ವಿಮಾನ ಪತನದಲ್ಲಿ ಯಾರೂ ಬದುಕುಳಿದಿಲ್ಲ: ವಾಯುಪಡೆ

Update: 2019-06-13 15:12 GMT

ಹೊಸದಿಲ್ಲಿ, ಜೂ. 13: ಅರುಣಾಚಲಪ್ರದೇಶದಲ್ಲಿ ಪತನಗೊಂಡ ಎಎನ್ 32 ವಿಮಾನದಲ್ಲಿದ್ದ ಎಲ್ಲ 13 ಮಂದಿ ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯು ಪಡೆ ಹೇಳಿದೆ.

ಅರುಣಾಚಲಪ್ರದೇಶದ ಪರ್ವತ ಪ್ರದೇಶಗಳ ಭಾರೀ ಅರಣ್ಯದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದ ಬಳಿಕ ಭಾರತೀಯ ವಾಯು ಪಡೆ ಈ ಮಾಹಿತಿ ನೀಡಿದೆ. ಎಎನ್-32 ಹೆಲಿಕಾಪ್ಟರ್ ಪತನದ ದುರ್ಘಟನೆಯಲ್ಲಿ ಯಾರೊಬ್ಬರೂ ಬದುಕಿ ಉಳಿದಿಲ್ಲ ಎಂದು ಭಾರತೀಯ ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

2019 ಜನವರಿ 3ರಂದು ಸಂಭವಿಸಿದ ಎಎನ್-32 ವಿಮಾನ ಪತನದ ಸಂದರ್ಭ ತಮ್ಮ ಜೀವ ಕಳೆದುಕೊಂಡ ವಾಯು ಪಡೆಯ ಪರಾಕ್ರಮಿ ಯೋಧರಿಗೆ ಭಾರತೀಯ ವಾಯು ಪಡೆ ಶ್ರದ್ಧಾಂಜಲಿ ಸಲ್ಲಿಸುತ್ತದೆ ಹಾಗೂ ಮೃತಪಟ್ಟ ಯೋಧರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತದೆ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಭಾರತೀಯ ವಾಯು ಪಡೆಯ ವಕ್ತಾರ ತಿಳಿಸಿದ್ದಾರೆ.

ವಿಮಾನ ಪತನದಲ್ಲಿ ವಿಂಗ್ ಕಮಾಂಡರ್ ಜಿ.ಎಂ. ಚಾರ್ಲ್ಸ್, ಸ್ಕ್ವಾಡ್ರನ್ ನಾಯಕ ಎಚ್. ವಿನೋದ್, ಫ್ಲೈಟ್ ಲೆಫ್ಟಿನೆಂಟ್‌ಗಳಾದ ಎಲ್.ಆರ್. ಥಾಪಾ, ಎಂ.ಕೆ. ಗರ್ಗ್, ಆಶಿಶ್ ತನ್ವರ್, ಸುಮಿತ್ ಮೊಹಾಂತಿ, ವಾರಂಟ್ ಅಧಿಕಾರಿ ಕೆ.ಕೆ. ಮಿಶ್ರಾ, ಸರ್ಜೆಂಟ್ ಅನೂಪ್ ಕುಮಾರ್, ಕಾರ್ಪೊರಲ್ ಶೆರಿನ್, ಎಲ್‌ಎಸಿ ಎಸ್.ಕೆ. ಸಿಂಗ್, ಎಲ್‌ಎಸಿ ಪಂಕಜ್ ಹಾಗೂ ರಾಕೇಶ್ ಕುಮಾರ್, ಪುಟಾಲಿ ಹುತಾತ್ಮರಾಗಿದ್ದಾರೆ.

ಜೂನ್ 3ರಂದು ಅಸ್ಸಾಂನ ಮೆಂಛುಕಾದಿಂದ ಜೊರ್ಹಾತ್‌ಗೆ ತೆರಳಿದ್ದ ರಶ್ಯಾ ನಿರ್ಮಿತ ಎಎನ್-32 ವಿಮಾನ ಚೀನಾ ಗಡಿ ಸಮೀಪ ಮುಂಚಿತವಾಗಿ ಇಳಿದಿತ್ತು. ಅನಂತರ ಹಾರಾಟ ಆರಂಭಿಸಿದ ಅರ್ಧ ಗಂಟೆಗಳ ಬಳಿಕ ವಿಮಾನ ಸಂಪರ್ಕ ಕಳೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News