​ಅಮೆರಿಕಕ್ಕೆ ಭಾರತ ಎದುರೇಟು: 29 ವಸ್ತುಗಳ ಕಸ್ಟಮ್ಸ್ ಸುಂಕ ಹೆಚ್ಚಳ

Update: 2019-06-15 03:49 GMT

ಹೊಸದಿಲ್ಲಿ, ಜೂ.15: ಬಾದಾಮಿ, ಅಕ್ರೋಟ್ ಮತ್ತು ಬೇಳೆಕಾಳುಗಳು ಸೇರಿದಂತೆ ಅಮೆರಿಕದಿಂದ ಆಮದಾಗುವ 29 ವಸುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಭಾರತದಿಂದ ಆಮದಾಗುವ ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದ ಅಮೆರಿಕದ ಕ್ರಮಕ್ಕೆ ಪ್ರತಿಯಾಗಿ ಭಾರತ ಒಂದು ವರ್ಷದ ಬಳಿಕ ಈ ನಿರ್ಧಾರಕ್ಕೆ ಬಂದಿದೆ.

ಕೇಂದ್ರ ಹಣಕಾಸು ಸಚಿವಾಲಯ ಶೀಘ್ರವೇ ಈ ಸಂಬಂಧ ಅಧಿಸೂಚನೆ ಹೊರಡಿಸಲಿದ್ದು, ಆಮದು ಸುಂಕ ಹೆಚ್ಚಳ ಜೂನ್ 16ರಿಂದ ಜಾರಿಗೆ ಬರಲಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರನ್ನು ಭೇಟಿ ಮಾಡುವ 10 ದಿನ ಮೊದಲು ಭಾರತದ ಈ ನಿರ್ಧಾರ ಹೊರಬಿದ್ದಿದೆ. ಮೋದಿ ಸರ್ಕಾರ ಎರಡನೇ ಬಾರಿ ಅಧಿಕಾರ ಸೂತ್ರ ಹಿಡಿದ ಬಳಿಕ ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಸಂವಾದ ನಡೆಯುತ್ತಿರುವುದು ಇದೇ ಮೊದಲು. ಭಾರತ ತನ್ನ ನಿರ್ಧಾರದ ಬಗ್ಗೆ ಅಮೆರಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ಉನ್ನತ ಮೂಲಗಳು ದೃಢಪಡಿಸಿವೆ.

ಉಭಯ ದೇಶಗಳು ಪರಸ್ಪರ ಮಾತುಕತೆ ನಡೆಸಿ ಒಂದು ನಿರ್ಣಯಕ್ಕೆ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಭಾರತ ಆಮದು ಸುಂಕ ಹೆಚ್ಚಳವನ್ನು ಮುಂದೂಡುತ್ತಾ ಬಂದಿತ್ತು. ಆದರೆ ಕಳೆದ ವಾರ ಜೈಶಂಕರ್ ಹಾಗೂ ಸಂಪುಟ ಸಹೋದ್ಯೋಗಿಗಳಾದ ಪಿಯೂಶ್ ಗೋಯಲ್ ಮತ್ತು ನಿರ್ಮಲಾ ಸೀತಾರಾಮನ್ ಅವರು ಈ ವ್ಯಾಪಾರ ವ್ಯಾಜ್ಯವನ್ನು ಚರ್ಚಿಸಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ.

ಅಮೆರಿಕದಿಂದ ಆಮದಾಗುವ 29 ವಸ್ತುಗಳ ಮೇಲೆ 235 ದಶಲಕ್ಷ ಡಾಲರ್ ಸುಂಕ ವಿಧಿಸಲು ಭಾರತ ನಿರ್ಧರಿಸಿದೆ. ಭಾರತವು ಅಮೆರಿಕ ಮಾರುಕಟ್ಟೆ ಪ್ರವೇಶಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಈ ತಿಂಗಳ ಆರಂಭದಲ್ಲಿ ಅಮೆರಿಕ ರದ್ದುಪಡಿಸಿತ್ತು. ಇದರಿಂದ ಉಭಯ ದೇಶಗಳ ನಡುವಿನ ವ್ಯಾಪಾರ ವ್ಯಾಜ್ಯ ಬಗೆಹರಿಯುವ ನಿರೀಕ್ಷೆ ಹುಸಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News