ಪ್ರಧಾನಿಯನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ

Update: 2019-06-15 11:52 GMT

ಹೊಸದಿಲ್ಲಿ, ಜೂ. 15: ರಾಜ್ಯದಲ್ಲಿ ಈ ವರ್ಷವೂ ಬರದ ಛಾಯೆ ಇದ್ದು ಶೇ.45ರಷ್ಟು ಮಳೆ ಕೊರತೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕರ್ನಾಟಕ ರಾಜ್ಯದ ನೆರವಿಗೆ ಧಾವಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ಶನಿವಾರ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಪ್ರಧಾನಿಯಾಗಿ ಪುನರಾಯ್ಕೆಯಾಗಿರುವುದಕ್ಕೆ ಅಭಿನಂದಿಸಿದರು. ಇದೇ ವೇಳೆ ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ, ನರೇಗಾ ಬಾಕಿ ಅನುದಾನ ಬಿಡುಗಡೆ ಹಾಗೂ ಸಾಲಮನ್ನಾ ಯೋಜನೆಯ ಯಶಸ್ವಿ ಅನುಷ್ಠಾನದ ಕುರಿತು ಸಮಾಲೋಚನೆ ನಡೆಸಿದರು.

ಉದ್ಯೋಗ ಖಾತರಿ ಯೋಜನೆಯನ್ನು ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ರಾಜ್ಯ ಸರಕಾರ ಕೂಲಿಯ ಬಾಬ್ತು ಪಾವತಿಸಿದ 1,200 ಕೋಟಿ ರೂ.ಮುಂಗಡ ಹಣವೂ ಸೇರಿದಂತೆ ಸುಮಾರು 1,500 ಕೋಟಿ ರೂ.ಅನುದಾನ ಬಾಕಿ ಇದೆ. ಇದನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೋರಿದರು.

ರಾಜ್ಯದಲ್ಲಿ ಸಾಲಮನ್ನಾ ಯೋಜನೆಯನ್ನು ಅತ್ಯಂತ ಯಶಸ್ವಿ, ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗಿದೆ. ರಾಜ್ಯದ ವಾಣಿಜ್ಯ ಬ್ಯಾಂಕುಗಳ 9 ಲಕ್ಷ ಹಾಗೂ ಸಹಕಾರಿ ಬ್ಯಾಂಕುಗಳ 14 ಲಕ್ಷ ಫಲಾನುಭವಿಗಳ ಒಟ್ಟು 12,830 ಕೋಟಿ ರೂ.ಬೆಳೆ ಸಾಲ ಮನ್ನಾಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಪ್ರಧಾನಿಗೆ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News