ಶಿವಶರಣರ ಚಿಂತನೆಗಳಿಂದ ದುರ್ಗುಣ ನಿರ್ಮೂಲನೆ: ಬಿಬಿಎಂಪಿ ಮೇಯರ್ ಗಂಗಾಬಿಕೆ

Update: 2019-06-16 16:34 GMT

ಬೆಂಗಳೂರು, ಜೂ.16: ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಶಿವಶರಣರ ಚಿಂತನೆಗಳನ್ನು ಅರಿಯುತ್ತಾ ಹೋದಂತೆಲ್ಲಾ ನಮ್ಮಲ್ಲಿರುವ ದುರ್ಗಣಗಳೆಲ್ಲಾ ನಿರ್ಮೂಲನೆ ಆಗುತ್ತಾ ಹೋಗುತ್ತದೆ ಎಂದು ಬಿಬಿಎಂಪಿ ಮೇಯರ್ ಗಂಗಾಬಿಕೆ ತಿಳಿಸಿದ್ದಾರೆ.

ರವಿವಾರ ವಿಮಾನ ಕಾರ್ಖಾನೆ ಬಸವ ಸೇವಾ ಸಮಿತಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಹಾಗೂ ಸಾಹಿತಿ ಡಾ.ಮಕ್ತುಂಬಿಗೆ ಬಸವ ಸೇವಾ ರತ್ನ ಪುರಸ್ಕಾರ ನೀಡಿ ಮಾತನಾಡಿದ ಅವರು, ಶರಣರ ವಚನಗಳಲ್ಲಿ ಸೌಹಾರ್ದತೆಯ, ಸಮಾನತೆ, ವೈಚಾರಿಕೆ ಚಿಂತನೆಗಳಿಂದ ಕೂಡಿದೆ. ಇವುಗಳನ್ನು ಅರಿಯುವ ಮೂಲಕ ನಾವೆಲ್ಲರೂ ಬೆಳಕಿನ ದಾರಿಯಲ್ಲಿ ನಡೆಯಬಹುದು ಎಂದು ತಿಳಿಸಿದರು.

ಕಟ್ಟಕಡೆಯ ವ್ಯಕ್ತಿಯ ಸಮಾನತೆಗಾಗಿ ಹೋರಾಟ ಮಾಡಿದ ಜಗತ್ತಿನ ಮೊದಲ ಮಾನವತಾವಾದಿ ಶಿವ ಶರಣ ಬಸವಣ್ಣನಾಗಿದ್ದು, ಈತನ ತತ್ವಗಳು ಎಲ್ಲ ಕಾಲಕ್ಕೂ ಸಲ್ಲುವಂತಹದ್ದಾಗಿದೆ. ಬಸವಣ್ಣ ಸೇರಿದಂತೆ ಶಿವಶರಣರ ತತ್ವಗಳು ಕೇವಲ ಒಂದು ಮತ, ಜಾತಿ, ಧರ್ಮ, ಭಾಷೆ, ದೇಶಕ್ಕೆ ಸೀಮಿತವಲ್ಲ. ಜಗತ್ತನ್ನೆ ಬೆಳಗಿಸುವಂತಹವು ಎಂದು ತಿಳಿಸಿದರು.

ಶಿವಶರಣ ಬಸವಣ್ಣನಿಗೆ ಒಂದು ದಿನ ಜಯಂತಿ ಕಾರ್ಯಕ್ರಮ ಆಚರಿಸಿ, ತಮ್ಮ ಕಾರ್ಯ ಮುಗಿಯಿತು ಎಂದು ಯಾರೂ ಭಾವಿಸಬಾರದು. ಶಿವಶರಣರ ತತ್ವಗಳು ಪ್ರತಿದಿನದ ಬದುಕಿನಲ್ಲಿ ಆಚರಣೆಯಾಗಬೇಕು. ಆಗ ಮಾತ್ರ ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ನೆಲಸಲು ಸಾಧ್ಯ ಎಂದು ಅವರು ಅಭಿಪ್ರಾಯಿಸಿದರು.

ಸಾಹಿತಿ ಡಾ.ಮುಕ್ತುಂಬಿ ಮಾತನಾಡಿ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿರುವ ಶಿವಶರಣರನ್ನು ನಾವು ಜಾತಿಯ, ಧಾರ್ಮಿಕ ಚೌಕಟ್ಟುಗಳನ್ನು ಮೀರಿ ವಿಸ್ತಾರವಾದ ನೆಲೆಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಅವರ ಶರಣರ ಚಿಂತನೆಗಳಲ್ಲಿರುವ ಜ್ಞಾನದ ಬಂಡಾರವನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಹಲವು ಶಿವಶರಣರ ವಚನಗಳಲ್ಲಿರುವ ಸೌಂದರ್ಯ ಮೀಮಾಂಸೆಯ ಕುರಿತು ಸಂಶೋಧನೆ ಮಾಡಿದ್ದೇನೆ. ಮುಖ್ಯವಾಗಿ ಅಕ್ಕಮಹಾದೇವಿ ತನ್ನ ವಚನಗಳಲ್ಲಿ ಕಾಡನ್ನು, ಮರಗಿಡ, ಪ್ರಾಣಿ ಪಕ್ಷಿಗಳನ್ನು ವರ್ಣಿಸುವ ರೀತಿ ಇಂದಿನ ಕಾಲಕ್ಕೆ ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. ಹೀಗೆ ಪ್ರತಿಯೊಂದು ವಚನಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾ ಹೋದರೆ ವಚನಗಳ ಆಶಯದಲ್ಲಿರುವ ವೈಶಿಷ್ಟತೆಯನ್ನು ಕಾಣಬಹುದಾಗಿದೆ ಎಂದು ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಮಾತನಾಡಿ, ವಚನಗಳನ್ನು ಯಾರೋ ಒಂದಿಬ್ಬರು ಹೇಳಿದನ್ನು ಕೇಳಿ ಸುಮ್ಮನಾಗುವುದಲ್ಲ. ಪ್ರತಿಯೊಬ್ಬರು ಪ್ರತಿದಿನ ವಚನಗಳನ್ನು ಓದಿ, ಅದರಲ್ಲಿರುವ ಚಿಂತನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಮಗ್ನರಾಗಬೇಕು ಎಂದು ತಿಳಿಸಿದರು.

ಬಸವಣ್ಣನ ಕಲ್ಯಾಣ ಮಂಟಪದಲ್ಲಿ 700ಕ್ಕೂ ಹೆಚ್ಚು ಶಿವಶರಣರು ಇದ್ದಾರೆಂದು ಹೇಳಲಾಗುತ್ತದೆ. ಇವರು ಬರೆದಿರುವ ಪ್ರತಿಯೊಂದು ವಚನಗಳಲ್ಲಿಯೂ ಜ್ಞಾನ, ಅರಿವು ಹಾಗೂ ವೈಚಾರಿಕೆಯ ಬಂಡಾರವೆ ಅಡಗಿದೆ. ಆದರೆ, ಅದನ್ನು ಅರಿಯುವಲ್ಲಿ ನಾವು ಸೋತ್ತಿದ್ದೇವೆ. ಇನ್ನಾದರು, ವಚನಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಸಾಗಬೇಕಾಗಿದೆ ಎಂದು ಅವರು ಆಶಿಸಿದರು.

ಬಸವಣ್ಣ ಸೇರಿದಂತೆ ಶಿವಶರಣರ ಚಿಂತನೆಗಳಲ್ಲಿ ಯಾವತ್ತೂ ದೇವಸ್ಥಾನ, ಲಿಂಗ ಪೂಜೆ, ಅಭಿಷೇಕ ಸೇರಿದಂತೆ ಆಡಂಬರದ ಆರಾಧನೆಗಳಿಲ್ಲ. ತಮ್ಮನ್ನು ತಾವು ಅರಿತು ಕೊಳ್ಳುವುದೆ ನಿಜವಾದ ದೇವರ ದರ್ಶನವೆಂದು ತಿಳಿಸಿದ್ದಾರೆ. ಆದರೆ, ನಾವು ಇವತ್ತಿಗೂ ಶಿವಶರಣರ ಆಶಯಗಳಿಗೆ ವಿರುದ್ಧವಾಗಿ ಆಡಂಬರದ ಆರಾಧನೆಯಲ್ಲಿ ಮುಳುಗಿದ್ದೇವೆ ಎಂದು ಅವರು ಹೇಳಿದರು.

ಶಿವಶರಣರು ಹೇಳಿದ ಲಿಂಗ, ಭಕ್ತಿ, ದಾಸೋಹ, ಗುರು ಎಂಬ ಪದಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮುನ್ನೆಡೆದಾಗ ಮಾತ್ರ ಮತ್ತೊಂದು ಕಲ್ಯಾಣ ರಾಜ್ಯವನ್ನು ನಿರ್ಮಿಸಲು ಸಾಧ್ಯ, ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಿವಶರಣರ ಹಾದಿಯಲ್ಲಿ ಸಾಗೋಣವೆಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಈ ವೇಳೆ ತೋಂಟದಾರ್ಯ ಸಂಸ್ಥಾನ ಮಠದ ಸಿದ್ದರಾಮ ಸ್ವಾಮೀಜಿ, ಎಚ್‌ಎಎಲ್‌ನ ವ್ಯವಸ್ಥಾಪಕ ಡಿ.ಬಿ.ಚಲವಾಡೆ, ಸಂಘದ ಗೌರವಾಧ್ಯಕ್ಷ ಎಫ್.ಬಿ.ರಾಜಶೇಖರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News