ಚಿತ್ರರಂಗದ ಕುಟುಂಬ ಪರಿಕಲ್ಪನೆಯನ್ನು ಚಿನ್ನೇಗೌಡ ಮುಂದುವರೆಸಿದ್ದಾರೆ: ನಾಗತಿಹಳ್ಳಿ ಚಂದ್ರಶೇಖರ್

Update: 2019-06-15 16:26 GMT

ಬೆಂಗಳೂರು, ಜೂ.15: ಇಡೀ ಕನ್ನಡ ಚಲನಚಿತ್ರ ರಂಗವೇ ಒಂದು ಕುಟುಂಬವಿದ್ದಂತೆ ಎಂಬ ಪರಿಕಲ್ಪನೆಯನ್ನು ರೂಪಿಸಿದ ಪಾರ್ವತಮ್ಮ ರಾಜ್‌ಕುಮಾರ್ ಆಶಯವನ್ನು ಇಂದಿಗೂ ಎಸ್.ಎ.ಚಿನ್ನೇಗೌಡ ಮುಂದುವರೆಸಿಕೊಂಡು ಬಂದಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ‘ಬೆಳ್ಳಿ ಹೆಜ್ಜೆಯಲ್ಲಿ ನಮ್ಮೊಂದಿಗೆ ಎಸ್.ಎ.ಚಿನ್ನೇಗೌಡ’ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕುಟುಂಬದ ಮೌಲ್ಯಗಳೇ ಕುಸಿಯುತ್ತಿವೆ. ಇಂತಹ ಸಂದರ್ಭದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಹಾಕಿಕೊಟ್ಟ ದಾರಿಯಲ್ಲಿ ಎಸ್.ಎ.ಚಿನ್ನೇಗೌಡ ನಡೆಯುತ್ತಿದ್ದಾರೆ ಎಂದು ಹೇಳಿದರು.

ಈ ಬೆಳ್ಳಿ ಹಬ್ಬ 71ನೇಯದಾಗಿದ್ದು, ಮೊದಲ ಬೆಳ್ಳಿ ಹಬ್ಬದ ದಿವ್ಯ ಚೇತನವೇ ಪಾರ್ವತಮ್ಮ ರಾಜ್‌ಕುಮಾರ್. ಈ ಬೆಳ್ಳಿ ಹಬ್ಬವನ್ನು ಇಡೀ ಚಲನಚಿತ್ರವೇ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ಅಲ್ಲದೆ ಕುಟುಂಬದ ಪರಿಕಲ್ಪನೆಯನ್ನು ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದು ರಾಜ್ ಕುಟುಂಬ ಹಾಗೂ ಅವರ ಸಿನೆಮಾಗಳು. ಕುಟುಂಬದ ಕಲ್ಪನೆಯನ್ನು ಚಲನಚಿತ್ರದಲ್ಲಿ ತೋರಿಸಿದಲ್ಲದೆ ನಿಜ ಜೀವನದಲ್ಲೂ ಹೀಗೆ ಇರಬೇಕು ಎಂದು ನಟಿಸಿ ನಡೆದವರು ರಾಜ್ ಎಂಬ ಮೇರು ನಟ ಎಂದು ನುಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಗಳೆರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಆದರೆ ಅಕಾಡೆಮಿ ಶೈಕ್ಷಣಿಕ ದೃಷ್ಟಿಯನ್ನು ಹೊಂದಿದೆ. ಮಂಡಳಿ ವ್ಯಾವಹಾರಿಕ ಜಾಡಿನಲ್ಲಿ ನಡೆಯುತ್ತದೆ. ಅಲ್ಲದೆ ಯಾವ ಅಧಿಕಾರವು ಶಾಶ್ವತವಲ್ಲ. ಹೀಗಾಗಿ ಎಲ್ಲ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ತಿಳಿಸಿದರು.

ಇನ್ನು, ವಿಜಯ ರಾಘವೇಂದ್ರ ಬಾಲನಟನಾಗಿ ಅಭಿನಯಿಸಿರುವ ಕೊಟ್ರೇಶಿ ಕನಸು ಸಿನೆಮಾದ ಶೂಟಿಂಗ್ ಒಂದು ಕುಗ್ರಾಮದಲ್ಲಿ ನಡೆಯುತ್ತಿತ್ತು. ಆ ಸಂದರ್ಭ ದಲ್ಲಿ ಚಿನ್ನೇಗೌಡರು 30 ದಿನಗಳ ಕಾಲ ಶೂಟಿಂಗ್ ಸ್ಥಳದಲ್ಲೇ ಇದ್ದುಕೊಂಡು, ತನ್ನ ಮಗನ ಭವಿಷ್ಯ ರೂಪಿಸುವಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಿಕೊಂಡಿದ್ದರು ಎಂದು ಅವರು ನೆನೆದರು.

ಸಮಾರಂಭದಲ್ಲಿ ಹಿರಿಯ ನಟಿ ಜಯಂತಿ, ಪ್ರಮೀಳಾ ಜೋಷಾಯ್, ಹಿರಿಯ ನಿರ್ದೇಶಕ ಭಗವಾನ್, ಹಿರಿಯ ನಟರಾದ ಎಸ್.ಶಿವರಾಂ, ರಾಘವೇಂದ್ರ ರಾಜ್ ಕುಮಾರ್, ನಟರಾದ ವಿಜಯ ರಾಘವೇಂದ್ರ ಹಾಗೂ ಶ್ರೀಮುರುಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News