ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಅಹೋರಾತ್ರಿ ಧರಣಿ

Update: 2019-06-14 14:40 GMT

ಬೆಂಗಳೂರು, ಜೂ.14: ಜಿಂದಾಲ್ ಸಂಸ್ಥೆಗೆ 3667 ಎಕರೆ ಜಮೀನು ನೀಡುವ ತೀರ್ಮಾನದ ಹಿಂದೆ ಭಾರೀ ಭ್ರಷ್ಟಾಚಾರ ನಡೆದಿದೆ ಮತ್ತು ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಮೈತ್ರಿ ಸರಕಾರ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಆನಂದ್‌ರಾವ್ ವೃತ್ತದಲ್ಲಿರುವ ಮೌರ್ಯ ಹೊಟೇಲ್ ಬಳಿ ರಾಜ್ಯ ಬಿಜೆಪಿ ಘಟಕದ ವತಿಯಿಂದ ಆಯೋಜಿಸಲಾಗಿರುವ ಸತತ ಎರಡು ದಿನಗಳ ಅಹೋರಾತ್ರಿ ಧರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಮೈತ್ರಿ ಸರಕಾರವು ರಾಜ್ಯದ ನೀರಾವರಿ ಯೋಜನೆಗಳಿಗಾಗಲಿ, ಕುಡಿಯುವ ನೀರಿನ ಸಮಸ್ಯೆಗಾಗಲೀ ಸ್ವಲ್ಪವೂ ಸ್ಪಂದಿಸದೇ ಸಂಪೂರ್ಣ ಕಡೆಗಣಿಸಿದೆ. ಬಿಜೆಪಿ ಮುಖಂಡರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡದೇ ಇದ್ದಿದ್ದರೆ, ಸರಕಾರ ಈ ಬಗ್ಗೆ ಚಕಾರವೆತ್ತುತ್ತಿರಲಿಲ್ಲ ಎಂದು ಅವರು ಟೀಕಿಸಿದರು.

ಜಿಂದಾಲ್ ಸಂಸ್ಥೆಗೆ ಜಮೀನು ನೀಡುವ ವಿಷಯವನ್ನು ನಾವು ಪ್ರಸ್ತಾಪಿಸದೇ ಇದ್ದಿದ್ದರೆ ಮುಖ್ಯಮಂತ್ರಿ ಈ ವಿಷಯವನ್ನು ಪರಿಶೀಲಿಸುವುದಾಗಿ ಹೇಳುತ್ತಿರಲಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸದಿರುವ ಈ ಸರಕಾರದ ವಿರುದ್ಧ ನಾವೀಗ ಹೋರಾಟ ಆರಂಭಿಸಿದ್ದೇವೆ. ಈ ಸರಕಾರ ಬಿದ್ದು ಹೋಗುವವರೆಗೆ ಹೋರಾಟ ಮುಂದುವರಿಸದೇ ಇದ್ದರೆ, ರಾಜ್ಯದ ಜನರಿಗೆ ನೆಮ್ಮದಿ ಸಿಗದು ಎಂದು ಯಡಿಯೂರಪ್ಪ ಹೇಳಿದರು.

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಜಿಂದಾಲ್ ಕಂಪೆನಿಗೆ ನೀಡಿರುವ ಭೂಮಿಯನ್ನು ವಾಪಸ್ ಪಡೆಯುವ ಸಲುವಾಗಿ ವಿಶೇಷ ಸಂಪುಟ ಸಭೆ ನಡೆಸುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿದರು. ಅಲ್ಲದೇ, ರಾಜ್ಯದ ಆಸ್ತಿ ಉಳಿಸಲು ಆರಂಭಿಸಿರುವ ಹೋರಾಟವು ಜಿಂದಾಲ್‌ನಿಂದ ಭೂಮಿ ವಾಪಸ್ ಪಡೆಯುವವರೆಗೂ ನಿಲ್ಲುವುದಿಲ್ಲ ಎಂದರು.

ಐಎಂಎ ಹಗರಣದಲ್ಲಿ ಸಿದ್ದರಾಮಯ್ಯ ಅವರ ನಡೆಯನ್ನು ಪ್ರಶ್ನಿಸಿದ ಈಶ್ವರಪ್ಪ, ಈ ಹಗರಣದ ಹಿನ್ನೆಲೆಯಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್ ಮತ್ತು ಶಾಸಕ ಆರ್.ರೋಷನ್ ಬೇಗ್ ಇಬ್ಬರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಒಂದು ವರ್ಷದ ಹಿಂದೆಯೇ ಐಎಂಎ ಕಂಪೆನಿಯ ಬಗ್ಗೆ ರಿಸರ್ವ್ ಬ್ಯಾಂಕ್, ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ವರದಿ ಕೇಳಿತ್ತು. ಆದರೆ, ರಾಜ್ಯ ಸರಕಾರ ತನಿಖೆ ನಡೆಸಿ, ಐಎಂಎ ಕಂಪೆನಿಗೆ ಕ್ಲೀನ್‌ಚಿಟ್ ನೀಡಿತ್ತು ಎಂದು ದೂರಿದರು.

ಸರಕಾರದ ಪ್ರಮುಖ ವ್ಯಕ್ತಿಗಳ ಜೊತೆಗಿದ್ದ ನಿಕಟ ಸಂಬಂಧವನ್ನು ಪ್ರಚಾರ ಮಾಡಿಕೊಂಡು ಮನ್ಸೂರ್ ಖಾನ್ ಅಮಾಯಕರನ್ನು ನಂಬಿಸಿದ್ದಾರೆ. ಝಮೀರ್ ಅಹ್ಮದ್ ಅವರನ್ನು ಸಂಪುಟದಿಂದ ಕೈ ಬಿಡಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಹಿರಿಯ ಶಾಸಕ ಗೋವಿಂದ ಕಾರಜೋಳ, ಸಂಸದೆ ಶೋಭಾ ಕರಂದ್ಲಾಜೆ ಸೇರಿಸಿದಂತೆ ಇನ್ನಿತರರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News