ಬೆಂಗಳೂರಿನ ತನ್ನ ಮನೆಯಲ್ಲಿ ನಡೆಯಲಿದ್ದ ದರೋಡೆಯನ್ನು ಅಮೆರಿಕದಿಂದಲೇ ತಡೆದ ಮಾಲಕ!

Update: 2019-06-15 15:29 GMT

ಬೆಂಗಳೂರು, ಜೂ.15: ನಗರದ ನಾಗವಾರದ ಬಳಿಯ ಮಾನ್ಯತಾ ಟೆಕ್‌ಪಾರ್ಕ್‌ನ ಮನೆಯೊಂದರಲ್ಲಿ ಬೆಳಗಿನ ವೇಳೆ ದರೋಡೆಯ ಪ್ರಯತ್ನವನ್ನು ಅಮೆರಿಕದಿಂದಲೇ ಮನೆ ಮಾಲಕ ತಡೆದ ಘಟನೆ ನಡೆದಿದೆ.

ಅಮೆರಿಕದಲ್ಲಿ ನೆಲೆಸಿರುವ ಪಾರ್ಥಸಾರಥಿ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿತ್ತು. ಇಬ್ಬರು ಕಳ್ಳರು ಮನೆಯ ಆವರಣದೊಳಗೆ ಆಗಮಿಸುತ್ತಿದ್ದಂತೆ ಅಮೆರಿಕದಲ್ಲಿದ್ದ ಪಾರ್ಥಸಾರಥಿ ಅವರ ಮೊಬೈಲ್‌ಗೆ ಅಲರ್ಟ್ ರಿಂಗ್ ಬಂದಿದೆ. ತಮ್ಮ ಮನೆಯ ಮೇಲೆ ದಾಳಿ ನಡೆಯುತ್ತಿದೆ ಎಂಬ ಎಚ್ಚರಿಕೆ ಗಂಟೆಗೆ ಎಚ್ಚೆತ್ತ ಪಾರ್ಥಸಾರಥಿ ಸಿಸಿಟಿವಿಯನ್ನು ಚಾಲೂ ಮಾಡಿ ನೋಡಿದ್ದಾರೆ. ದರೋಡೆಕೋರರು ಮನೆಯೊಳಗೆ ಬಂದಿರುವುದನ್ನು ಖಾತರಿ ಪಡಿಸಿಕೊಂಡ ಪಾರ್ಥಸಾರಥಿ ತಕ್ಷಣ ನೆರೆ ಮನೆಯ ಸ್ನೇಹಿತರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲೂ ತಮ್ಮ ಮನೆಗೆ ದರೋಡೆಕೋರರು ಬಂದಿರುವ ಬಗ್ಗೆ ಅಲರ್ಟ್ ಮಾಡಿದ್ದಾರೆ.

ಆಗ ನೆರೆಮನೆಯವರೊಬ್ಬರು ಪೊಲೀಸರಿಗೆ ಫೋನ್ ಮಾಡಿ ದರೋಡೆ ನಡೆಯುತ್ತಿರುವ ವಿಚಾರ ತಿಳಿಸಿದ್ದಾರೆ. ನೋಡನೋಡುತ್ತಿದ್ದಂತೆ ಎರಡು ಹೊಯ್ಸಳ ಗಾಡಿಯಲ್ಲಿ 8 ಪೊಲೀಸರ ತಂಡ ಆಗಮಿಸಿದೆ. ಕಳ್ಳರಿಬ್ಬರು ಮನೆಯೊಳಗೆ ಇರುವುದು ಖಾತರಿಯಾಗುತ್ತಿದ್ದಂತೆ ಪೊಲೀಸರು ಮತ್ತು ನೆರೆಮನೆಯವರು ಮನೆಯ ಸುತ್ತಲೂ ಸುತ್ತುವರಿದಿದ್ದಾರೆ.

ಪೊಲೀಸರು ಬಂದ ಕೂಡಲೇ ಒಬ್ಬ ಕಳ್ಳ ದಿಲೀಪ್ ಟೆರೇಸ್‌ನಿಂದ ಹಾರಿ ತಪ್ಪಿಸಿಕೊಂಡಿದ್ದಾನೆ. ಕಬ್ಬಿಣದ ರಾಡ್ ಹಿಡಿದುಕೊಂಡಿದ್ದ ದಿಲೀಪ್‌ನನ್ನು ತಡೆಯಲು ಯಾರಿಗೂ ಸಾಧ್ಯವಾಗಿಲ್ಲ. ನಾಯಿಗಳ ಸಹಾಯದಿಂದ ಸುಮಾರು 1 ಕಿ.ಮೀ.ವರೆಗೆ ಬೆನ್ನಟ್ಟಿದ್ದರೂ ಯಾವುದೇ ಉಪಯೋಗವಾಗಿಲ್ಲ. ಇತ್ತ ಮತ್ತೊಬ್ಬ ಕಳ್ಳ ರಾಜ್‌ಕುಮಾರ್ ಮನೆಯೊಳಗೆ ಸಿಕ್ಕಿಕೊಂಡಿದ್ದಾನೆ. ಮಹಡಿಯಲ್ಲಿ ಕಳ್ಳರು ಒಡೆದಿದ್ದ ಬಾಗಿಲಿನ ಮೂಲಕ ಒಳಗೆ ನುಸುಳಿದ ಪೊಲೀಸರು ಕುರ್ಚಿ ಕೆಳಗೆ ಅಡಗಿ ಕುಳಿತಿದ್ದ ರಾಜ್‌ಕುಮಾರ್‌ನನ್ನು ಬಂಧಿಸಿದ್ದಾರೆ.

ಕಳೆದ ವಾರವಷ್ಟೇ ನೇಪಾಳದಿಂದ ಬೆಂಗಳೂರಿಗೆ ಆಗಮಿಸಿದ್ದು, ಇದೇ ಮೊದಲ ದರೋಡೆ ಪ್ರಯತ್ನ ಎಂದು ರಾಜ್‌ಕುಮಾರ್ ಪೊಲೀಸರಿಗೆ ತಿಳಿಸಿದ್ದಾನೆ. ತಪ್ಪಿಸಿಕೊಂಡಿರುವ ದಿಲೀಪ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News