ಐಎಂಎ ಮಾಲಕ ಮನ್ಸೂರ್ ಖಾನ್‌ ಬಂಧನಕ್ಕೆ ಎಐಎಂಇಎಂ ಆಗ್ರಹ

Update: 2019-06-15 17:37 GMT

ಬೆಂಗಳೂರು, ಜೂ.15: ಸಾವಿರಾರು ಜನರಿಗೆ ಪಂಗನಾಮ ಹಾಕಿ ತಲೆಮರೆಸಿಕೊಂಡಿರುವ ಐಎಂಎ ಗೂಪ್ಸ್‌ನ ಮಾಲಕ ಮನ್ಸೂರ್ ಖಾನ್‌ನನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ತೆಗೆದುಕೊಂಡು ಹೂಡಿಕೆದಾರರಿಗೆ ನ್ಯಾಯ ಒದಗಿಸಬೇಕೆಂದು ಆಲ್ ಇಂಡಿಯಾ ಮಜ್ಲಿಸೆ-ಇತ್ತೆಹದುಲ್ ಮುಸ್ಲಿಮೀನ್ ಸಂಘಟನೆಯ ಅಧ್ಯಕ್ಷ ಮಹಮದ್ ಇಬ್ರಾಹಿಂ ಒತ್ತಾಯಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಈ ಸಂಸ್ಥೆಗೆ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿರುವ ಬಹುತೇಕ ಮಂದಿ ಅನಕ್ಷರಸ್ಥರಾಗಿದ್ದು, ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಕೋಟ್ಯಂತರ ರೂ. ಸಂಗ್ರಹ ಮಾಡಿಕೊಂಡು ಪರಾರಿಯಾಗಿರುವ ಮನ್ಸೂನ್ ಖಾನ್‌ನನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಹಣ ಕಳೆದುಕೊಂಡು ಕೆಲವು ಕುಟುಂಬಗಳು ದಿಕ್ಕು ತೋಚದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪತಿ, ಪತ್ನಿ ಮಧ್ಯೆ ಈ ವಿಷಯಕ್ಕೆ ಬಿರಕು ಉಂಟಾಗಿ ವಿಚೇಧನಕ್ಕೆ ಹೋಗುತ್ತಿದ್ದಾರೆ. ಅಲ್ಲದೆ ಮೌಲವಿಗಳು ಧಾರ್ಮಿಕ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಬೇಕೇ ಹೊರತು, ಒಂದು ಕಂಪನಿಯಲ್ಲಿ ಹಣ ಹೂಡುವಂತೆ ಹೇಳುವುದು ಸರಿಯಲ್ಲ. ಅವರ ಭರವಸೆಯಿಂದ ಎಷ್ಟೋ ಬಡವರು ತಮ್ಮ ಹಣವನ್ನು ಹೂಡಿಕೆ ಮಾಡಿ ಇಂದು ಸಂಕಷ್ಟಕ್ಕೆ ಸಿಲುಕಿರುವುದು ವಿಪರ್ಯಾಸ ಎಂದು ಐಎಂಎ ಪರವಾಗಿ ಮಾತನಾಡುತ್ತಿದ್ದ ಮೌಲವಿಗಳ ವಿರುದ್ಧ ಕಿಡಿಕಾರಿದರು.

ಬಡವರು ಮಾತ್ರವಲ್ಲದೆ ಕಳ್ಳರು, ಸಿರಿವಂತರು ತೆರಿಗೆ ಹಣವನ್ನು ವಂಚಿಸಿ ಇಂತಹ ಸಂಸ್ಥೆಗೆ ಹೂಡಿಕೆ ಮಾಡಿರುವುದನ್ನು ಗಮನಿಸಿದರೆ ಕೆಲವು ರಾಜಕಾರಣಿಗಳು ಶಾಮೀಲಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಂತಿದೆ. ಹೀಗಾಗಿ ಸರಕಾರ ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಯೊಬ್ಬರನ್ನು ಬಂಧಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News