ಅಮೆರಿಕಾದ ಮರುಭೂಮಿಯಲ್ಲಿ ಬಿಸಿಲಿನ ಧಗೆಗೆ 6 ವರ್ಷದ ಭಾರತೀಯ ಬಾಲಕಿ ಮೃತ್ಯು

Update: 2019-06-15 08:09 GMT

ನ್ಯೂಯಾರ್ಕ್, ಜೂ.15: ವಲಸಿಗ ಭಾರತೀಯ ಕುಟುಂಬದ 6 ವರ್ಷದ ಬಾಲಕಿಯೊಬ್ಬಳ ತಾಯಿ ಆಕೆಗಾಗಿ ಮರುಭೂಮಿಯಲ್ಲಿ ನೀರನ್ನು ಹುಡುಕಿಕೊಂಡು ಹೋಗಿದ್ದ ವೇಳೆ ಬಾಲಕಿ ವಿಪರೀತ ಬಿಸಿಲಿನ ಧಗೆ ತಾಳಲಾರದೆ ಮೃತಪಟ್ಟ ಘಟನೆ ನಡೆದಿದೆ.

ಬಾಲಕಿ ಗುರುಪ್ರೀತ್ ಕೌರ್ ಇನ್ನು ಕೆಲವೇ ದಿನಗಳಲ್ಲಿ ತನ್ನ ಏಳನೇ ಹುಟ್ಟುಹಬ್ಬ ಆಚರಿಸಲಿದ್ದಳು. ಆಕೆಯ ಮೃತದೇಹವನ್ನು ಅಮೆರಿಕಾದ ಗಡಿ ಗಸ್ತು ತಂಡ ಅರಿಝೋನಾದ ಲೂಕೆವಿಲ್ಲೆ ಎಂಬಲ್ಲಿ ಬುಧವಾರ ಪತ್ತೆ ಹಚ್ಚಿತ್ತು. ಈ ಸ್ಥಳದಲ್ಲಿ ಆ ಸಂದರ್ಭ ಶಾಖ 42 ಡಿಗ್ರಿ ಸೆಲ್ಸಿಯಸ್ ನಷ್ಟು ತಲುಪಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಿಝೋನಾದ ದಕ್ಷಿಣ ಮರುಭೂಮಿಯಲ್ಲಿ ಬಾಲಕಿ  ಅತಿಯಾದ ಶಾಖದಿಂದುಂಟಾದ ಹೈಪರ್‍ ಥರ್ಮಿಯಾದಿಂದ ಸಾವನ್ನಪ್ಪಿದ್ದಾಳೆಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸೆಂಟ್ರಲ್ ಅಮೆರಿಕಾದಿಂದ ಅಮೆರಿಕಾ-ಮೆಕ್ಸಿಕೋ ಗಡಿ ದಾಟಿ ಆಶ್ರಯ ಪಡೆಯಲು ಆಗಮಿಸುತ್ತಿರುವ ವಲಸಿಗ ಕುಟುಂಬಗಳಲ್ಲಿ ಮಕ್ಕಳು ಸಾವನ್ನಪ್ಪಿದ ಎರಡನೇ ಪ್ರಕರಣ ಇದಾಗಿದೆ.

ಮಂಗಳವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಈ ಗಡಿ ಪ್ರದೇಶದಲ್ಲಿ  ಕೆಲ ಸ್ಮಗ್ಲರುಗಳು ಬಿಟ್ಟು ಹೋದ ಐದು ಮಂದಿ ಭಾರತೀಯ ಸಂಜಾತರಲ್ಲಿ ಬಾಲಕಿ ಮತ್ತಾಕೆಯ ತಾಯಿ ಸೇರಿದ್ದರು. ಸ್ವಲ್ಪ ಹೊತ್ತು ನಡೆದ ನಂತರ ಬಾಲಕಿಯ ತಾಯಿ ಹಾಗೂ ಇನ್ನೊಬ್ಬ  ಮಹಿಳೆ ನೀರನ್ನು ಹುಡುಕುತ್ತಾ ಹೊರಟಿದ್ದರು. ಈ ಸಂದರ್ಭ ಬಾಲಕಿಯು ಇನ್ನೊಬ್ಬ ಮಹಿಳೆ ಮತ್ತಾಕೆಯ ಮಗುವಿನ ಜತೆಗಿದ್ದಳು.

 ನೀರು ಹುಡುಕಿಕೊಂಡು ಹೋದ ಇಬ್ಬರು ಮಹಿಳೆಯರನ್ನು ಗಡಿ ಭದ್ರತಾ ಸಿಬ್ಬಂದಿಯೊಬ್ಬರು ಪತ್ತೆ ಹಚ್ಚಿದ ನಂತರ ಇಂಗ್ಲಿಷ್ ತಿಳಿಯದ ಆ ಬಾಲಕಿಯ ತಾಯಿ  ತನ್ನ ಮಗಳು ಹಾಗೂ ಮತ್ತಿಬ್ಬರು ಕಾಣುತ್ತಿಲ್ಲ ಎಂದು ಸಂಜ್ಞೆ ಭಾಷೆಯ ಮೂಲಕ ಹೇಳಿದ್ದಳು. ಇದಾದ ಕೆಲ ಗಂಟೆಗಳ  ನಂತರ ಬಾಲಕಿಯ ಮೃತದೇಹ ಗಡಿಯಿಂದ ಒಂದು ಮೈಲು ದೂರದಲ್ಲಿ ಪತ್ತೆಯಾಗಿತ್ತು.

ಬಾಲಕಿಯ ಜತೆಗಿದ್ದ ಇನ್ನೊಬ್ಬ ಮಹಿಳೆ ಮತ್ತಾಕೆಯ ಎಂಟು ವರ್ಷದ ಪುತ್ರಿ ನಂತರ ಅಮೆರಿಕಾ ಅಧಿಕಾರಿಗಳಿಗೆ ಶರಣಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News