ಎಚ್ಚೆನ್‌ಗೆ ಜನ್ಮ ಶತಾಬ್ದಿ ನಮನ

Update: 2019-06-15 18:31 GMT

ಎಚ್ಚೆನ್ ಅವರ ವೈಜ್ಞಾನಿಕ ಮನೋಭಾವ ಕಲಿಕೆಯಿಂದ ಬಂದದ್ದಲ್ಲ. ಅದು ಜನ್ಮಜಾತವಾದದ್ದು. ‘‘ನಾನು ಮೊದಲಿನಿಂದಲೂ ಪ್ರಶ್ನೆಮಾಡುವ ಮನೋಭಾವಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟುಕೊಂಡು ಬಂದಿದ್ದೇನೆ. ಈ ಮನೋಭಾವ ಮಿಡ್ಲ್‌ಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಮೊದಲಾಯಿತು’’ ಎನ್ನುವ ಎಚ್ಚೆನ್ ಬಾಲ್ಯದಲ್ಲೇ ಊರಲ್ಲಿ, ದೇವರು ಮೈಮೇಲೆ ಬರುವುದು ಇಂಥ ಪ್ರಸಂಗಗಳನ್ನು ಪ್ರಶ್ನಿಸಿದ್ದುಂಟು.


ವಿದ್ಯಾರ್ಥಿಗಳಿರಲಿ, ಸಾರ್ವಜನಿಕ ಕ್ಷೇತ್ರದ ವ್ಯಕ್ತಿಗಳಿರಲಿ, ಯಾವುದೇ ವೃತ್ತಿಯವರಿರಲಿ, ತಮ್ಮ ಸಾಹಚರ್ಯದಲ್ಲಿ ಬಂದವರೆಲ್ಲರಿಗೂ ‘ಯಾವುದನ್ನೂ ಪ್ರಶ್ನೆಮಾಡದೆ ಒಪ್ಪಿಕೊಳ್ಳಬೇಡಿ’ ಎನ್ನುವ ವಿಜ್ಞಾನದ ಮಹಾಮಂತ್ರವನ್ನು ಬೋಧಿಸಿದ ಗುರು ಡಾ.ಎಚ್. ನರಸಿಂಹಯ್ಯನವರ ಜನ್ಮ ಶತಾಬ್ದಿ ವರ್ಷ ಇದೀಗ ಶುರುವಾಗಿದೆ. ಕುಗ್ರಾಮವೊಂದರಲ್ಲಿ ಜನಿಸಿ ‘ಹೋರಾಟದ ಹಾದಿಯಲ್ಲೇ’ ಬಾಳ್ವೆ ನಡೆಸಿದ ಎಚ್ಚೆನ್ ಅವರ ಬದುಕು ಪವಾಡ ಸದೃಶವಾದರೂ ಪವಾಡವಲ್ಲ.
ಮೂಲತ: ವಿಚಾರವಾದಿಯಾದ ಎಚ್. ನರಸಿಂಹಯ್ಯನವರು ಹುಟ್ಟಿದ್ದು 1920ನೇ ಇಸವಿಯ ಜೂನ್ 6ನೆಯ ತಾರೀಕು. ಹುಟ್ಟೂರು: ಗೌರಿಬಿದನೂರು ತಾಲೂಕಿನ ಹೊಸೂರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ. ತುಂಬಾ ಹಿಂದುಳಿದ ವರ್ಗದ ಕುಟುಂಬ. ತಂದೆ ಕೂಲಿಮಠದ ಮೇಷ್ಟ್ರು. ಹೊಸೂರಿನ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಆರಂಭಿಸಿದ ಎಚ್ಚೆನ್ 1934ರಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ನಂತರ ಮಧುಗಿರಿಯ ಸರಕಾರಿ ಹೈಸ್ಕೂಲು ಸೇರಿದರು. ಊಟವಸತಿಗೆ ತೊಂದರೆಯಾದ್ದರಿಂದ ಮಧುಗಿರಿಯಲ್ಲಿ ಶಿಕ್ಷಣ ಮುಂದುವರಿಸುವುದು ಅಸಾಧ್ಯವಾಗಿ ಹುಟ್ಟಿದ ಊರಿಗೆ ಹಿಂದಿರುಗಿದರು. 1934ರಲ್ಲೇ ನಂದಿಬೆಟ್ಟದಲ್ಲಿ ಮಹಾತ್ಮಾ ಗಾಂಧಿಯವರನ್ನು ಕಂಡು ಅವರಿಂದ ಪ್ರಭಾವಿತನಾಗಿದ್ದ ಬಾಲಕ ನರಸಿಂಹಯ್ಯ ನೂಲುವುದು, ಹಿಂದಿ-ಸಂಸ್ಕೃತ ಅಧ್ಯಯನದಲ್ಲಿ ತೊಡಗಿಕೊಂಡರು. 1935ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲು ಸೇರಿದ ಎಚ್ಚೆನ್ ಬಡಹುಡುಗರ ವಿದ್ಯಾರ್ಥಿನಿಲಯ ಸೇರಿ ವಿದ್ಯಾಭ್ಯಾಸ ಮುಂದುವರಿಸಿದರು. ಸರಕಾರಿ ಕಾಲೇಜಿನಲ್ಲಿ ಇಂಟರ್ ಮುಗಿಸಿ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಆನರ್ಸ್ ತರಗತಿ ಸೇರಿದರು. ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಜೈಲು ಸೇರಿದರು. ಸ್ವಾತಂತ್ರ್ಯ ಹೋರಾಟದಿಂದಾಗಿ ಸ್ವಲ್ಪಕಾಲ ಕಾಲೇಜು ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ್ದ ಎಚ್ಚೆನ್ ನಂತರ ಶಿಕ್ಷಣ ಮುಂದುವರಿಸಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರರಾಗಿ 1946ರಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನ್ಯಾಷನಲ್ ಕಾಲೇಜು ಸೇರಿದನಂತರ ಎಚ್ಚೆನ್ ತಿರುಗಿ ನೋಡಿದ್ದೇ ಇಲ್ಲ. ಅವರ ಹೋರಾಟದ ಬದುಕು ಹೊಸ ತಿರುವು ಪಡೆದುಕೊಂಡಿತು. 1956ರಲ್ಲಿ ಭೌತ ಶಾಸ್ತ್ರ ಮತ್ತು ಗಣಿತ ಶಾಸ್ತ್ರಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿ ಓಹಿಯಾ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಗಳಿಸಿದರು. ಸ್ವದೇಶಕ್ಕೆ ಹಿಂದಿರುಗುವ ವೇಳೆಗೆ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರ ಹುದ್ದೆ ಅವರಿಗಾಗಿ ಕಾದಿತ್ತು. ಪ್ರಾಂಶುಪಾಲರಾಗಿ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲೇ ಬಿಡಾರ ಮಾಡಿದ ಬ್ರಹ್ಮಚಾರಿ ಎಚ್ಚೆನ್ ವಿದ್ಯಾರ್ಥಿಗಳ ನಡುವೆ ಬದುಕುತ್ತ ಹಲವು ತಲೆಮಾರಿನ ವಿದ್ಯಾರ್ಥಿಗಳನ್ನು ಆದರ್ಶ ಮಾರ್ಗದಲ್ಲಿ ಬೆಳೆಸಿದರು, ತಾವೂ ಬೆಳೆದರು. ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿ ಶಿಕ್ಷಣವೇತ್ತರೆನಿಸಿಕೊಂಡರು.
ಎಚ್ಚೆನ್ ಅವರ ಮೇಲೆ ಗಾಢ ಪ್ರಭಾವ ಬೀರಿದ್ದು ಮಹಾತ್ಮಾ ಗಾಂಧಿಯವರ ಚೇತನ. ಅವರಾಗ ಚಿಕ್ಕಹುಡುಗ, ಒಂಬತ್ತನೇ ತರಗತಿಯ ವಿದ್ಯಾರ್ಥಿ. 1936ನೇ ಇಸವಿ ಜೂನ್ 11ರಂದು ಗಾಂಧೀಜಿ ಬೆಂಗಳೂರಿಗೆ ಬಂದಿದ್ದರು. ಸ್ಥಳ:ಬೆಂಗಳೂರಿನ ಕುಮಾರ ಕೃಪ. ಬಾಪು ದರ್ಶನಕ್ಕಾಗಿ ಸೇರಿದ್ದ ಜನಜಂಗುಳಿಯಲ್ಲಿ ಗಾಂಧಿ ಟೋಪಿ ಧರಿಸಿದ್ದ ನ್ಯಾಷನಲ್ ಹೈಸ್ಕೂಲಿನ ವಿದಾರ್ಥಿಗಳೂ ಇದ್ದರು. ಜನಜಂಗುಳಿಯ ಮಧ್ಯೆ ಗಾಂಧೀಜಿ ಬಾಲಕ ಎಚ್ಚೆನ್ ಅವರನ್ನು ಗುರುತಿಸಿ ಹತ್ತಿರಕ್ಕೆ ಕರೆದಿದ್ದರು. ಬಾಲಕನ ಭುಜದ ಮೇಲೆ ಪ್ರೀತಿಯಿಂದ ಕೈಹಾಕಿದ ಗಾಂಧೀಜಿ ಕೇಳುತ್ತಾರೆ:
‘‘ನಿನ್ನ ಹೆಸರೇನು?’’
‘‘ನರಸಿಂಹಯ್ಯ’’
‘‘ಯಾವ ತರಗತಿಯಲ್ಲಿ ಓದುತ್ತಿದ್ದೀಯ?’’
‘‘ಫಿಫ್ತ್ ಫಾರಂ’’
‘‘ನಿನಗೆ ಹಿಂದಿ ಚೆನ್ನಾಗಿ ಬರುತ್ತದೆಯೇ?’’
‘‘ಸ್ವಲ್ಪಸ್ವಲ್ಪಬರುತ್ತದೆ’’(ಥೋಡಾ ಥೋಡಾ ಆತಾ ಹೈ)
ತಮ್ಮ ಹಿಂದಿಯ ಭಾಷಣವನ್ನು ತರ್ಜುಮೆ ಮಾಡಲು ಗಾಂಧೀಜಿಗೆ ವಿದ್ಯಾರ್ಥಿಯೊಬ್ಬನ ಅಗತ್ಯವಿತ್ತು. ಗಾಂಧೀಜಿ ಜೊತೆ ಇರುವ ಚೋಟುದ್ದದ ಈ ಬಾಲಕನ ಚಿತ್ರವನ್ನು ‘ದಿ ಹಿಂದೂ’ ಪತ್ರಿಕೆ ಪ್ರಕಟಿಸಿತ್ತು. ಆ ಫೋಟೊ ಎಚ್ಚೆನ್ ಅವರ ಕೊಠಡಿಯ ಗೋಡೆಯನ್ನಲಂಕರಿಸಿ ಸರ್ವದಾ ಅವರನ್ನು ನಡೆಸುವ ಶಕ್ತಿಯಾಯಿತು. ಈ ಭೇಟಿಗೂ ಮೊದಲೇ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಿನಿಂದಲೇ ಬಾಲಕ ಎಚ್ಚೆನ್ ಗಾಂಧಿಯವರ ಸ್ವದೇಶಿ ವಿಚಾರಧಾರೆಯಿಂದ ಪ್ರಭಾವಿತರಾಗಿ ಚರಕದಿಂದ ನೂಲುವ ಪರಿಪಾಠವನ್ನು ಚಿಕ್ಕಂದಿನಲ್ಲೇ ಬೆಳೆಸಿಕೊಂಡಿದ್ದರು.

ಅಂತೆಯೇ ಎಚ್ಚೆನ್ ಅವರನ್ನು ಪ್ರಭಾವಿಸಿ ಅವರ ಶೀಲ, ವ್ಯಕ್ತಿತ್ವಗಳನ್ನು ರೂಪಿಸಿದ ಎರಡು ಸಂಸ್ಥೆಗಳೆಂದರೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮತ್ತು ವಿಶ್ವೇಶ್ವರಪುರದ ಶ್ರೀರಾಮಕೃಷ್ಣ ವಿದ್ಯಾರ್ಥಿನಿಲಯ. ನ್ಯಾಷನಲ್ ಹೈಸ್ಕೂಲಿನಲ್ಲಿ ಕಂದಾಡೆ ಕೃಷ್ಣಯ್ಯರ್, ಸಂಪದ್ಗಿರಿ ರಾವ್, ರಾಮರಾವ್ ಮುಂತಾದ ಸದ್ಗುರುಗಳ ನಿಕಟ ಸಂಪರ್ಕ, ಮಾರ್ಗದರ್ಶನಗಳು ಎಚ್ಚೆನ್ ಅವರ ಗುರಿಗಮ್ಯತೆಗಳನ್ನು ಸ್ಪಷ್ಟಗೊಳಿಸಿದ್ದವು. ಹಿಂದುಳಿದ ವರ್ಗದಲ್ಲಿ ಹುಟ್ಟಿ ಉತ್ತಮ ದರ್ಜೆಯ ಉನ್ನತ ಪದವಿ ಗಳಿಸಿದ ಎಚ್ಚೆನ್ ಸರಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗುವುದು ಕಷ್ಟವಿರಲಿಲ್ಲ. ಆದರೆ ಅವರು ತಾವು ಓದಿದ ದೇಶೀಯ ಶಿಕ್ಷಣ ಸಂಸ್ಥೆಯನ್ನೇ ಆಯ್ಕೆ ಮಾಡಿಕೊಂಡು ಉತ್ತಮ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳಾಗಿ ಪರಿವರ್ತಿಸುವ ಕಾಯಕದಲ್ಲಿ ಕಾಯಾ,ವಾಚಾ,ಮನಸಾ ತೊಡಗಿಸಿಕೊಂಡರು. ಗಾಂಧಿ ಯುಗದ ಮೌಲ್ಯಗಳನ್ನು ಒಪ್ಪಿಕೊಂಡು, ಪದವಿ ತರಗತಿಯ ಕೊನೆಯ ವರ್ಷದ ಶಿಕ್ಷಣವನ್ನು ನಿಲ್ಲಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಎಚ್ಚೆನ್ ಮುಂದೆ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾದ ಮೇಲೂ ‘ಮೈಸೂರು ಚಲೋ ಚಳವಳಿ’ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅಧ್ಯಾಪಕ ಹುದ್ದೆಗೆ ರಾಜೀನಾಮೆ ಕೊಟ್ಟು ‘ಮೈಸೂರು ಚಲೋ’ ಚಳವಳಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡ ಎಚ್ಚೆನ್ ಪತ್ರಕರ್ತರೂ ಆದರು. ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡು ಭೂಗತರಾಗಿ ‘ಇನ್‌ಕಿಲಾಬ್’ ಭೂಗತ ಪತ್ರಿಕೆಯನ್ನು ಪ್ರಾರಂಭಿಸಿದರು. ‘ಇನ್‌ಕಿಲಾಬ್’ ಕುರಿತು ಎಚ್ಚೆನ್ ‘ಹೋರಾಟದ ಹಾದಿ’ಯಲ್ಲಿ ಹೀಗೆ ಬರೆದಿದ್ದಾರೆ:
‘‘ನಾವಿಬ್ಬರೂ ಸಕ್ರಿಯವಾಗಿ ಏನು ಮಾಡಬೇಕೆಂದು ಯೋಚಿಸಿದೆವು. ಪ್ರತಿಬಂಧಕಾಜ್ಞೆಯನ್ನು ಮುರಿದು ಸುಮ್ಮನೆ ಜೈಲಿನಲ್ಲಿ ಕುಳಿತುಕೊಳ್ಳುವುದು ನಮಗೆ ಇಷ್ಟವಿರಲಿಲ್ಲ. ನನಗಂತೂ ಅದರ ಅನುಭವ ಸಾಕಷ್ಟು ಆಗಿತ್ತು. ಕೊನೆಗೆ ಒಂದು ದೈನಂದಿನ ‘ಭೂಗತ’ ಪತ್ರಿಕೆ(ಅಂಡರ್‌ಗ್ರೌಂಡ್)ಯನ್ನು ಪ್ರಕಟಿಸುವುದು ಉಚಿತವೆಂದು ನಿಶ್ಚಯಿಸಿದೆವು. ಅದಕ್ಕೆ ‘ಇನ್‌ಕಿಲಾಬ್’ ಎಂಬ ಹೆಸರು ಕೊಟ್ಟೆವು. ಇನ್‌ಕಿಲಾಬ್ ಎಂದರೆ ಕ್ರಾಂತಿ ಎಂದು ಅರ್ಥ.ಆ ಪತ್ರಿಕೆಯನ್ನು ಮುದ್ರಿಸಲು ಕೆಲವು ಅಡ್ಡಿ ಆತಂಕಗಳಿದ್ದವು. ಆದುದರಿಂದ ಸೈಕ್ಲೋಸ್ಟೈಲ್ ಮಾಡಲು ನಿಶ್ಚಯಿಸಿದೆವು. ನಮ್ಮ ಆವರಣದಲ್ಲಿಯೇ ಇದ್ದ ‘ಶ್ರೀ ರಂಗನಾಥ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್’ಸಂಸ್ಥೆಯ ಮಾಲಕರೂ ನಮ್ಮ ಶಾಲೆಯ ಹಿರಿಯ ತರುಣರೂ ಆದ ಟಿ. ಆರ್. ಶಾಮಣ್ಣನವರನ್ನು ಈ ಕೆಲಸಕ್ಕಾಗಿ ಒಂದು ಸೈಕ್ಲೋಸ್ಟೈಲ್ ಯಂತ್ರ ಕೊಡಿಸಬೇಕೆಂದು ಕೇಳಿದೆವು. ಅವರು ಒಪ್ಪಿದರು. ಕಾಗದ ಮಸಿ ಮುಂತಾದವುಗಳಿಗೆ ಬೇಕಾದ ಹಣವನ್ನು ಸ್ನೇಹಿತರಿಂದ, ಹಿತೈಷಿಗಳಿಂದ ಸಂಗ್ರಹಿಸುತ್ತಿದ್ದೆವು.’’
    
1947ರ ಸೆಪ್ಟಂಬರ್ 4ರಂದು ‘ಇನ್‌ಕಿಲಾಬ್’ ಮೊದಲ ಸಂಚಿಕೆ ಹೊರಬಂದು 37 ಸಂಚಿಕೆಗಳು ಪ್ರಕಟವಾದವು. ಮೈಸೂರು ಪ್ರಾಂತ ಭಾರತದಲ್ಲಿ ವಿಲೀನಗೊಂಡಾಗ ಮಹಾಜನರಿಗೆ ‘ಇನ್‌ಕಿಲಾಬ್’ ವಂದನೆ ಹೇಳಿ ಎಚ್ಚೆನ್ ಅಧ್ಯಾಪನ ವೃತ್ತಿಗೆ ಹಿಂದಿರುಗಿದರು. (ನಾವಿಬ್ಬರು ಎಂದರೆ ಅವರ ಸಹಪಾಠಿ ಕೆ. ಶ್ರೀನಿವಾಸನ್) ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದನ್ನು ಎಚ್ಚೆನ್ ಎಂದೂ ಸ್ವಹಿತ ಸಾಧನೆಗೆ ಬಳಸಿಕೊಳ್ಳಲಿಲ್ಲ. ಅವರದು ಸ್ವಂತ ಲಾಭೋದ್ದೇಶವಿಲ್ಲದ ರಾಷ್ಟ್ರ ಪ್ರೇಮ. ಎಚ್ಚೆನ್ ಜೊತೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಯೋಧರೊಬ್ಬರು ಒಮ್ಮೆ ಎಚ್ಚೆನ್ ಅವರನ್ನು ಭೇಟಿಯಾದಾಗ ‘‘ನೀವು ಸ್ವಾತಂತ್ರ್ಯ ಯೋಧರ ಮಾಸಾಶನ ತೆಗೆದುಕೊಳ್ಳುತ್ತಿದ್ದೀರ?’’ ಎಂದು ಕೇಳುತ್ತಾರೆ. ‘‘ಇಲ್ಲ’’ ಎಂದು ಎಚ್ಚೆನ್ ಉತ್ತರ. ‘‘ನಾನು ತೆಗೆದುಕೊಳ್ಳುತ್ತಾ ಇದ್ದೇನೆ, ನೀವೂ ತೆಗೆದುಕೊಳ್ಳಿ’’ ಎಂದು ಆತ ನುಡಿದಾಗ, ಎಚ್ಚೆನ್ ನೀಡಿದ ಉತ್ತರ: ‘‘ನನಗೆ ಊಟಕ್ಕೆ ಆಗುವಷ್ಟು ಹಣವಿದೆ. ಅಲ್ಲದೆ ನಾವೆಲ್ಲ ಅಂದು ಸ್ವಾತಂತ್ರ್ಯ ಚಳವಳಿಗಳಲ್ಲಿ ಭಾಗವಹಿಸಿದ್ದು, ಕರ್ತವ್ಯಪಾಲನೆಗಾಗಿ; ಅದಕ್ಕೆ ಪ್ರತಿಫಲವಾಗಿ ಇಂದು ಮಾಸಾಶನವನ್ನೋ ಅಥವಾ ಇನ್ನಾವುದೋ ಸೌಲಭ್ಯವನ್ನೋ ಪಡೆಯುವುದಕ್ಕಾಗಿ ಅಲ್ಲ. ಜೈಲಿಗೆ ಹೋದದ್ದು ಒಂದು ಲೇವಾದೇವಿ ಆಗಬಾರದು. ಸ್ವಾತಂತ್ರ್ಯ ಯೋಧರ ಮಾಸಾಶನದ ವ್ಯವಸ್ಥೆ ತುಂಬ ಬಡವರಿಗಾಗಿ ಮಾಡಿದ್ದು’’(ಹೋರಾಟದ ಹಾದಿ ಪು. 77-78).
ಪ್ರಖರ ವೈಜ್ಞಾನಿಕ ಪ್ರಜ್ಞೆಯನ್ನೂ, ವಿದ್ಯೆಯ ವಿನಯವನ್ನೂ, ಅನುಭವದ ವಿವೇಕವನ್ನೂ ಮೈಗೂಡಿಸಿಕೊಂಡಿದ್ದ ಪಕ್ವ ವಯಸ್ಸಿನಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳ ಹುದ್ದೆ ಡಾ.ಎಚ್.ನರಸಿಂಹಯ್ಯನವರನ್ನು ಅರಸಿಕೊಂಡು ಬಂತು. ಆಗ ಬೆಂಗಳೂರು ವಿಶ್ವವಿದ್ಯಾನಿಲಯ ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಕಿರಿಯದಾಗಿತ್ತು. ಹಲವಾರು ಬಾಲಾರಿಷ್ಠಗಳು, ಸಮಸ್ಯೆಗಳಿಂದ ಆವೃತವಾಗಿದ್ದ ಈ ವಿಶ್ವವಿದ್ಯಾನಿಲಯವನ್ನು ಆರೋಗ್ಯಪೂರ್ಣವಾಗಿ ಬೆಳೆಸುವ ಕಂಕಣ ತೊಟ್ಟರು ಎಚ್ಚೆನ್. ನೂರು ಎಕರೆ ನಾಗರಭಾವಿ ಆವರಣದಲ್ಲಿ ಅರೆಬರೆಯಾಗಿದ್ದ ಕಟ್ಟಡಗಳನ್ನು ಪೂರ್ಣಗೊಳಿಸಿದರು, ಅನನುಕೂಲಗಳೇ ಹೆಚ್ಚಾಗಿದ್ದ ನಾಗರಭಾವಿಯನ್ನು ‘ಜ್ಞಾನ ಭಾರತಿ’ಯಾಗಿಸಿ, ವಿದ್ಯಾರ್ಥಿಗಳಿಗೆ ಅನುಕೂಲಗಳನ್ನು ಮಾಡಿಕೊಟ್ಟು ಶೈಕ್ಷಣಿಕ ಸೌಲಭ್ಯಗಳನ್ನು ಹೆಚ್ಚಿಸಿದರು. ಕುಲಪತಿ ಕುರ್ಚಿಯಲ್ಲಿ ಕೇವಲ ಆಡಳಿತಗಾರರಾಗಿ ಕೂರದೆ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅವಿರತ ಶ್ರಮಿಸಿದರು.
           ಎಚ್ಚೆನ್ ಅವರ ವೈಜ್ಞಾನಿಕ ಮನೋಭಾವ ಕಲಿಕೆಯಿಂದ ಬಂದದ್ದಲ್ಲ. ಅದು ಜನ್ಮಜಾತವಾದದ್ದು. ‘‘ನಾನು ಮೊದಲಿನಿಂದಲೂ ಪ್ರಶ್ನೆಮಾಡುವ ಮನೋಭಾವಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟುಕೊಂಡು ಬಂದಿದ್ದೇನೆ. ಈ ಮನೋಭಾವ ಮಿಡ್ಲ್‌ಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಮೊದಲಾಯಿತು’’ ಎನ್ನುವ ಎಚ್ಚೆನ್ ಬಾಲ್ಯದಲ್ಲೇ ಊರಲ್ಲಿ, ದೇವರು ಮೈಮೇಲೆ ಬರುವುದು ಇಂಥ ಪ್ರಸಂಗಗಳನ್ನು ಪ್ರಶ್ನಿಸಿದ್ದುಂಟು. ತಂದೆ ಸತ್ತಾಗ ಯಾವ ಕರ್ಮಗಳನ್ನೂ ಮಾಡಲಿಲ್ಲ. ಮಾರನೆಯ ದಿವಸ ತಾಯಿ ತಲೆ ಬೋಳಿಸಿಕೊಳ್ಳುವಂತೆ ಹೇಳಿದಾಗ ‘‘ನನ್ನ ತಲೆ ಕೂದಲು ತೆಗೆಸುವುದಕ್ಕೂ ನಮ್ಮಪ್ಪಸತ್ತದ್ದಕ್ಕೂ ಏನು ಸಂಬಂಧ?’’ ಎಂದು ಪ್ರಶ್ನಿಸುತ್ತಾರೆ. ವೈಜ್ಞಾನಿಕ ಮನೋಭಾವದ ಮೂಲಭೂತವಾದ ಲಕ್ಷಣ ಪ್ರಶ್ನೆ ಮಾಡುವುದು. ಪ್ರಶ್ನೆ ಮಾಡದೇ ಇದ್ದರೆ ಮುಂದಕ್ಕೆ ಹೋಗುವುದಿಲ್ಲ, ಪ್ರಗತಿ ಇಲ್ಲ. ಅದು ನಿಂತ ಮಡುವಿದ್ದ ಹಾಗೆ. ಪ್ರಶ್ನೆ ಮಾಡುವುದು ಹರಿಯುವ ನದಿಯಂತೆ ಇರುತ್ತದೆ. ಧರ್ಮಕ್ಕೂ ವಿಜ್ಞಾನಕ್ಕೂ ಇದೇ ಮುಖ್ಯವಾದ ವ್ಯತ್ಯಾಸ. ಧರ್ಮ ಸಾಮಾನ್ಯವಾಗಿ ನಂಬಿಕೆಗೆ ಪ್ರಾಧಾನ್ಯತೆ ಕೊಡುತ್ತದೆ. ವಿಜ್ಞಾನಕ್ಕೆ ಪ್ರಶ್ನೆ ಮಾಡುವುದೇ ಅದರ ಜೀವಾಳ ಎಂದು ದೃಢವಾಗಿ ನಂಬಿದ್ದ ಎಚ್ಚೆನ್ ನ್ಯಾಷನಲ್ ಕಾಲೇಜಿನಲ್ಲಿದ್ದಾಗಲೇ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಬೆಂಗಳೂರು ಸೈನ್ಸ್ ಫೋರಂ ಪ್ರಾರಂಭಿಸಿದ್ದರು. ಉಪ ಕುಲಪತಿಯಾದ ಮೇಲೂ ಈ ಪ್ರಯತ್ನ ಮುಂದುವರಿಸಿದರು. ಜಿ.ಎಸ್.ಶಿವರುದ್ರಪ್ಪನವರು ಹೇಳಿರುವಂತೆ, ಎಚ್ಚೆನ್ ಅವರಿಗೆ ಅಖಿಲ ಭಾರತೀಯ ಖ್ಯಾತಿಯನ್ನು ತಂದುಕೊಟ್ಟ ಘಟನೆ ಎಂದರೆ ಅವರು ಪವಾಡಪುರುಷರಾದ ಸತ್ಯಸಾಯಿಬಾಬಾ ಅವರೊಂದಿಗೆ ಮುಖಾಮುಖಿಯಾಗಿ ನಿಂತು, ಅವರ ಪವಾಡಗಳ ಮೌಲಿಕತೆಯನ್ನು ಪ್ರಶ್ನಿಸಿದ್ದು. ಉಪಕುಲಪತಿಗಳಾಗಿ ಜ್ಞಾನ ಭಾರತಿ ಅಭಿವೃದ್ಧಿ, ಶೈಕ್ಷಣಿಕ ಸುಧಾರಣೆ ಕೆಲಸಗಳ ಜೊತೆ ಮೂಢ ನಂಬಿಕೆಗಳನ್ನು ಪವಾಡಗಳನ್ನು ಪ್ರಶ್ನಿಸುವ ಕೆಲಸವನ್ನೂ ಕೈಗೆತ್ತಿಕೊಂಡರು. ಪವಾಡಗಳನ್ನು ಮತ್ತು ಪ್ರಮಾಣಿಸಿ ನೋಡಬಹುದಾದ ಇತರ ಮೂಢನಂಬಿಕೆಗಳನ್ನು ತನಿಖೆ ಮಾಡುವ ವಿಶ್ವವಿದ್ಯಾನಿಲಯ ಸಮಿತಿಯೊಂದನ್ನು ರಚಿಸಿ, ಸಾಯಿಬಾಬಾ ಮತ್ತು ಅವರ ಶಾಖೋಪಶಾಖೆಗಳ ಪವಾಡಗಳ ಪೊಳ್ಳುತನವನ್ನು ಬಯಲಿಗೆಳೆಯುವ ಸಾಹಸವನ್ನು ಕೈಗೊಂಡರು. ಎಚ್ಚೆನ್ ಅವರೇ ಹೇಳಿರುವಂತೆ, ಈ ಸಮಿತಿ, ವಾಸ್ತವವಾಗಿ ಇದು ಇಂಥ ಉದ್ದೇಶಕ್ಕಾಗಿ ಭಾರತದಲ್ಲಿ ಮತ್ತು ಪ್ರಾಯಶಃ ವಿಶ್ವದಲ್ಲಿಯೇ, ವಿಶ್ವವಿದ್ಯಾನಿಲಯದಿಂದ ಅಥವಾ ಯಾವುದೇ ಅಧಿಕಾರ ಘಟಕದಿಂದ ರಚಿತವಾದ ಪ್ರಪ್ರಥಮ ಸಮಿತಿಯಾಗಿತ್ತು(ತೆರೆದ ಮನ: ಪು. 129). ಎಚ್ಚೆನ್ ಅವರ ಈ ಪ್ರಯತ್ನದಿಂದ ಆದ ಪರಿಣಾಮಗಳು ಹಾಗೂ ಸಾಮಾಜಿಕ ಜಾಗೃತಿ ಈಗ ಇತಿಹಾಸ. ಅವರು ಕಲಿಸಿದ ಪ್ರಶ್ನಿಸುವ ಈ ವೈಜ್ಞಾನಿಕ ಮನೋಭಾವ ಮುಂದುವರಿದಿರುವುದಕ್ಕೆ ಇತ್ತೀಚೆಗೆ ಮಳೆಗಾಗಿ ಸರಕಾರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪರ್ಜನ್ಯ ಜಪಗಳನ್ನು ನಡೆಸಿದ್ದರ ವಿರುದ್ಧ ನಡೆದ ಪ್ರತಿಭಟನೆಯೇ ಸಾಕ್ಷಿ.
ಡಾ.ಎಚ್.ನರಸಿಂಹಯ್ಯ ಯಾವ ಕಾಲಕ್ಕೂ ಸಲ್ಲುವಂಥ ಆದರ್ಶ ಪುರುಷರು. ಅವರದು ಅನುಕರಣೀಯವಾದ ಆದರ್ಶದ ಬದುಕು. ನಾನು ‘ಸುಧಾ’ ವಾರಪತ್ರಿಕೆಯನ್ನು ಸಂಪಾದಿಸುತ್ತಿದ್ದ ದಿನಗಳಲ್ಲಿ ಎಚ್ಚೆನ್ ಬದುಕು ವಾಚಕರಿಗೆ ದಾರಿದೀಪವಾಗಬಹುದೆನ್ನಿಸಿ ಆತ್ಮಕಥೆ ಬರೆದು ಕೊಡುವಂತೆ ಅವರಲ್ಲಿ ವಿನಂತಿಸಿಕೊಂಡೆ. ಒಪ್ಪಿಬರೆದುಕೊಟ್ಟರು. ಹೀಗೆ ‘ಸುಧಾ’ದಲ್ಲಿ ‘ಹೋರಾಟದ ಹಾದಿ’ ಪ್ರಕಟಿಸುವ ಸುಯೋಗ ನನ್ನದಾಯಿತು. 1995ರಲ್ಲಿ ‘ಹೋರಾಟದ ಹಾದಿ’ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿತು. ಈ ಗ್ರಂಥ ಪುನರ್ ಮುದ್ರಣಗೊಂಡು ದೊರೆಯುವಂತಾದಲ್ಲಿ ಇಂದಿನ ತಲೆಮಾರಿಗೆ ಉಪಯುಕ್ತವಾದೀತು. ಜನ್ಮಶತಾಬ್ದಿ ಆಚರಣೆಯೂ ಅರ್ಥಪೂರ್ಣವಾದೀತು. ಎಚ್ಚೆನ್ ಅವರಿಗೆ ಜನ್ಮ ಶತಾಬ್ದಿಯ ನಮನಗಳು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News