ಬಡವರ್ಗದ ವಿದ್ಯಾರ್ಥಿಗಳಿಗೆ ಸುಂದರರಾಜ್ ಅರಸ್ ಬದುಕು ಮಾದರಿಯಾಗಲಿ: ಎಲ್.ಹನುಮಂತಯ್ಯ

Update: 2019-06-12 12:34 GMT

ಬೆಂಗಳೂರು, ಜೂ.12: 60-70ನೆ ದಶಕದಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಹಳ ಕಷ್ಟಪಟ್ಟು ಉನ್ನತ ಹಂತಕ್ಕೆ ಮುಟ್ಟಿದ್ದಾರೆ. ಅವರ ಸಾಲಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸುಂದರ್‌ರಾಜ್ ಅರಸ್ ಪ್ರಮುಖರು. ಹೀಗಾಗಿ ಗ್ರಾಮೀಣ ಹಾಗೂ ಬಡ ವರ್ಗದ ವಿದ್ಯಾರ್ಥಿಗಳಿಗೆ ಅವರ ಬದುಕು ಮಾರ್ಗದರ್ಶನವಾಗಲಿ ಎಂದು ಸಂಸದ ಎಲ್.ಹನುಮಂತಯ್ಯ ತಿಳಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಸುಂದರರಾಜ್ ಅರಸ್ ನಿವೃತ್ತಿಯಾಗಿರುವ ಹಿನ್ನೆಲೆಯಲ್ಲಿ ಬುಧವಾರ ಸುಂದರರಾಜ್ ಅರಸ್ ಅಭಿನಂದನಾ ಬಳಗ ಬೆಂಗಳೂರು ವಿಶ್ವವಿದ್ಯಾಲಯದ ಎಚ್.ಎನ್.ಸಭಾಂಗಣದಲ್ಲಿ ಆಯೋಜಿಸಿದ್ದ ‘ಸ್ನೇಹ ಜೀವಿ ಅರಸ್ ಅಭಿನಂದನಾ ಗ್ರಂಥ ಬಿಡುಗಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸುಂದರರಾಜ್ ಅರಸ್ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣದ ಪ್ರಾಧ್ಯಾಪಕರು, ಕುಲ ಸಚಿವರು ಹಾಗೂ ದೈಹಿಕ ಶಿಕ್ಷಣದ ಮುಖ್ಯಸ್ಥರು ಸೇರಿದಂತೆ ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಅವರು ಬಾಲ್ಯದ ಶಿಕ್ಷಣದಿಂದ ವಿಶ್ವವಿದ್ಯಾಲಯದವರೆಗೆ ಬೆಳೆದು ರೀತಿ ಮಾತ್ರ ಆದರ್ಶವಾದುದ್ದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಾನು ಹಾಗೂ ಸುಂದರರಾಜ್ ಅರಸ್ ದೊಡ್ಡಬಳ್ಳಾಪುರದಲ್ಲಿ ಶಾಲಾ ಶಿಕ್ಷಣವನ್ನು ಜೊತೆಯಾಗಿಯೆ ಮುಗಿಸಿದೆವು. ನಾನು ಹಾಸ್ಟೆಲ್‌ನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದೆ. ಆದರೆ, ಸುಂದರರಾಜ್‌ಅರಸ್ ಹಾಸ್ಟೆಲ್‌ಗೆ ಅಧಿಕೃತವಾಗಿ ದಾಖಲಾಗದಿದ್ದರೂ ವರ್ಷದ ಹೆಚ್ಚಿನ ದಿನಗಳು ನಮ್ಮ ಜೊತೆ ಹಾಸ್ಟೆಲ್‌ನಲ್ಲಿಯೆ ತಂಗುತ್ತಿದ್ದರು. ಆ ದಿನಗಳಲ್ಲಿ ಹಾಸ್ಟೆಲ್ ನಮಗೆ ಊಟ ಹಾಕಿ ಸಲುಹಿದ ಕಾರಣದಿಂದಾಗಿ ನಾವು ಇವತ್ತು ಉನ್ನತ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಅವಕಾಶಗಳು ಬಂದಾಗ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವವನು ಬದುಕಿನಲ್ಲಿ ಯಶಸ್ವಿ ವ್ಯಕ್ತಿಯಾಗುತ್ತಾನೆ. ಇಂತಹ ಪ್ರತಿಯೊಂದು ಅವಕಾಶಗಳನ್ನು ಸುಂದರರಾಜ್ ಅರಸ್ ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಲ್ಲ ವಿಭಾಗಗಳಲ್ಲಿ ಅತ್ಯುತ್ತಮ ಕೆಲಸ ಮಾಡಿ ಯಶಸ್ವಿಯಾಗಿದ್ದಾರೆ ಎಂದು ಅವರು ಅಭಿನಂದಿಸಿದರು.

ಹಿರಿಯ ಸಂಸ್ಕೃತಿ ಚಿಂತಕ ಬರಗೂರು ರಾಮಚಂದ್ರಪ್ಪ ಮಾತನಾಡಿ, ಇವತ್ತು ವಿಶ್ವವಿದ್ಯಾಲಯಗಳೆಂದರೆ ಜಾತಿ, ಉಪ ಜಾತಿಗಳ ಗುಂಪುಗಾರಿಕೆ, ಧರ್ಮದ ಆಧಾರದಲ್ಲಿ ದ್ವೇಷ ಬಿತ್ತುವುದು ಸೇರಿದಂತೆ ಸಮಾಜದಲ್ಲಿ ನಡೆಯುವ ಅನ್ಯಾಯಗಳೆಲ್ಲವು ವಿಶ್ವವಿದ್ಯಾಲಯಗಳಲ್ಲೂ ಪ್ರತಿಬಿಂಬಿತವಾಗುತ್ತದೆ. ಇಂತಹ ಸಂದರ್ಭದಲ್ಲಿಯೆ ಬೆಂಗಳೂರು ವಿಶ್ವವಿದ್ಯಾಲಯ ನಿವೃತ್ತ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಸುಂದರರಾಜ್ ಅರಸ್‌ಗೆ ಅಭಿನಂದನೆ ಸಲ್ಲಿಸುತ್ತಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯಿಸಿದರು.

ಸುಂದರರಾಜ್ ಅರಸ್‌ರವರು ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳ ಪ್ರಾಧ್ಯಾಪಕರ, ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಗಳ ಪ್ರೀತಿ ಗಳಿಸಿದ್ದಾರೆ. ನಾನು ನಿರ್ದೇಶಿಸಿದ ಹಲವು ಸಿನೆಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಅವರು ಅತ್ಯುತ್ತಮ ನಟರು ಹೌದೆಂದು ಅವರು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಬಿ.ಕೆ.ರವಿ, ವೌಲ್ಯಮಾಪನದ ಕುಲಸಚಿವ ಚಂದ್ರಪ್ಪ, ಸುಂದರರಾಜ್ ಅರಸ್‌ರ ಅಭಿನಂದನಾ ಬಳಗದ ಗೌರವಾಧ್ಯಕ್ಷ ವೈದ್ಯನಾಥನ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News