ಕಾರ್ನಾಡ್‌ರನ್ನು ಕನ್ನಡ ಚಿತ್ರರಂಗ ಹೊರಗಿಟ್ಟಿದ್ದು ದುರಂತ: ಪದ್ಮಶ್ರೀ ಪುರಸ್ಕೃತ ಗಿರೀಶ್ ಕಾಸರವಳ್ಳಿ

Update: 2019-06-16 15:09 GMT

ಬೆಂಗಳೂರು, ಜೂ.16: ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಪ್ರಖರವಾದ ಜ್ಞಾನವುಳ್ಳವರಾಗಿದ್ದರೂ, ಅವರನ್ನು ಚಿತ್ರರಂಗ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಿಲ್ಲ. ಕನ್ನಡ ಚಿತ್ರರಂಗ ಕಾರ್ನಾಡ್‌ರನ್ನು ಹೊರಗೆ ಇಟ್ಟಿದ್ದು ಇಂದಿನ ದುರಂತವಾಗಿದೆ ಎಂದು ಪದ್ಮಶ್ರೀ ಪುರಸ್ಕೃತ, ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಗಿರೀಶ್ ಕಾರ್ನಾಡ್ ನಮನ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ನಾಡ್ ತಮ್ಮ ಸಾಹಿತ್ಯದ ಮೂಲಕ ನೀಡಿದ ಒಳನೋಟ, ಆರೋಗ್ಯಕರ ವ್ಯಾಖ್ಯಾನ ಸಮಾಜಕ್ಕೆ ತುಂಬಾ ಹತ್ತಿರವಾದದ್ದಾಗಿದೆ. ಅವರು ಅಪರೂಪವಾದ ಲೇಖನ, ನಟನೆ ಚಿತ್ರರಂಗಕ್ಕೆ ಪರಿಚಯಿಸಿದರು. ಅಲ್ಲದೆ, ಕಾರ್ನಾಡ್‌ರನ್ನು ಚಿತ್ರ ನಿರ್ದೇಶಕರಾಗಷ್ಟೇ ಕಾಣುತ್ತೇವೆ. ಆದರೆ, ಅವರು ವಿಶಿಷ್ಟವಾದ ಕಥೆಗಳನ್ನು ಒಳಗೊಂಡ ಎರಡು ಸಾಕ್ಷಚಿತ್ರಗಳನ್ನು ಮಾಡಿದ್ದಾರೆ. ಅಂತಹವರನ್ನು ಚಿತ್ರರಂಗ ಗುರುತಿಸಲಿಲ್ಲ ಎಂದ ಅವರು, ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಬೇಕಿತ್ತು. ಆದರೆ, ಕನಿಷ್ಠ ಅದಕ್ಕೆ ಹೆಸರು ಪರಿಗಣಿಸಿಲ್ಲ. ಹೀಗಾಗಿ, ಈಗಲಾದರೂ ಚಿತ್ರರಂಗ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ನಾಡರಿಗೆ ರಾಜಕೀಯ ಒಳನೋಟ, ತಾತ್ವಿಕ ಒಳನೋಟ ಇತ್ತು. ತುಘಲಕ್ ನಾಟಕದ ಮೂಲಕ ನೆಹರು ಆಡಳಿತ, ತಲೆದಂಡ ನಾಟಕದ ಬಿಜ್ಜಳನ ತಾತ್ವಿಕ ಭಿನ್ನಾಭಿಪ್ರಾಯದ ಬಗ್ಗೆ ವಿವರಿಸಿದ್ದಾರೆ. ಗಿರೀಶ್ ಕಾರ್ನಾಡ್ ನಟನಾಗಿ ಅಲ್ಲದೇ ನಾಟಕಕಾರರಾಗಿ ಕಾಣುತ್ತಾರೆ. ಸಾಮಾಜಿಕ ಬದ್ಧತೆಯಿರುವ ಬುದ್ಧಜೀವಿ ಅವರಾಗಿದ್ದು, ನಾಟಕಗಳ ಮೂಲಕ ಚರಿತ್ರೆಯನ್ನು ಯಾವ ನೆಲೆಯಲ್ಲಿ ನೋಡಬಹುದು ಎಂಬುದನ್ನು ಹೇಳಿದ್ದಾರೆ. ಇತ್ತೀಚಿಗೆ ಬಂದ ಒಂದು ನಾಟಕ ಪುರಾಣವನ್ನು ತಾತ್ವಿಕ ಮುನ್ನಲೆಗೆ ಹೇಗೆ ತರಬಹುದು ಎಂದು ನೋಡಬಹುದು ಎಂದರು.

ಕಾರ್ನಾಡ್ ಮರಣ ಹೊಂದಿದ ಸಂದರ್ಭದಲ್ಲಿ ಸಂಭ್ರಮಿಸಿದವರು ಅವರ ಸಾಹಿತ್ಯವನ್ನು ಓದಿಕೊಳ್ಳಬೇಕಾದ ಅಗತ್ಯವಿದೆ. ಕೆಲವರು ತಾತ್ವಿಕವಾಗಿ ಕೆಲವು ಘಟನೆಗಳನ್ನು ಪ್ರತಿಭಟಿಸಿದರೂ ಹೊರಗಡೆ ಪ್ರತಿಭಟನೆಗೆ ನಿರಾಕರಿಸುತ್ತಾರೆ. ಆದರೆ, ಕಾರ್ನಾಡ್ ಕೆಲವೇ ವೈಚಾರಿಕ ಕೃತಿಗಳನ್ನು ರಚಿಸಿದ್ದರೂ, ತಾವು ನಂಬಿದ ಸಿದ್ಧಾಂತವನ್ನು ಬಹಿರಂಗವಾಗಿ ಹೇಳಿದವರು, ಪ್ರತಿಭಟಿಸಿದ ವ್ಯಕ್ತಿಯಾಗಿದ್ದಾರೆ. ಇಂದಿನ ಚಳವಳಿಗಾರರು ಕಾರ್ನಾಡ್‌ರ ಕೃತಿಗಳನ್ನು ಓದಿಕೊಳ್ಳಬೇಕಾದ ತುರ್ತು ಅಗತ್ಯವೂ ಇದೆ ಎಂದು ನುಡಿದರು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, 80ರ ದಶಕದಲ್ಲಿ ಕಾರ್ನಾಡ್‌ರನ್ನು ನಾನು ನೋಡಿದ್ದೆ. ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದಿದ್ದರೂ ಸಾಮಾನ್ಯರಂತೆ ನೋಡಿದ್ದು. ಅಂತರಾಷ್ಟ್ರೀಯ ಮನ್ನಣೆ ಪಡೆದಿದ್ದರು, ಸಹಜವಾಗಿ ತೊಡಗಿಸಿಕೊಂಡಿದ್ದರು. ರಂಗಭೂಮಿಯ ಪರಿಚಯ ಅವರ ನಾಟಕಗಳನ್ನು ಆಡಿಸುತ್ತಿದ್ಧು, ಬೋಧಿಸುತ್ತಿದ್ದ ಎರಡು ಸ್ತರದಲ್ಲಿ ನೋಡಿದ್ದೆ ಎಂದರು.

ಕಾರ್ನಾಡ್‌ರನ್ನು ಹತ್ತಿರದಿಂದ ನೋಡುವುದು ಬಹಳ ಕಷ್ಟ. ಬೇಂದ್ರೆ, ಕುವೆಂಪು, ಲಂಕೇಶರ ಜತೆಗೆ ಹತ್ತಿರ ಬೆರೆತು ಬೆರಗಿನಿಂದ ನೋಡುತ್ತಿದ್ದ ವೇಳೆ ಕಾರ್ನಾಡ್‌ರನ್ನು ಹತ್ತಿರವಾಗಿ ನೋಡಲಾಗುತ್ತಿಲ್ಲ. ತಾವು ನಂಬಿದ ಸಿದ್ಧಾಂತ ನಿಷ್ಠುರವಾಗಿ ಪ್ರತಿಪಾದಿಸುತ್ತಾ, ಹಲವಾರು ಜನರ ವಿರೋಧ ಕಟ್ಟಿಕೊಂಡಿದ್ದರು. ವಿದೇಶಗಳಿಗೆ ಹೋದಾಗ ಅಲ್ಲಿನ ಗ್ರಂಥಾಲಯಗಳಲ್ಲಿ ಮೊದಲ ಸ್ಥಾನ ಕಾರ್ನಾಡ್ ಕೃತಿಗಳಿರುತ್ತಿದ್ದವು. ಅವರ ಮುಖ್ಯವಾದ ಕೃತಿಗಳನ್ನು ಮರು ಅರ್ಥ ಮಾಡಿಕೊಳಳಬೇಕು. ಅವರ ಕೃತಿಗಳ ಮೌಲ್ಯ ಕಟ್ಟಿ ಹಿಡಿಯಬೇಕೆಂದು ತಿಳಿಸಿದರು.

ಪದ್ಮಶ್ರೀ ಪುರಸ್ಕೃತ ಕಲಾವಿದೆ ಡಾ.ಬಿ. ಜಯಶ್ರೀ, ನಟ ಗುಬ್ಬಿ ನಟರಾಜ್, ನಿರ್ದೇಶಕ ಚೈತನ್ಯ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News