ಬಂಗಾಳದಲ್ಲಿ ನೆಲೆಸಲು ಬಂಗಾಳಿ ಮಾತನಾಡಿ: ಸಿಎಂ ಮಮತಾ ಫರ್ಮಾನು

Update: 2019-06-15 03:57 GMT

ಕಂಚ್ರಪಾರ (ಪಶ್ಚಿಮ ಬಂಗಾಳ), ಜೂ.15: ಬಂಗಾಳಿಯೇತರ ಭಾಷೆಗಳನ್ನು ಮಾತನಾಡುವವರ ವಿರುದ್ಧದ ತಮ್ಮ ನಿಲುವನ್ನು ಕಠಿಣಗೊಳಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಬಂಗಾಳದಲ್ಲಿ ನೆಲೆಸಬೇಕಿದ್ದರೆ ಬಂಗಾಳಿ ಮಾತನಾಡುವುದು ಕಡ್ಡಾಯ" ಎಂದು ಹೇಳಿದ್ದಾರೆ.

"ಬಂಗಾಳಿ ಭಾಷೆಯನ್ನು ನಾವು ಮುಂದೆ ತರಬೇಕಾಗಿದೆ" ಎಂದು ಇಲ್ಲಿ ನಡೆದ ತೃಣಮೂಲ ಸಮಾವೇಶದಲ್ಲಿ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

ಕಂಚ್ರಪಾರ ಅತಿಹೆಚ್ಚು ಬಂಗಾಳೇತರ ಭಾಷೆಗಳ ಜನತೆ ಇರುವ ಪ್ರದೇಶವಾಗಿದೆ. "ನಾನು ಬಿಹಾರ, ಉತ್ತರ ಪ್ರದೇಶ, ಪಂಜಾಬ್‌ಗೆ ಹೋದಾಗ ಅವರ ಭಾಷೆ ಮಾತನಾಡುತ್ತೇನೆ. ನೀವು ಬಂಗಾಲದಲ್ಲಿದ್ದೀರಿ ಎಂದಾದ ಮೇಲೆ ಬಂಗಾಳಿ ಮಾತನಾಡಬೇಕು. ಅಪರಾಧಿಗಳು ಬಂಗಾಳದಲ್ಲಿ ನೆಲೆಸಿ, ಮೋಟರ್‌ಸೈಕಲ್‌ಗಳಲ್ಲಿ ಅಡ್ಡಾಡುವುದನ್ನು ನಾನು ಸಹಿಸುವುದಿಲ್ಲ" ಎಂದು ಸಿಎಂ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಬಿಜೆಪಿಯನ್ನು ತಡೆಯುವ ಪ್ರಯತ್ನವಾಗಿ ಬಂಗಾಳಿತನ ಮತ್ತು ಹೊರಗಿನವರು ಎಂಬ ಪ್ರತ್ಯೇಕತೆಯನ್ನು ಮೂಡಿಸಲು ಮಮತಾ ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರ್ಯಾಲಿ ವೇಳೆ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಭಗ್ನಗೊಳಿಸಿದ ಹಿನ್ನೆಲೆಯಲ್ಲಿ ದೀದಿ ಈ ತಂತ್ರಕ್ಕೆ ಮೊರೆಹೋಗಿದ್ದರು. ನಿನ್ನೆಯಷ್ಟೇ ಪ್ರತಿಭಟನಾ ನಿರತ ಕಿರಿಯ ವೈದ್ಯರು ಹೊರಗಿನವರು ಎಂದು ಮಮತಾ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News