ಬ್ಯಾಂಕ್ ಗಳಿಂದ 600 ಕೋಟಿ ರೂ.ಸಾಲ ಪಡೆಯಲು ಮನ್ಸೂರ್ ಖಾನ್ ಯತ್ನ?

Update: 2019-06-15 15:25 GMT

ಬೆಂಗಳೂರು, ಜೂ.15: ಐಎಂಎ ಸಮೂಹ ಸಂಸ್ಥೆಗಳ ಅಧ್ಯಕ್ಷ ಮನ್ಸೂರ್ ಖಾನ್ ವಿರುದ್ಧದ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಮುಂದುವರೆಯುತ್ತಿರುವಾಗಲೇ, ಬ್ಯಾಂಕ್ ಗಳಿಂದ 600 ಕೋಟಿ ರೂ.ಸಾಲ ಪಡೆಯಲು ಯತ್ನಿಸಿದ ಮಾಹಿತಿಯೊಂದು ಹೊರ ಬಿದ್ದಿದೆ.

ಮನ್ಸೂರ್ ಖಾನ್ ತನ್ನ ಐಎಂಎ ಸಂಸ್ಥೆ ಎದುರಿಸುತ್ತಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಸಚಿವರೊಬ್ಬರ ವಿಶ್ವಾಸ ಗಳಿಸಿಕೊಂಡು, ಬ್ಯಾಂಕ್‌ನಿಂದ 600 ಕೋಟಿ ರೂ.ಸಾಲ ಪಡೆಯಲು ಪ್ರಯತ್ನಗಳನ್ನು ನಡೆಸಿದ್ದ ಎನ್ನಲಾಗಿದೆ. ಆದರೆ, ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಸಮಯ ಪ್ರಜ್ಞೆಯಿಂದಾಗಿ ಆತನ ಪ್ರಯತ್ನ ಕೈಗೂಡಲಿಲ್ಲ ಎಂದು ತಿಳಿದು ಬಂದಿದೆ.

ಸಾಲ ಪಡೆಯಲು ಮನ್ಸೂರ್ ಖಾನ್ ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಿದ್ದ. ಆದರೆ, ಈತನ ವ್ಯವಹಾರಗಳ ಬಗ್ಗೆ ಆರ್‌ಬಿಐನಿಂದ ಎಲ್ಲ ಬ್ಯಾಂಕುಗಳಿಗೆ ಬಂದಿದ್ದ ಮಾಹಿತಿಯಿಂದಾಗಿ ಬ್ಯಾಂಕುಗಳು ಈತನಗೆ ಸಾಲ ಕೊಡಲು ಹಿಂದೇಟು ಹಾಕಿವೆ. ರಾಜ್ಯ ಸರಕಾರದಿಂದ ಎನ್‌ಓಸಿ(ನಿರಾಪೇಕ್ಷಣಾ ಪತ್ರ) ತಂದು ಕೊಟ್ಟಲ್ಲಿ ಸಾಲ ನೀಡಬಹುದು ಎಂದು ತಿಳಿಸಿವೆ.

ಸರಕಾರದಿಂದ ಎನ್‌ಓಸಿ ಪಡೆಯಲು ಪ್ರಭಾವಿ ಸಚಿವರು, ರಾಜಕಾರಣಿಗಳ ಸಂಪರ್ಕ ಸಾಧಿಸಿ, ಸಾಲ ಪಡೆಯಲು ಮನ್ಸೂರ್ ಖಾನ್ ಶತಪ್ರಯತ್ನ ನಡೆಸಿದ್ದ. ಈತನ ಮಾತುಗಳಿಗೆ ಮರುಳಾದ ಹಿರಿಯ ಸಚಿವರು, ಐಎಎಸ್ ಅಧಿಕಾರಿಯೊಬ್ಬರಿಗೆ ಎನ್‌ಓಸಿ ಕೊಡುವಂತೆ ಸೂಚನೆಯನ್ನು ಕೊಟ್ಟಿದ್ದರು ಎನ್ನಲಾಗಿದೆ. ಆದರೆ, ಐಎಂಎ ಸಂಸ್ಥೆಯ ವ್ಯವಹಾರಗಳ ಬಗ್ಗೆ ಅನುಮಾನ ಹೊಂದಿದ್ದ ಐಎಎಸ್ ಅಧಿಕಾರಿ, ದಾಖಲಾತಿಗಳನ್ನು ಪರಿಶೀಲಿಸಿ ಎನ್‌ಓಸಿ ಕೊಡಲು ಸಾಧ್ಯವಿಲ್ಲ ಎಂದು ಸಚಿವರಿಗೆ ಮನದಟ್ಟು ಮಾಡಿದ್ದರು. ಒಂದು ವೇಳೆ ಈತನಿಗೆ ಎನ್‌ಓಸಿ ಕೊಟ್ಟರೆ ನಾನು ಜೈಲಿಗೆ ಹೋಗುವುದಲ್ಲದೆ, ನೀವು ಕೂಡ ತುಂಬಾ ದೊಡ್ಡ ತೊಂದರೆಯಲ್ಲಿ ಸಿಲುಕುವ ಸಾಧ್ಯತೆಯಿದೆ ಹೇಳಿದ ಹಿನ್ನೆಲೆಯಲ್ಲಿ, ಸಚಿವರು ಎನ್‌ಓಸಿ ಕೊಡುವ ವಿಚಾರವನ್ನು ಕೈ ಬಿಟ್ಟರು ಎಂದು ಹೇಳಲಾಗುತ್ತಿದೆ.

ಜಾರಿ ನಿರ್ದೇಶನಾಲಯ ತನಿಖೆ: ಐಎಂಎ ಸಂಸ್ಥೆಯಲ್ಲಿ ಫೆಮಾ ಹಾಗೂ ಎಫ್‌ಇಆರ್‌ಎ ಹಾಗೂ ಪಿಎಂಎಲ್‌ಎ ಸೇರಿದಂತೆ ಇನ್ನಿತರ ಕಾಯ್ದೆಗಳನ್ನು ಉಲ್ಲಂಘಿಸಿ ವಿದೇಶಿ ಬಂಡವಾಳ ಹೂಡಿಕೆಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ಶುಕ್ರವಾರ ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ಐಎಂಎ ವಿರುದ್ಧ ದಾಖಲಾಗಿರುವ ದೂರುಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ.

ಎಸ್‌ಐಟಿ ದಾಳಿ: ಐಎಂಎ ವಂಚನೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಶಿವಾಜಿನಗರ, ಫ್ರೇಜರ್ ಟೌನ್, ಕೆ.ಆರ್.ಪುರ, ಇಂದಿರಾನಗರ ಸೇರಿದಂತೆ ಹಲವೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಇದೇ ವೇಳೆ ಎಸ್‌ಐಟಿ ವಶದಲ್ಲಿರುವ ಐಎಂಎ ನಿರ್ದೇಶಕರ ನಿವಾಸಗಳ ಮೇಲೂ ದಾಳಿ ನಡೆಸಿದ ಅಧಿಕಾರಿಗಳು, ಆರೋಪಿಗಳ ಸ್ವ ಇಚ್ಛೆ ಹೇಳಿಕೆಗಳು ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News