ಐಎಂಎ ವಂಚನೆ ಪ್ರಕರಣ: ಸೂಕ್ತ ತನಿಖೆಗೆ ಆಗ್ರಹಿಸಿ ಧರಣಿ

Update: 2019-06-15 14:37 GMT

ಬೆಂಗಳೂರು, ಜೂ.15: ಐಎಂಎ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಕಂಪನಿಗೆ ಸೇರಿರುವ ಆಸ್ತಿಗಳ ಜಪ್ತಿ ವಿವರ ಬಹಿರಂಗಪಡಿಸಬೇಕು ಹಾಗೂ ಶೀಘ್ರ ತನಿಖೆ ನಡೆಸಿ ಸೂಕ್ತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಇಂದಿಲ್ಲಿ ಧರಣಿ ನಡೆಸಿತು.

ನಗರದ ಪುರಭವನದ ಎದುರು ಪ್ರತಿಭಟನಾ ಧರಣಿ ನಡೆಸಿದ ವೇದಿಕೆಯ ನೂರಾರು ಕಾರ್ಯಕರ್ತರು, ಐಎಂಎ ಮಾಲಕ ಅಮಾಯಕ ಜನರನ್ನು ವಂಚಿಸಿ ಪರಾರಿಯಾಗಿದ್ದಾನೆ. ಈ ಸಂಬಂಧ ಎಲ್ಲೆಡೆ ದೂರುಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ವಿಶೇಷ ತನಿಖಾ ದಳದಿಂದ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಇದುವರೆಗೂ ಜಪ್ತಿ ಮಾಡಿರುವ ಆಸ್ತಿಗಳ ವಿವರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ, ಅಮಾಯಕ ಜನರನ್ನು ವಂಚಿಸಿ, ಕೋಟ್ಯಂತರ ರೂ.ಗಳನ್ನು ಕಬಳಿಸಿ ಪರಾರಿಯಾಗಿದ್ದಾರೆ. ಆದರೆ, ಸರಕಾರ ಈ ಕುರಿತು ಗಂಭೀರವಾದ ತನಿಖೆ ನಡೆಸಲು ಮುಂದಾಗುತ್ತಿಲ್ಲ. ಈ ಹಿಂದೆ ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿಯೂ ಸರಿಯಾದ ತನಿಖೆ ನಡೆಸುವಲ್ಲಿ ವಿಫಲವಾಗಿದ್ದಾರೆ ಎಂದರು.

ಐಎಂಎ ಕಚೇರಿ ಎದುರು ಪೊಲೀಸರು ಪಡೆಯುತ್ತಿರುವ ದೂರುಗಳು ಕೇವಲ ಕಾಲ್ಪನಿಕ. ಅದರಿಂದ ಏನೂ ಪ್ರಯೋಜನವಿಲ್ಲ. ದೂರು ಪಡೆದು, ಅವುಗಳನ್ನು ಬಿಸಾಡಲಾಗುತ್ತದೆ ಎಂದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್, ಶಾಸಕ ರೋಷನ್ ಬೇಗ್‌ರನ್ನು ಹಣ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಆದರೆ, ಅವರ್ಯಾರು ಹಣ ನೀಡಲ್ಲ. ಆ ಸಂಸ್ಥೆಗೆ ಸಂಬಂಧಿಸಿದ ಆಸ್ತಿಗಳನ್ನು ಜಪ್ತಿ ಮಾಡಿ ಹಣ ನೀಡಬೇಕು ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ದೊಡ್ಡ ಮಟ್ಟದಲ್ಲಿ ಇಂಟಿಲಿಜೆನ್ಸಿ ಸಂಪರ್ಕವಿದೆ. ಆದರೂ, ವಂಚಕ ಕಂಪನಿಗಳು ಏನು ಮಾಡುತ್ತಿವೆ ಎಂಬುದರ ಕುರಿತು ಸ್ಪಷ್ಟವಾದ ವರದಿ ನೀಡಿಲ್ಲ. ಇನ್ನು ಎಸ್‌ಐಟಿ ಅನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ಬೇರೆ ಬೇರೆ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸಮಿತಿಯಲ್ಲಿರುತ್ತಾರೆ. ಅರ್ಧದಷ್ಟು ಕೆಲಸ ಮುಗಿಯುವ ವೇಳೆಗೆ ತಮ್ಮ ಮಾತೃ ಇಲಾಖೆಗೆ ಮರಳಬೇಕಾದ್ದರಿಂದ ಅರ್ಧದಲ್ಲಿಯೇ ಈ ತನಿಖೆ ಕೈ ಬಿಡಲಾಗುತ್ತದೆ ಎಂದು ತಿಳಿಸಿದರು.

ಐಎಂಎ ಕಂಪನಿಯ ವಂಚನೆಯ ವಿರುದ್ಧ ಸೂಕ್ತ ತನಿಖೆ ಮಾಡಬೇಕು. ಕಂಪನಿಯ ಹಿಂದಿ ಯಾರಿದ್ದಾರೆ, ಏನ್ ಮಾಡ್ತಿದ್ದಾರೆ ಎಂಬ ಅಂಶಗಳನ್ನು ಬಯಲು ಮಾಡಬೇಕು. ಅಲ್ಲದೆ, ಈ ಕಂಪನಿಯೊಂದಿಗೆ ಸಂಬಂಧವಿರುವ ಎಲ್ಲರ ಆಸ್ತಿ-ಪಾಸ್ತಿಗಳನ್ನು ಜಪ್ತಿ ಮಾಡಬೇಕು. ಅಂತಹವರ ಎಲ್ಲ ವ್ಯವಹಾರಗಳನ್ನು ತನಿಖೆ ನಡೆಸಿ, ಮುಚ್ಚಿಸಬೇಕು ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News