹಣವನ್ನು ವಾಪಸ್ ಕೊಡಿ. ಆದರೆ, ಇದರಲ್ಲಿ ತುಂಬಾ ಜನರು ಮೋಸಗಾರರಿದ್ದಾರೆ. ಯಾರಿಗೆ ಹಣ ಸಿಗಬೇಕೋ ಅವರಿಗೆ ಹಣ ತಲುಪಿಸಿ. ಬಿಡಿಎ ಕುಮಾರ್ ಬಳಿ ನನ್ನ 5 ಕೋಟಿ ರೂ.ಹಣ ಇದೆ. ಶಿವಾಜಿನಗರದ ಶಾಸಕರ ಬಳಿ ಇರುವ ನನ್ನ ಹಣವನ್ನು ಪಡೆದು ಹೂಡಿಕೆದಾರರಿಗೆ ಹಂಚಿಕೆ ಮಾಡಿ ಎಂದು ತಮ್ಮನ್ನು ಮನ್ಸೂರ್ ಎಂದು ಪರಿಚಯಿಸಿಕೊಂಡಿರುವ ವ್ಯಕ್ತಿ, ನಗರ ಪೊಲೀಸ್ ಆಯುಕ್ತರಿಗೆ ಮಾಡಿರುವ ಮನವಿಯಾಗಿದೆ.

ಸಿಬಿಐ ತನಿಖೆಗೆ ರೋಷನ್ ಬೇಗ್ ಆಗ್ರಹ

ಈ ಆಡಿಯೊ ಕುರಿತು ಸತ್ಯಾಸತ್ಯತೆ ಪರಿಶೀಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇನೆ. 400 ಕೋಟಿ ರೂ.ಗಳಿಗೆ ಬೆಲೆ ಇಲ್ಲವೇ, ಇಷ್ಟೊಂದು ಬೃಹತ್ ಪ್ರಮಾಣದ ಹಣವನ್ನು ಟ್ರಕ್‌ನಲ್ಲಿ ತೆಗೆದುಕೊಂಡು ಬರಬೇಕೇ ಅಥವಾ ಕ್ಯಾಂಟರ್‌ನಲ್ಲಿ ತೆಗೆದುಕೊಂಡು ಬರಬೇಕೆ. ಇದೊಂದು ಫೇಕ್ ಆಡಿಯೊ ಎಂದು ಶಿವಾಜಿನಗರ ಶಾಸಕ ರೋಷನ್ ಬೇಗ್ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತರಿಗೆ ಈ ಆಡಿಯೊ ಕ್ಲಿಪ್ ಕಳುಹಿಸಲಾಗಿದೆ. ಅದರ ಸತ್ಯಾಸತ್ಯತೆ ಕುರಿತು ಅವರು ಪರಿಶೀಲಿಸುತ್ತಾರೆ. ಸಿಬಿಐ ತನಿಖೆಗೂ ನಾನು ಸಿದ್ಧ. ಅವರ ವ್ಯವಹಾರಗಳಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅವರ ಸಂಸ್ಥೆಗಳಲ್ಲಿ ನಾನು ಹೂಡಿಕೆಯನ್ನು ಮಾಡಿಲ್ಲ. ಕಾನೂನು ತನ್ನದೇ ರೀತಿಯಲ್ಲಿ ಕ್ರಮ ಕೈಗೊಳ್ಳಲಿ ಎಂದು ಅವರು ಹೇಳಿದರು.

ನನ್ನ ಮತ ಕ್ಷೇತ್ರ ಶಿವಾಜಿನಗರದಲ್ಲಿ ಅವರು ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಖಾಸಗಿ ಸಹಭಾಗಿತ್ವದಲ್ಲಿ ಮಾದರಿಯಾಗಿ ನಿರ್ಮಿಸಿಕೊಟ್ಟಿ ದ್ದಾರೆ. ಹಿಂದಿನ ಮುಖ್ಯಮಂತ್ರಿಗಳೇ ಆ ಕಟ್ಟಡವನ್ನು ಉದ್ಘಾಟಿಸಿದ್ದರು. ಯಾರೋ ನನ್ನ ವಿರುದ್ಧ ಪಿತೂರಿ ಮಾಡಲು ಈ ಆಡಿಯೊ ಬಿಡುಗಡೆ ಮಾಡಿದ್ದಾರೆ. ಪೊಲೀಸರ ತನಿಖೆಗಿಂತ ಗೊತ್ತಾಗುತ್ತದೆ ಎಂದು ರೋಷನ್ ಬೇಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News