ಅಮಾಯಕರಿಗೆ ಹಣ ವಾಪಸ್ ಕೊಡಿಸುವುದು ಬಿಜೆಪಿ ಜವಾಬ್ದಾರಿ: ಬಿ.ಎಸ್.ಯಡಿಯೂರಪ್ಪ

Update: 2019-06-15 13:23 GMT

ಬೆಂಗಳೂರು, ಜೂ.15: ಐಎಂಎ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಖಾನ್‌ನಿಂದ ಅಮಾಯಕರಿಗೆ ಆಗಿರುವ ಅನ್ಯಾಯಕ್ಕೆ ಸ್ಪಂದಿಸುವ ಸಲುವಾಗಿ ಬಿಜೆಪಿ ಸಂಸದರು ಕೇಂದ್ರ ಸರಕಾರದ ಮಧ್ಯಸ್ಥಿಕೆಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಶನಿವಾರ ನಗರದ ಆನಂದರಾವ್ ವೃತ್ತದಲ್ಲಿ ಸರಕಾರದ ವಿರುದ್ಧ ಧರಣಿ ನಿರತವಾಗಿರುವ ಅವರನ್ನು ಭೇಟಿ ಮಾಡಿ ಐಎಂಎ ಸಂಸ್ಥೆಯ ಸಂತ್ರಸ್ತರ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದರು. 'ಜಾರಿ ನಿರ್ದೇಶನಾಲಯದ ಮೂಲಕವೂ ಈ ಹಗರಣದ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಹಣ ಕಳೆದುಕೊಂಡ ಅಮಾಯಕರಿಗೆ ಹಣ ವಾಪಸ್ ಕೊಡಿಸುವುದು ಬಿಜೆಪಿ ಜವಾಬ್ದಾರಿ ಎಂದು ಭಾವಿಸಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ಮನ್ಸೂರ್ ಖಾನ್ ಎಲ್ಲಿದ್ದರೂ ಸರಿ, ಆತನನ್ನು ಪತ್ತೆ ಹಚ್ಚಲು ಕೇಂದ್ರ ಸರಕಾರ ಕ್ರಮ ಜರುಗಿಸಲಿದೆ. ಈ ಪ್ರಕರಣದ ಕುರಿತು ಸಿಬಿಐ ತನಿಖೆಯಿಂದ ಮಾತ್ರ ಅಮಾಯಕರಿಗೆ ನ್ಯಾಯ ಸಿಗಲು ಸಾಧ್ಯ ಎಂದು ಯಡಿಯೂರಪ್ಪ ಹೇಳಿದರು.

ಸರಕಾರ ಇಂತಹ ವಂಚನೆ ಮಾಡುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ 2019ರ ಫೆಬ್ರವರಿಯಲ್ಲೇ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಆದರೆ, ರಾಜ್ಯ ಸರಕಾರ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳಲಿಲ್ಲ. ಈಗಿನ ಅನ್ಯಾಯಕ್ಕೆ ರಾಜ್ಯ ಸರಕಾರವೇ ಕಾರಣ ಎಂದು ಅವರು ವಾಗ್ದಾಳಿ ನಡೆಸಿದರು.

ಸಿಬಿಐ ತನಿಖೆಗೆ ಸಂತ್ರಸ್ತರ ಮನವಿ: ಮನ್ಸೂರ್ ಖಾನ್ ಐಎಂಎ ಸಂಸ್ಥೆಯಲ್ಲಿ ಹಣ ಹೂಡಿದವರಿಗೆ ಶೇ.7ರಷ್ಟು ಬಡ್ಡಿ ಕೊಡುತ್ತೇನೆಂದು ಪವಿತ್ರ ಗ್ರಂಥ ಕುರ್‌ಆನ್ ಮೇಲೆ ಪ್ರಮಾಣ ಮಾಡಿ ನಂಬಿಸಿ, ನಮ್ಮಿಂದ ಹಾಗೂ ನಮ್ಮಂತಹ ಲಕ್ಷಾಂತರ ಸಾರ್ವಜನಿಕರಿಂದ ಕೋಟ್ಯಂತರ ರೂ.ವಸೂಲಿ ಮಾಡಿದ್ದಾರೆ ಎಂದು ಸಂತ್ರಸ್ತರು, ಯಡಿಯೂರಪ್ಪಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಕೆಲವು ದಿನಗಳ ನಂತರ ಆತ ನೀಡುತ್ತಿದ್ದ ಬಡ್ಡಿ ದರವನ್ನು ಶೇ.7ರಿಂದ ಶೇ.5, ಆನಂತರ ಶೇ.5ರಿಂದ ಶೇ.3ಕ್ಕೆ, ಬಳಿಕ ಶೇ.3ರಿಂದ ಶೇ.2, ಶೇ.2 ರಿಂದ ಶೇ.0 ಗೆ ಇಳಿಸಿ, ನಮ್ಮ ಹಣವನ್ನು ದೋಚಿಕೊಂಡು, ಕುಟುಂಬ ಸಮೇತ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಮನ್ಸೂರ್ ಖಾನ್ ವಿರುದ್ಧ ಈವರೆಗೆ 30 ಸಾವಿರ ದೂರುಗಳು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಸುಮಾರು 2 ಲಕ್ಷ ಜನರಿಗೆ ನಂಬಿಸಿ, ಪ್ರತಿಯೊಬ್ಬರಿಂದ ಕನಿಷ್ಠ 1 ಲಕ್ಷ ರೂ.ಗಳಿಂದ 50 ಲಕ್ಷ ರೂ.ವರೆಗೆ ಹಣ ಪಡೆದುಕೊಂಡಿದ್ದಾನೆ. ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸುಮಾರು 15 ಸಾವಿರ ಕೋಟಿ ರೂ.ಗಳನ್ನು ಶೇಖರಿಸಿ, ವಂಚಿಸಿ, ಪರಾರಿಯಾಗಿದ್ದಾನೆ ಎಂದು ಅವರು ದೂರಿದ್ದಾರೆ.

ಮನ್ಸೂರ್ ಖಾನ್ ಮತ್ತು ಈತನ ಸಂಸ್ಥೆಗೆ ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್ ಸಹಾಯ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ಹಾಗೂ ದಾಖಲಾತಿಗಳನ್ನು ಗಮನಿಸಿದಾಗ ತಿಳಿದು ಬರುತ್ತದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಅಲ್ಲದೇ, ಪ್ರಭಾವಿ ರಾಜಕಾರಣಿಗಳು, ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಧರ್ಮಗುರುಗಳು ಸಹ ಮನ್ಸೂರ್ ಖಾನ್‌ಗೆ ಪ್ರೋತ್ಸಾಹ ನೀಡಿ, ಅವರು ವಂಚಿಸಿ ಗಳಿಸಿದ ಹಣದಲ್ಲಿ ಪಾಲು ಪಡೆದಿದ್ದಾರೆ. ಕೋಟಿಗಟ್ಟಲೆ ಹಣವನ್ನು ಆತ ವಿದೇಶಕ್ಕೆ ಸಾಗಿಸಿದ್ದಾನೆ ಎಂಬ ಮಾಹಿತಿಯೂ ಸಿಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಹಗರಣದ ನ್ಯಾಯಯುತ ತನಿಖೆಯು ರಾಜ್ಯ ಸರಕಾರ ನೇಮಿಸಿರುವ ಎಸ್‌ಐಟಿಯಿಂದ ಸಾಧ್ಯವಿಲ್ಲ. ಆದುದರಿಂದ, ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಸಂತ್ರಸ್ತರು, ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ.

ಸುಮಾರು 15 ಸಾವಿರ ಕೋಟಿ ರೂ.ಗಳ ಈ ಹಗರಣವನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ಎಂದು ಪರಿಗಣಿಸಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೆ ಒತ್ತಡ ತಂದು ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಸಂತ್ರಸ್ತರು ಕೋರಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಝೀಮ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News