ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಮುಷ್ಕರ: ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ರೋಗಿಗಳ ನರಳಾಟ

Update: 2019-06-17 16:32 GMT

ಬೆಂಗಳೂರು, ಜೂ. 17: ಕರ್ತವ್ಯನಿತರ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳ ವೈದ್ಯರು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ರೋಗಿಗಳು ಚಿಕಿತ್ಸೆ ದೊರೆಯದೆ ಪರದಾಡಬೇಕಾಯಿತು.

ಸೋಮವಾರ ಬೆಳಗ್ಗೆಯಿಂದ ನಗರದ ವಿಕ್ಟೋರಿಯಾ, ಕೆ.ಸಿ.ಜನರಲ್, ಕಿದ್ವಾಯಿ, ರಾಜೀವ್ ಗಾಂಧಿ, ನಿಮ್ಹಾನ್ಸ್, ಇಎಸ್‌ಐ ಆಸ್ಪತ್ರೆಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಬಹುತೇಕ ಆಸ್ಪತ್ರೆಗಳ ಹೊರರೋಗಿ ಚಿಕಿತ್ಸಾ ಘಟಕಗಳು ಸ್ಥಗಿತಗೊಂಡಿದ್ದರಿಂದ ರೋಗಿಗಳು ಅಕ್ಷರಶಃ ನರಳಾಡುವಂತಾಯಿತು.

‘ಯಾವುದೇ ಕಾರಣಕ್ಕೂ ಸರಕಾರಿ ಆಸ್ಪತ್ರೆಗಳ ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳದೆ ಕರ್ತವ್ಯ ನಿರ್ವಹಿಸಬೇಕು’ ಎಂದು ರಾಜ್ಯ ಸರಕಾರದ ಆದೇಶವನ್ನು ಧಿಕ್ಕರಿಸಿ ಸರಕಾರಿ ವೈದ್ಯರು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ಚಿಕಿತ್ಸೆಯನ್ನರಿಸಿ ಆಸ್ಪತ್ರೆಗಳಿಗೆ ಧಾವಿಸಿ ಬಂದ ಬಡ ರೋಗಿಗಳು ಚಿಕಿತ್ಸೆ ದೊರೆಯದ ಕಾರಣ ವೈದ್ಯರಿಗೆ ಶಾಪ ಹಾಕುತ್ತಿದ್ದುದು ಕಂಡುಬಂತು.

ಸಿಎಂ ಎಚ್ಚರಿಕೆಗೂ ಮಣಿಯಲಿಲ್ಲ: ಈ ಮಧ್ಯೆ ‘ವೈದರ ಮೇಲೆ ಹಲ್ಲೆ ಖಂಡನೀಯ. ಆದರೆ, ವೈದರು ಮುಷ್ಕರ ನಿರತರಾದರೆ ಸಹಸ್ರಾರು ರೋಗಿಗಳಿಗೆ ತೊಂದರೆಯಾಗುತ್ತದೆ. ‘ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆಯಾಗಿದೆ. ಮುಷ್ಕರವನ್ನು ನಿರ್ಬಂಧಿಸಿ ರಾಜ್ಯ ಸರಕಾರ 3ದಿನಗಳ ಹಿಂದೆಯೇ ಸುತ್ತೋಲೆ ಹೊರಡಿಸಿದೆ. ವೈದ್ಯರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಸಿಎಂ ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಬೆಳಗ್ಗೆಯೆ ನೀಡಿದ ಎಚ್ಚರಿಕೆಗೂ ವೈದ್ಯರು ಸೊಪ್ಪು ಹಾಕಲಿಲ್ಲ.

ತುರ್ತು ಚಿಕಿತ್ಸೆಗಾಗಿ ಬಂದ ರೋಗಿಗಳು ವೈದ್ಯರು ಅಲಭ್ಯತೆಯಿಂದ ತೊಂದರೆ ಅನುಭವಿಸಿದರು. ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಡಿ ಕೊನೆಗೆ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದ ದೃಶ್ಯ ರಾಜ್ಯಾದ್ಯಂತ ಸಾಮಾನ್ಯವಾಗಿತ್ತು.

ಏಕಕಾಲಕ್ಕೆ ದೊಡ್ಡ ಸಂಖ್ಯೆಯಲ್ಲಿ ರೋಗಿಗಳ ಆಸ್ಪತ್ರೆಗಳಿಗೆ ಆಗಮಿಸಿದ್ದರಿಂದ ಹೊರ ರೋಗಿಗಳ ವಿಭಾಗವೂ ಸೇರಿದಂತೆ ಸರಕಾರಿ ಆಸ್ಪತ್ರೆಗಳು ರೋಗಿಗಳಿಂದ ಅಕ್ಷರಶಃ ಗಿಜುಗುಡುತ್ತಿದ್ದವು. ಬೆಂಗಳೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಸೇರಿದಂತೆ ಎಲ್ಲಡೆ ವೈದ್ಯರಿಲ್ಲದೆ ಬಡರೋಗಿಗಳ ಪರದಾಡುವಂತಾಯಿತು.

ಸೇವೆ ಸ್ಥಗಿತ ನಾಮಫಲಕ: ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿಂದು ಬೆಳಗ್ಗೆ 6 ಗಂಟೆಯಿಂದ ನಾಳೆ(ಜೂ.18) ಬೆಳಗ್ಗೆ 6ಗಂಟೆಯ ವರೆಗೆ ಹೊರರೋಗಿಗಳ ತಪಾಸಣೆ, ಚಿಕಿತ್ಸಾ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ನಾಮಫಲಕಗಳನ್ನು ಹಾಕಲಾಗಿತ್ತು. ಹೀಗಾಗಿ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳಿಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಆಗಬೇಕಾಯಿತು.

ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದ ಎಚ್ಚರಿಕೆ ಹಿನ್ನೆಲೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಸರಕಾರಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಲು ಆರೋಗ್ಯ ಇಲಾಖೆ ಅಗತ್ಯ ಸಿದ್ದತೆ ಮಾಡಿಕೊಂಡಿತ್ತು. ಅಲ್ಲದೆ, ವೈದ್ಯರೂ ಸೇರಿ ಆಸ್ಪತ್ರೆಯ ಯಾವುದೇ ಸಿಬ್ಬಂದಿ ರಜೆ ಹಾಕದಂತೆ ಸುತ್ತೋಲೆ ಹೊರಡಿಸಿತ್ತು. ಆದರೆ, ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆ ವಹಿಸಿದ್ದರೂ ದೊಡ್ಡ ಸಂಖ್ಯೆಯಲ್ಲಿ ರೋಗಿಗಳು ಏಕಕಾಲಕ್ಕೆ ಆಸ್ಪತ್ರೆಗಳಿಗೆ ಎಡತಾಕಿದ್ದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಸಾಧ್ಯವಾಗಲಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿನ ವೈದ್ಯರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

ಪ್ರತಿಭಟನೆ: ‘ಕರ್ತವ್ಯನಿರತ ವೈದ್ಯರನ್ನು ರಕ್ಷಿಸಿ, ಜೀವ ರಕ್ಷಣೆ ಮಾಡುವ ವೈದ್ಯರಿಗೆ ಸೂಕ್ತ ರಕ್ಷಣೆ ಕಲ್ಪಿಸಿ, ಪ್ರಾಣರಕ್ಷಕರಿಗೆ ಬೇಕಿದೆ, ರಕ್ಷಣೆ, ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ತಲೆಗೆ ಬ್ಯಾಡೆಂಜ್ ಬಟ್ಟೆ ಸುತ್ತಿಕೊಂಡ ವೈದ್ಯರು ರಾಜ್ಯಾದ್ಯಂತ ಧರಣಿ, ರ‍್ಯಾಲಿ, ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

‘ಚಿಕಿತ್ಸೆ ವೈಫಲ್ಯದ ನೆಪದಲ್ಲಿ ಜೀವರಕ್ಷಣೆ ಮಾಡುವ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುವಂತಹ ಪ್ರಕರಣಗಳು ಹೆಚ್ಚುತ್ತಿವೆ. ವೈದ್ಯರೇ ಪ್ರಾಣ ಭೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತಹ ದುಸ್ಥಿತಿ ಸರಿಯಲ್ಲ. ವೈದ್ಯರ ಮೇಲಿನ ಹಲ್ಲೆ ತಡೆಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಮುಷ್ಕರನಿರತ ವೈದ್ಯರು ಮನವಿ ಮಾಡಿದರು.

‘ಕರ್ತವ್ಯನಿರತ ವೈದ್ಯರ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳ ನಿಯಂತ್ರಣಕ್ಕೆ ಕೇಂದ್ರ ಸರಕಾರ ಕೂಡಲೇ ಕಠಿಣ ಕಾನೂನು ಜಾರಿಗೆ ತರಬೇಕು. ಅಲ್ಲದೆ, ಇದೀಗ ಹಲ್ಲೆ ನಡೆಸಿರುವವರ ವಿರುದ್ಧವೂ ಕಾನೂನು ಕ್ರಮಕ್ಕೆ ಸರಕಾರ ಮುಂದಾಗಬೇಕು’

-ಡಾ.ಅನ್ನದಾನಿ ಮೇಟಿ, ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ

ಜೆಡಿಎಸ್ ಕಾರ್ಯಕರ್ತ ಸಾವು

‘ಬಾದಾಮಿ ತಾಲೂಕು ಕೆರೂರು ಪಟ್ಟಣ ನಿವಾಸಿ ದಾವಲಸಾಬ್ ಕೊಣ್ಣೂರ ಎಂಬವರು ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿ ಜೆಡಿಎಸ್ ಕಾರ್ಯಕರ್ತ. ಜ್ವರ ಮತ್ತು ಅಸ್ತಮಾದಿಂದ ಬಳಲುತ್ತಿದ್ದು, ಅವರನ್ನು ಖಾಸಗಿ ಆಸ್ಪತ್ರೆ ಸಾಗಿಸಿದರೂ ಅಲ್ಲಿಯೂ ವೈದ್ಯರಿಲ್ಲದೆ ಮತ್ತೊಂದು ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News