ಮಾದಕ ವಸ್ತು ಮಾರಾಟ: ಆರೋಪಿ ಬಂಧನ, 10 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2019-06-15 16:37 GMT

ಬೆಂಗಳೂರು, ಜೂ.15: ನಗರದ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಯಾಬಾ ಹೆಸರಿನ ಮ್ಯಾನ್ಮಾರ್(ಬರ್ಮಾ) ಮೂಲದ ಮೆಥಅಂಟಮೈನ್ ಎಂಬ 10 ಲಕ್ಷ ರೂ. ಮೌಲ್ಯದ(ಮಾದಕ ವಸ್ತು) ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಜಹಾಂಗೀರ್ ಗಜಿ(27) ಎಂದು ಗುರುತಿಸಲಾಗಿದೆ. ಆತನ ವಶದಿಂದ ಮ್ಯಾನ್ಮಾರ್ ಮೂಲದ ಯಾಬಾ ಹೆಸರಿನ ಮೆಥಅಂಟಮೈನ್ ಎಂಬ 103 ಗ್ರಾಂ ತೂಕದ 1 ಸಾವಿರ ಮಾದಕ ಮಾತ್ರೆಗಳನ್ನು, 6 ಜಿಪ್‌ಲಾಕ್ ಕವರುಗಳು, ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಇದರ ಒಟ್ಟು ಮೌಲ್ಯ 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಶನಿವಾರ ನಗರದ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಆರೋಪಿ ಜಹಾಂಗೀರ್ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾನೆಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳು ಸ್ಥಳದ ಮೇಲೆ ದಾಳಿ ನಡೆಸಿ, ಮಾದಕ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರೆಸಿದ್ದಾರೆ.

ಆರೋಪಿ ಜಹಾಂಗೀರ್ ಎನ್‌ಡಿಪಿಎಸ್ ಕಾಯ್ದೆಯಲ್ಲಿ ನಿಷೇಧಿಸಲ್ಪಟ್ಟಿರುವ ಯಾಬಾ ಹೆಸರಿನ ಮೆಥಾಅಂಟಮೈನ್ ಮಾದಕ ಮಾತ್ರೆಗಳನ್ನು, ಕೊಲ್ಕತ್ತಾದಿಂದ ಖರೀದಿಸಿಕೊಂಡು ಬಂದು, ತಮ್ಮದೇ ವ್ಯವಸ್ಥಿತ ಗಿರಾಕಿಗಳ ಜಾಲ ಸೃಷ್ಟಿಸಿಕೊಂಡು, ಪ್ರತಿ ಒಂದು ಮಾತ್ರೆಗೆ 600 ರಿಂದ 900 ರೂ.ಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವುದಲ್ಲದೇ ಹರೆಯದ ಯುವಕ, ಯುವತಿಯರಿಗೆ ಮಾರಾಟ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News