ಬಿಎಂಟಿಸಿ: ವಿದ್ಯಾರ್ಥಿ ಬಸ್‌ ಪಾಸ್ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

Update: 2019-06-15 17:56 GMT

ಬೆಂಗಳೂರು, ಜೂ.15: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ವಿದ್ಯಾರ್ಥಿಗಳ ಬಸ್‌ಪಾಸ್ ದರದಲ್ಲಿ ಏರಿಕೆ ಮಾಡಿರುವುದನ್ನು ಖಂಡಿಸಿ ಎಐಡಿಎಸ್‌ಒನ ವಿದ್ಯಾರ್ಥಿಗಳು ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳ ಜೇಬಿಗೆ ಕತ್ತರಿ ಹಾಕಲು ಹೊರಟಿರುವ ಸರಕಾರಕ್ಕೆ ಧಿಕ್ಕಾರ, ಉಚಿತ ಬಸ್‌ಪಾಸ್ ನೀಡುತ್ತೇವೆಂದು ಹೇಳಿ ಶುಲ್ಕ ಏರಿಸಿರುವ ಸರಕಾರಕ್ಕೆ ಧಿಕ್ಕಾರ, ಈ ಕೂಡಲೆ ಬಸ್‌ಪಾಸ್ ದರ ಏರಿಕೆ ಪ್ರಸ್ತಾವನೆ ಹಿಂಪಡೆಯಿರಿ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುವ ಮೂಲಕ ಸರಕಾರದ ಕ್ರಮವನ್ನು ಖಂಡಿಸಿದರು.

ಈ ವೇಳೆ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ರೋಷನ್ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುವುದು ಕಲಿಯಲಿಕ್ಕೆ ಹೊರತು, ಕೆಲಸ ಮಾಡುವುದಕ್ಕಲ್ಲ. ಓದುವಂತಹ ವಿದ್ಯಾರ್ಥಿಗಳ ಬಳಿ ಬಸ್‌ಪಾಸ್ ಹೆಸರಿನಲ್ಲಿ ಹಣ ಕೀಳುವುದು ಸರಿಯಲ್ಲ. ಯಾವುದೆ ಕಾರಣಕ್ಕೂ ಬಸ್‌ಪಾಸ್ ದರವನ್ನು ಹೆಚ್ಚಳ ಮಾಡಬಾರದೆಂದು ಒತ್ತಾಯಿಸಿದರು.

ನಮ್ಮ ಸರಕಾರಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ಪಾಸ್ ವಿತರಿಸಬೇಕಾಗಿತ್ತು. ಆದರೆ, ಸರಕಾರಗಳು ವಿದ್ಯಾರ್ಥಿ ಸ್ನೇಹಿಯಾದಂತಹ ಚಿಂತನೆಯನ್ನು ಹೊಂದಿಲ್ಲ ಎಂಬುದು ಗೊತ್ತಿರುವ ವಿಷಯ. ಆದರೆ, ಪೆಟ್ರೋಲಿಯಂ, ತರಕಾರಿ ಬೆಲೆ ಹೆಚ್ಚಳವಾದಂತೆ ವಿದ್ಯಾರ್ಥಿಗಳ ಬಸ್‌ಪಾಸ್‌ದರ ಹೆಚ್ಚಳ ಮಾಡುತ್ತಿರುವುದು ನಮ್ಮ ಜನಪ್ರತಿನಿಧಿಗಳ ವಿದ್ಯಾರ್ಥಿ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದರು.

ಬಡ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳು ಕಾಲೇಜ್ ಶುಲ್ಕಕ್ಕಿಂತ ಹೆಚ್ಚಿರುವ ಬಸ್‌ಪಾಸ್ ದರವನ್ನು ಭರಿಸಲಾರದೆ ಶಿಕ್ಷಣಕ್ಕೆ ವಿದಾಯ ಹೇಳುವ ಸಂಭವ ಇರುತ್ತದೆ. ಇದರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಬಸ್‌ಪಾಸ್ ದರ ಏರಿಕೆ ಎಂಬುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದರು. ಈ ವೇಳೆ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಸದಸ್ಯ ಕಲ್ಯಾಣ್ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News