ಥಾವರ್‌ಚಂದ್ ಗೆಹ್ಲೋಟ್ ರಾಜ್ಯಸಭೆಯ ನಾಯಕ

Update: 2019-06-12 04:03 GMT

ಹೊಸದಿಲ್ಲಿ, ಜೂ.12: ಕೇಂದ್ರ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜ್ಯಸಭೆಯ ನಾಯಕರನ್ನಾಗಿ ಸರ್ಕಾರ ನೇಮಕ ಮಾಡಿದೆ. ಅರುಣ್ ಜೇಟ್ಲಿಯವರು ಅನಾರೋಗ್ಯದ ಕಾರಣದಿಂದ ಹೊಸ ಸಂಪುಟದಲ್ಲಿ ಕಾರ್ಯಭಾರ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೊರಗುಳಿದಿರುವ ಹಿನ್ನೆಲೆಯಲ್ಲಿ ಜೇಟ್ಲಿ ತೆರವು ಮಾಡಿದ ರಾಜ್ಯಸಭಾ ನಾಯಕನ ಸ್ಥಾನವನ್ನು ಗೆಹ್ಲೋಟ್ ತುಂಬಿದ್ದಾರೆ.

ರಾಜ್ಯಸಭೆಯಲ್ಲಿ ರಾಜ್ಯಸಭೆಯ ಅಧ್ಯಕ್ಷರ ಸ್ಥಾನದ ಪಕ್ಕದ ಮೊದಲ ಆಸನವನ್ನು ಗೆಹ್ಲೋಟ್ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ರಾಜಸ್ಥಾನ ಬಿಜೆಪಿಯ ಪ್ರಮುಖ ದಲಿತ ಮುಖಂಡ ಎನಿಸಿಕೊಂಡಿರುವ ಥಾವರ್‌ಚಂದ್ ಅವರನ್ನು ಇತ್ತೀಚೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರನ್ನಾಗಿ ನೇಮಿಸಲಾಗಿತ್ತು. ಎರಡನೇ ಬಾರಿ ಅವರು ಸಚಿವ ಪದವಿ ಪಡೆದಿದ್ದಾರೆ.

ಗೆಹ್ಲೋಟ್ ಅವರನ್ನು ನೇಮಕ ಮಾಡುವ ಮೂಲಕ ಬಿಜೆಪಿ ಸಂಸತ್ತಿನಲ್ಲಿ ದಲಿತರಿಗೆ ಪ್ರಾತಿನಿಧ್ಯ ನೀಡಿರುವ ಸಂದೇಶವನ್ನು ರವಾನಿಸಿದೆ. ಇದಕ್ಕೂ ಮುನ್ನ ರಾಮನಾಥ್ ಕೋವಿಂದ್ ಅವರನ್ನು ಬಿಜೆಪಿ ರಾಷ್ಟ್ರಪತಿಯಾಗಿ ಚುನಾಯಿಸಿತ್ತು. ಗೆಹ್ಲೋಟ್ ಅವರು ರಾಷ್ಟ್ರಪತಿ ಹುದ್ದೆಯ ರೇಸ್‌ನಲ್ಲೂ ಇದ್ದರು ಎನ್ನುವುದು ಕುತೂಹಲದ ಅಂಶ.

ಗೆಹ್ಲೋಟ್ ಅವರು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮೇಲ್ಮನೆಗೆ ಆಯ್ಕೆಯಾಗುವ ಮುನ್ನ ಅವರು 1996ರಿಂದ 2009ರವರೆಗೆ ಶಾಜ್‌ಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2009ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಸಜ್ಜನ್ ಸಿಂಗ್ ವರ್ಮಾ ವಿರುದ್ಧ ಸೋಲು ಅನುಭವಿಸಿದ್ದರು. ಆ ಬಳಿಕ 2012 ಹಾಗೂ 2018ರಲ್ಲಿ ಅವರು ರಾಜ್ಯಸಭೆಗೆ ಮಧ್ಯಪ್ರದೇಶದಿಂದ ಚುನಾಯಿತರಾದರು. ಅವರ ಅಧಿಕಾರಾವಧಿ 2024ರವರೆಗೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News