ನಾಲ್ಕನೆ ಶನಿವಾರವೂ ಸರಕಾರಿ ರಜೆ: ಸಾಂದರ್ಭಿಕ ರಜೆ 10ಕ್ಕೆ ಇಳಿಸಿ ಸರಕಾರ ಆದೇಶ

Update: 2019-06-12 13:07 GMT

ಬೆಂಗಳೂರು, ಜೂ. 12: ರಾಜ್ಯ ಸರಕಾರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸರಕಾರಿ ಉದ್ಯೋಗಿಗಳಿಗೆ ತಕ್ಷಣದಿಂದಲೆ ಜಾರಿಗೆ ಬರುವಂತೆ 4ನೆ ಶನಿವಾರವೂ ಸರಕಾರಿ ರಜೆ ಘೋಷಿಸಿ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.

ಮುಂದಿನ ಆದೇಶದವರೆಗೂ ಪ್ರತಿ ತಿಂಗಳ 4ನೆ ಶನಿವಾರ ಸಾರ್ವತ್ರಿಕ ರಜೆ ಹಾಗೂ ರಾಜ್ಯ ಸರಕಾರಿ ನೌಕರರಿಗೆ ಇದ್ದ ಹದಿನೈದು ದಿನಗಳ ಸಾಂದರ್ಭಿಕ ರಜೆಯನ್ನು ಹತ್ತು ದಿನಗಳಿಗೆ ಇಳಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಜೂ.6ರಂದು ನಡೆದ ಸಂಪುಟ ಸಭೆಯಲ್ಲಿ ರಜೆ ನಿರ್ಧಾರ ಕೈಗೊಳ್ಳಲಾಗಿತ್ತು. ಅಲ್ಲದೆ, ವಿವಿಧ ಜಯಂತಿಗಳ ರಜೆ ಕಡಿತಗೊಳಿಸಿ 4ನೆ ಶನಿವಾರ ರಜೆ ನೀಡಲು 6ನೆ ವೇತನ ಆಯೋಗದ ಶಿಫಾರಸಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ಕೃಷ್ಣ ಭೈರೇಗೌಡ ನೇತೃತ್ವದ ಸಂಪುಟ ಉಪ ಸಮಿತಿ ವರದಿ ನೀಡಿತ್ತು. ಆದರೆ ಸದ್ಯಕ್ಕೆ ಯಾವುದೇ ಜಯಂತಿಯ ರಜೆ ಕಡಿತಗೊಳಿಸದಿರಲು ಸರಕಾರ ತೀರ್ಮಾನಿಸಿದೆ.

ಈ ವರ್ಷದ ರಜಾ ಕ್ಯಾಲೆಂಡರ್ ಈಗಾಗಲೇ ಬಿಡುಗಡೆಯಾಗಿರುವುದರಿಂದ ಸದ್ಯಕ್ಕೆ ಈ ಪರಿಷ್ಕರಣೆ ಅಸಾಧ್ಯ. ಮುಂದಿನ ವರ್ಷದಿಂದ ಜಾರಿಯಾಗಬಹುದು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಸರಕಾರ ಈಗ ರಾಜ್ಯಪತ್ರ ಹೊರಡಿಸಿ ನಾಲ್ಕನೆ ಶನಿವಾರದ ರಜೆಯನ್ನು ಅಧಿಕೃತಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News