ಐಎಂಎ ವಂಚನೆಯ ಬಗ್ಗೆ ಮೃದು ಧೋರಣೆಯ ಪ್ರಶ್ನೆಯೇ ಇಲ್ಲ: ಸಚಿವ ಝಮೀರ್ ಅಹ್ಮದ್

Update: 2019-06-15 17:28 GMT

ಬೆಂಗಳೂರು, ಜೂ. 15: ಐ ಮಾನಿಟರಿ ಅಡ್ವೈಸರಿ(ಐಎಂಎ) ಕಂಪೆನಿ ವಂಚನೆ ಪ್ರಕರಣ ಸಂಬಂಧ ಮೃದು ಧೋರಣೆ ಪ್ರಶ್ನೆಯೇ ಇಲ್ಲ. ಸಿಟ್ ತನಿಖೆ ಪ್ರಗತಿಯಲ್ಲಿದೆ. ಹೀಗಿರುವಾಗ ಬಿಜೆಪಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಕ್ವೀನ್ಸ್‌ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಐಎಂಎ ವಂಚನೆ ಪ್ರಕರಣ ಸಂಬಂಧ ಮಾಹಿತಿ ನೀಡಿದ ಬಳಿಕ ಮಾತನಾಡಿದ ಅವರು, ತನಿಖಾ ತಂಡದಲ್ಲಿ ನಾವೇ ಹೋಗಿ ಕುಳಿತುಕೊಳ್ಳಲು ಆಗುವುದಿಲ್ಲ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಅಧಿಕಾರಿಗಳು ಪ್ರಕರಣ ಭೇದಿಸುವ ವಿಶ್ವಾಸವಿದೆ ಎಂದರು.

ಐಎಂಎ ವಂಚನೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮೊದಲು ತನಿಖೆಗೆ ಆಗ್ರಹಿಸಿದ್ದು ಝಮೀರ್ ಅಹ್ಮದ್‌ಖಾನ್. ಬಿಜೆಪಿ ಮುಖಂಡರು ಮನಸೋ ಇಚ್ಛೆ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ತಿರುಗೇಟು ನೀಡಿದರು.

ವಂಚನೆ ಪ್ರಕರಣದಲ್ಲಿ ನನ್ನ ಪಾತ್ರದ ಬಗ್ಗೆ ದಾಖಲೆಗಳಿದ್ದರೆ ಬಿಜೆಪಿ ಮುಖಂಡರು ಮಾತನಾಡಲಿ. ಅದು ಬಿಟ್ಟು ಸುಖಾ ಸುಮ್ಮನೆ ಆರೋಪ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದ ಅವರು, ನನ್ನ ಪಾತ್ರದ ಬಗ್ಗೆ ದಾಖಲೆ ನೀಡಿದರೆ ಅವರು ಹೇಳಿದಂತೆ ಕೇಳುತ್ತೇನೆ ಎಂದು ಗುಡುಗಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎಲ್ಲೊ ಕುಳಿತು ಜನರಿಗೆ ನ್ಯಾಯ ಕೊಡಿಸುವ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಪ್ರಕರಣ ಬಯಲಿಗೆ ಬಂದ ಕೂಡಲೇ ನಾವು ಜನರೊಂದಿಗೆ ಇದ್ದೇವೆ ಎಂದ ಝಮೀರ್ ಅಹ್ಮದ್‌ಖಾನ್, ಶಾಸಕ ರೋಷನ್‌ಬೇಗ್ ಪಾತ್ರ ಇರುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ ಎಂದರು.

ಐಎಂಎ ಕಂಪೆನಿಯ ಮನ್ಸೂರ್ ಆಡಿಯೋದಲ್ಲಿ ರೋಷನ್‌ ಬೇಗ್ ಹೆಸರು ಉಲ್ಲೇಖಿಸಿದ್ದು, ಅವರ ಆಡಿಯೋ ಎಂಬ ಬಗ್ಗೆ ದೃಢವಾಗಬೇಕಿದೆ. ತನಿಖೆಗೆ ಮೊದಲೇ ಯಾರನ್ನೂ ಆರೋಪಿಗಳು ಎಂದು ಹೇಳಲು ಸಾಧ್ಯವಿಲ್ಲ. ತನಿಖೆಯಿಂದ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News