ರಾಜ್ಯ ಸಚಿವ ಸಂಪುಟ ವಿಸ್ತರಣೆ: ಸಚಿವರಾಗಿ ಇಬ್ಬರು ಪ್ರಮಾಣ ವಚನ

Update: 2019-06-14 13:25 GMT

ಬೆಂಗಳೂರು, ಜೂ.14: ಬಹು ನಿರೀಕ್ಷಿತ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಂಚಿವ ಸಂಪುಟ ವಿಸ್ತರಣೆಯಾಗಿದ್ದು, ರಾಣೆಬೆನ್ನೂರಿನ ಪಕ್ಷೇತರ ಶಾಸಕ ಆರ್.ಶಂಕರ್ ಮತ್ತು ಮುಳಬಾಗಿಲು ಶಾಸಕ ಎಚ್.ನಾಗೇಶ್ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ 1.15ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ರಾಜ್ಯಪಾಲು ವಜುಭಾಯಿ ವಾಲಾ ಸಚಿವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.

ಇದಕ್ಕೂ ಮುನ್ನ ಶಾಸಕರಾದ ಆರ್.ಶಂಕರ್ ಹಾಗೂ ಎಚ್.ನಾಗೇಶ್ ರಾಜಭವನದೆಲ್ಲೆಡೆ ಲಗುಬಗೆಯಿಂದ ಓಡಾಡುತ್ತಾ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸುತ್ತಿದ್ದ ಕಾಂಗ್ರೆಸ್-ಜೆಡಿಎಸ್ ಸಚಿವರು, ಶಾಸಕರು ಹಾಗೂ ತಮ್ಮ ಅಭಿಮಾನಿಗಳನ್ನು ನಗುಮುಖದಿಂದ ಅಪ್ಪಿಕೊಂಡು, ಮಾಧ್ಯಮಗಳ ಮುಂದೆ ಕೈಬೀಸುತ್ತಾ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ನೂತನ ಸಚಿವರು ಒಟ್ಟಾಗಿ ಎರಡು ಕೈಗಳನ್ನೆತ್ತಿ ಛಾಯಾಚಿತ್ರಕಾರರಿಗೆ ಪೋಸ್ ಕೊಡುತ್ತಿದ್ದಾಗ, ಅಲ್ಲಿಯೆ ಇದ್ದ ಕಾಂಗ್ರೆಸ್ ನಾಯಕರೊಬ್ಬರು ಜೋಡೆತ್ತು ಎಂದು ಕೂಗುವ ಮೂಲಕ ತಮಾಷೆ ಮಾಡಿದರು. ನೂತನ ಸಚಿವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಪ್ರಮಾಣ ವಚನದ ಸಂದರ್ಭದಲ್ಲಿ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದರು.

ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್, ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ, ಬಂಡೆಪ್ಪ ಕಾಶೆಂಪೂರ್, ರಹೀಂಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಶಾಸಕರು, ಸಂಸದರು ಉಪಸ್ಥಿತರಿದ್ದರು.

ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಬೆಂಗಳೂರು ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಒಳಗೊಂಡಂತೆ ಹಿರಿಯ ಅಧಿಕಾರಿಗಳಿದ್ದರು.

ಮೂರನೆ ಬಾರಿಗೆ ಸಂಪುಟ ವಿಸ್ತರಣೆ: ಮೈತ್ರಿ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮೇ 23ರಂದು ಪ್ರಮಾಣವಚನ ಸ್ವೀಕರಿಸಿದ ನಂತರ ಒಂದು ವರ್ಷದಲ್ಲಿ 3ನೆ ಬಾರಿಗೆ ಸಚಿವ ಸಂಪುಟ ವಿಸ್ತರಣೆಯಾಗಿದೆ. ಮೊದಲ ಬಾರಿಗೆ ಸಂಪುಟ ವಿಸ್ತರಿಸಿ ಕಾಂಗ್ರೆಸ್‌ನಿಂದ 15ಮತ್ತು ಜೆಡಿಎಸ್‌ನಿಂದ 10 ಶಾಸಕರನ್ನು ಸಚಿವರನ್ನಾಗಿಸಲಾಗಿತ್ತು. ಡಿಸೆಂಬರ್‌ನಲ್ಲಿ ಸಂಪುಟ ಪುನಾರಚಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮೊದಲ ಕಂತಿನಲ್ಲಿ ಸಚಿವರಾಗಿದ್ದ ಪಕ್ಷೇತರ ಶಾಸಕ ಆರ್.ಶಂಕರ್ ಮತ್ತು ಕಾಂಗ್ರೆಸ್‌ನ ರಮೇಶ್ ಜಾರಕಿಹೊಳಿಯನ್ನು ಸಂಪುಟದಿಂದ ಕೈಬ್ಟಿಟ್ಟು ಸತೀಶ್‌ ಜಾರಕಿಹೊಳಿ ಸೇರಿದಂತೆ ಆರು ಮಂದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು.

ಕಳೆದ ಆರು ತಿಂಗಳ ಹಿಂದೆ ಸಚಿವ ಸ್ಥಾನ ಕಳೆದುಕೊಂಡಿದ್ದ ಆರ್.ಶಂಕರ್‌ಗೆ ಪುನಃ ಸಚಿವ ಸ್ಥಾನ ಸಿಕ್ಕಿದೆ. ಅವರೊಂದಿಗೆ ಮೊತ್ತೊಬ್ಬ ಪಕ್ಷೇತರ ಶಾಸಕ ಎಚ್.ನಾಗೇಶ್ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವ ಮೂಲಕ ಮೂರನೆ ಬಾರಿಗೆ ಸಚಿವ ಸಂಪುಟ ವಿಸ್ತರಣೆಯಾಗಿದೆ. 

ಫಾರೂಖ್‌ಗೆ ತಪ್ಪಿದ ಸಚಿವ ಸ್ಥಾನ

ಒಟ್ಟು 34 ಮಂದಿಯ ಸಂಪುಟ ಗಾತ್ರದಲ್ಲಿ ಇಂದಿನ ವಿಸ್ತರಣೆಯ ಮೂಲಕ 33 ಮಂದಿಗೆ ಅವಕಾಶ ಸಿಕ್ಕಿದೆ. ಜೆಡಿಎಸ್ ಪಾಲಿನ ಇನ್ನೂ ಒಂದು ಸ್ಥಾನ ಬಾಕಿ ಉಳಿದಿದೆ. ಬಾಕಿ ಇರುವ ಮೂರೂ ಸ್ಥಾನಗಳಿಗೂ ಸಚಿವರನ್ನು ನೇಮಿಸಬಹುದು ಎಂಬ ನಿರೀಕ್ಷೆಗಳಿದ್ದವು. ಜೆಡಿಎಸ್ ತನ್ನ ಪಾಲಿನ ಎರಡು ಸ್ಥಾನಗಳ ಪೈಕಿ ಒಂದನ್ನು ಪಕ್ಷೇತರ ಶಾಸಕ ನಾಗೇಶ್‌ಗೆ ಕೊಟ್ಟು, ಮತ್ತೊಂದಕ್ಕೆ ಅಲ್ಪಸಂಖ್ಯಾತ ಸಮುದಾಯ ಬಿ.ಎಂ.ಫಾರೂಕ್‌ರನ್ನು ಸಚಿವರನ್ನಾಗಿ ಮಾಡಲು ಕೊನೆಯ ಕ್ಷಣದವರೆಗೆ ಚರ್ಚೆಗಳು ನಡೆದಿದ್ದವು. ಆದರೆ, ಕೇವಲ ಎರಡು ಸ್ಥಾನಗಳಿಗೆ ಮಾತ್ರ ಸಚಿವ ನೇಮಕಾತಿ ಆಗಿದ್ದು, ಜೆಡಿಎಸ್ ಪಾಲಿನ ಒಂದು ಸಚಿವ ಸ್ಥಾನವನ್ನು ಖಾಲಿ ಬಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News