ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆಯನ್ನು ವಿವಾಹವಾದ ಶಾಸಕ

Update: 2019-06-11 09:56 GMT

ಅಗರ್ತಲಾ : ತನ್ನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ದೂರು ದಾಖಲಿಸಿದ ಮಹಿಳೆಯನ್ನು ಮದುವೆಯಾಗಿ ತ್ರಿಪುರಾದ 29 ವರ್ಷ ವಯಸ್ಸಿನ ಶಾಸಕ ಧನಂಜಯ್ ತ್ರಿಪುರಾ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ.

ರವಿವಾರ ಮಂಡ್ವೈ ಎಂಬಲ್ಲಿನ ಮಹಿಳೆಯ ಮನೆಯಲ್ಲಿ ಭಾರೀ ಸಡಗರದಿಂದ ವಿವಾಹ ಸಮಾರಂಭ ನಡೆದಿದೆ. ತ್ರಿಪುರಾದ ಬಿಜೆಪಿ ನೇತೃತ್ವದ ಮೈತ್ರಿ ಸರಕಾರದ ಭಾಗವಾಗಿರುವ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ನಿಂದ ಸ್ಪರ್ಧಿಸಿ ಧನಂಜಯ್ ಗೆದ್ದಿದ್ದರು.

ಎರಡೂ ಕಡೆಗಳು ಪರಸ್ಪರ ಒಪ್ಪಿ ಈ ವಿವಾಹ ನಡೆದಿದ್ದು ಬಹಳಷ್ಟು ಜನರು ಆಗಮಿಸಿದ್ದರು ಎಂದು ಶಾಸಕ ಹೇಳಿಕೊಂಡಿದ್ದಾರೆ. ಮಹಿಳೆಯ ದೂರಿನ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಕಳೆದ ತಿಂಗಳು ಎಫ್‍ಐಆರ್ ದಾಖಲಾದ ನಂತರ ತಾನು ಆಕೆಯ ಮನೆಗೆ ಹಲವಾರು ಬಾರಿ ಭೇಟಿ ನೀಡಿ ಭಿನ್ನಾಭಿಪ್ರಾಯ ಪರಿಹರಿಸಲು ಯತ್ನಿಸಿದ್ದೆ ಎಂದು ಅವರು ಹೇಳಿಕೊಂಡರು.

''ಕೆಲ ತಪ್ಪುಗಳು ಎರಡೂ ಕಡೆಗಳಿಂದ ನಡೆದಿವೆ. ಅವುಗಳನ್ನು ಸರಿ ಪಡಿಸಲಾಗಿದೆ. ಪ್ರಕರಣ ವಾಪಸ್ ಪಡೆಯಲು ನಾವು ನಮ್ಮ ವಕೀಲರ ಜತೆ ಸಂಪರ್ಕದಲ್ಲಿದ್ದೇವೆ. ಸದ್ಯದಲ್ಲಿಯೇ ವಿವಾಹ ಆರತಕ್ಷತೆ ಆಯೋಜಿಸುತ್ತೇನೆ'' ಎಂದು ಧನಂಜಯ್ ಹೇಳಿದ್ದಾರೆ.

''ನನಗೂ ಶಾಸಕನಿಗೂ ಎರಡು ವರ್ಷಗಳಿಂದ ಪ್ರೇಮ ಸಂಬಂಧ ಹಾಗೂ ಆತ ಅಗರ್ತಲಾದ ಅಭಯನಗರ್ ಪ್ರದೇಶದಲ್ಲಿರುವ ಮನೆಯಲ್ಲಿ ಹಲವಾರು ಬಾರಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ನನ್ನನ್ನು ಮದುವೆಯಾಗುವ ಭರವಸೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಆತ ನಂತರ ನನ್ನನ್ನು ತೊರೆದಿದ್ದ'' ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದರು.

ಆಕೆಯ ದೂರಿನ ಆಧಾರದಲ್ಲಿ ಶಾಸಕನ ಮೇಲೆ ಐಪಿಸಿ ಸೆಕ್ಷನ್ 417 ಹಾಗೂ 376 ಅನ್ವಯ ಪ್ರಕರಣ ದಾಖಲಾಗಿತ್ತು. ಈ ಆರೋಪ ತನ್ನನ್ನು ಹಾಗೂ ತನ್ನ ಪಕ್ಷದ ಮಾನಹಾನಿಗೈಯ್ಯುವ ಉದ್ದೇಶದಿಂದ ಮಾಡಲಾಗಿದೆ ಹಾಗೂ ಅದರ ಹಿಂದೆ ರಾಜಕೀಯ ಸಂಚಿದೆ ಎಂದು  ಈ ಹಿಂದೆ ಆರೋಪಿಸಿದ್ದ ಶಾಸಕ ದೂರುದಾರೆಯ ವಿರುದ್ಧ  ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಬೆದರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News