ರೈತರ ವಿಚಾರದಲ್ಲೂ ಕೋಮು ಪ್ರಚೋದನಾ ಮನೋಭಾವ ಪ್ರದರ್ಶಿಸಬೇಡಿ: ಸಂಸದೆ ಶೋಭಾರಿಗೆ ಕಿಸಾನ್ ಕಾಂಗ್ರೆಸ್ ಕಿವಿಮಾತು

Update: 2019-06-15 13:59 GMT

ಬೆಂಗಳೂರು, ಜೂ.15: ‘ರೈತರ ಸಾಲಮ್ನನಾ ಆಗಿಲ್ಲ’ ಎಂದು ನಗರದ ಆನಂದ ರಾವ್ ವೃತ್ತದಲ್ಲಿ ಕಿರುಚಿದರೆ ಪ್ರಯೋಜನವಿಲ್ಲ. ಅದರ ಬದಲು ಸ್ವಲ್ಪ ಬಿಡುವು ಮಾಡಿಕೊಂಡು ಬ್ಯಾಂಕ್ ಬಳಿ ಹೋಗಿ ಅಥವಾ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ. ಆದರ ರೈತರ ಎಷ್ಟು ಮೊತ್ತ ಮನ್ನಾ ಆಗಿದೆ ಎಂದು ತಿಳಿಯಲಿದೆ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಅವರು ಸಂಸದೆ ಶೋಭಾ ಕರಂದ್ಲಾಜೆಗೆ ತಿರುಗೇಟು ನೀಡಿದ್ದಾರೆ.

 ರಾಜ್ಯ ಸರಕಾರದ ವಿರುದ್ಧ ಬೆಂಗಳೂರಿನ ಆನಂದರಾವ್ ಸರ್ಕಲ್‌ನಲ್ಲಿ ಬಿಜೆಪಿ ನಡೆಸುತ್ತಿರುವ ಧರಣಿಯನ್ನುದ್ದೇಶಿಸಿ ಶುಕ್ರವಾರ ಸಂಸದೆ ಶೋಭಾ ಕರಂದ್ಲಾಜೆ, ‘‘ರಾಜ್ಯದ ಒಬ್ಬ ರೈತನ ಸಾಲ ಕೂಡಾ ಮನ್ನಾ ಆಗಿಲ್ಲ’’ ಎಂದು ಹೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ಸಚಿನ್ ಮೀಗಾ, ಕರಾವಳಿ, ಮಲೆನಾಡು ಭಾಗದಲ್ಲಿ ಹೆಣಗಳನ್ನು ಮುಂದಿಟ್ಟು ಕೋಮು ಸಂಘರ್ಷಕ್ಕೆ ಭಾವನಾತ್ಮಕ ಪ್ರಚೋದನೆ ನೀಡುವ ನಿಮ್ಮ ಮನೋಭಾವವನ್ನು ರೈತರ ವಿಚಾರದಲ್ಲಿ ಪ್ರದರ್ಶನ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ನೀವು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಯಾವೊಬ್ಬ ರೈತನ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿದ ಉದಾಹರಣೆ ಇಲ್ಲ. ಇನ್ನಾದರೂ ಇಂತಹ ಡೊಂಬರಾಟದ ಹಾಗೂ ಪ್ರಚೋದನೆ ನೀಡುವ ಹೇಳಿಕೆಗಳನ್ನು ಬಿಟ್ಟು ರೈತರಿಗೆ ನೆರವಾಗಲು ಮುಂದಾಗಿ ಎಂದು ಶೋಭಾ ಕರಂದ್ಲಾಜೆಗೆ ಸಚಿನ್ ಮೀಗಾ ಹೇಳಿಕೆಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News