ಗುಜರಾತ್: 'ವಾಯು' ದಾಳಿ ಎದುರಿಸಲು ಸಮರ ಸಿದ್ಧತೆ, ರೈಲು ಸಂಚಾರ ರದ್ದು

Update: 2019-06-13 03:46 GMT

ಅಹ್ಮದಾಬಾದ್/ ರಾಜ್‌ಕೋಟ್, ಜೂ.13: ಭೀಕರ ಚಂಡಮಾರುತ 'ವಾಯು' ಇಂದು ಗುಜರಾತ್ ಕರಾವಳಿಗೆ ಅಪ್ಪಳಿಸಲಿದ್ದು, ಮುಂಜಾಗ್ರತಾ ಕ್ರಮವಾಗಿ ಕರಾವಳಿ ಜಿಲ್ಲೆಗಳ 2.5 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಪಶ್ಚಿಮ ರೈಲ್ವೆ ಸುಮಾರು 70 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.

ಈ ಮಧ್ಯೆ ಸಿಡಿಲು ಬಡಿದು ಡಂಗ್, ತಾಪಿ ಮತ್ತು ನರ್ಮದಾ ಜಿಲ್ಲೆಗಳಲ್ಲಿ ಈಗಾಗಲೇ ಐದು ಮಂದಿ ಮೃತಪಟ್ಟಿದ್ದಾರೆ. ಚಂಡಮಾರುತ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರಿ ಗಾಳಿ ಹಾಗೂ ಮಳೆಯಾಗುತ್ತಿದೆ.

1998ರ ಬಳಿಕ ರಾಜ್ಯದ ಮೇಲೆ ದಾಳಿ ಮಾಡುವ ಅತಿದೊಡ್ಡ ಚಂಡಮಾರುತ ಇದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 1998ರ ಚಂಡಮಾರುತ ಬಂದರು ನಗರ ಕಾಂಡ್ಲಾವನ್ನು ಧ್ವಂಸಗೊಳಿಸಿ 1,241 ಮಂದಿಯನ್ನು ಬಲಿ ಪಡೆದಿತ್ತು. ವಾಯು ಚಂಡಮಾರುತ ಸೌರಾಷ್ಟ್ರ ಕರಾವಳಿಯ ಮೇಲೆ ಗುರುವಾರ ಮಧ್ಯಾಹ್ನ ತಲುಪುವ ನಿರೀಕ್ಷೆ ಇದೆ.

155-165 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಇದು 180 ಕಿಲೋಮೀಟರ್ ವೇಗ ಪಡೆದುಕೊಳ್ಳುವ ಸಾಧ್ಯತೆಯೂ ಇದೆ. ವೆರ್‌ವೇಲ್‌ನ ಪಶ್ಚಿಮ ಪ್ರದೇಶವಾದ ದ್ವಾರಕ ಮತ್ತು ಪೋರಬಂದರ್ ಮೇಲೆ ಅಪರಾಹ್ನ 3ರ ವೇಳೆಗೆ ಅಪ್ಪಳಿಸುವ ಸಾಧ್ಯತೆ ಇದೆ. ಅಪ್ಪಳಿಸಿದ ಬಳಿಕ ಸೌರಾಷ್ಟ್ರ- ಕಛ್ ಕರಾವಳಿಗೆ ಪರ್ಯಾಯವಾಗಿ ಇದು ಸಂಚರಿಸಲಿದ್ದು, ಅಮ್ರೇಲಿ, ಗೀರ್ ಸೋಮನಾಥ್, ಡಿಯು, ಜುನಾಗಢ, ಪೋರಬಂದರ್, ರಾಜಕೋಟ್, ಜಾಮ್‌ನಗರ, ಕಛ್ ಮತ್ತು ದ್ವಾರಕಾ ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ ಎಂದು ಗುಜರಾತ್ ಹವಾಮಾನ ಇಲಾಖೆಯ ನಿರ್ದೇಶಕ ಜಯಂತ ಸರ್ಕಾರ್ ಹೇಳಿದ್ದಾರೆ.

ಉತ್ತರಮುಖಿಯಾಗಿ ಚಂಡಮಾರುತ ಸಾಗಲಿದ್ದು, ನಾಲ್ಕು ದಿನಗಳ ಕಾಲ ಇದರ ಪರಿಣಾಮ ಗುಜರಾತ್ ಮೇಲಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಸ್ತಿಪಾಸ್ತಿ ನಷ್ಟ ಹಾಗೂ ಜೀವಹಾನಿ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, 500ಕ್ಕೂ ಹೆಚ್ಚು ಕರಾವಳಿ ಗ್ರಾಮಗಳಿಂದ 2.81 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ. ದ್ವಾರಕ, ಸೋಮನಾಥ ಪ್ರದೇಶದಿಂದ 10 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನೂ ವಾಪಸ್ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News