ವೈದ್ಯೋದ್ಯಮದ ಸರ್ವಾಧಿಕಾರ

Update: 2019-06-18 06:14 GMT

‘‘ವೈದ್ಯೋ ನಾರಾಯಣ ಹರಿ’’ ಎಂದು ಸಂಸ್ಕೃತ ಶ್ಲೋಕಗಳು ವೈದ್ಯರನ್ನು ಬಣ್ಣಿಸುತ್ತವೆ. ಅಂದರೆ ವೈದ್ಯರು ದೇವರಿಗೆ ಸಮಾನ ಎನ್ನುವುದು ಅದರ ಅರ್ಥ. ಇದೇ ಸಂದರ್ಭದಲ್ಲಿ ವೈದ್ಯರನ್ನು ‘ಯಮಧರ್ಮರಾಯ’ನಿಗೆ ಹೋಲಿಸಿ ವ್ಯಂಗ್ಯವನ್ನು ಮಾಡಲಾಗುತ್ತದೆ. ವೈದ್ಯರೆಂದರೆ ದೇವರೂ ಅಲ್ಲ, ಹಾಗೆಯೇ ವೈದ್ಯರೆಂದರೆ ಯಮನೂ ಅಲ್ಲ. ಎಂತಹ ಪರಿಣತ ವೈದ್ಯನೂ ಹಲವು ಪ್ರಕರಣಗಳಲ್ಲಿ ಕೈ ಚೆಲ್ಲಬೇಕಾಗುತ್ತದೆ. ಅಥವಾ ಉದ್ದೇಶಪೂರ್ವಕವಲ್ಲದ ಸಣ್ಣ ಪ್ರಮಾದದಿಂದ ರೋಗಿ ಸಾಯುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಆಕಸ್ಮಿಕವಾಗಿ ನಡೆಯುವ ಪ್ರಮಾದವಾದರೂ ರೋಗಿಗಳ ಕುಟುಂಬ ಅದಕ್ಕಾಗಿ ಭಾರೀ ದಂಡವನ್ನು ತೆರಬೇಕಾಗುತ್ತದೆ. ಕೆಲವೊಮ್ಮೆ ತಮ್ಮ ಕುಟುಂಬ ಸದಸ್ಯನನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಬಹುದು.

ಆಗ ಅವರು ಆವೇಶಗೊಳ್ಳುವುದು, ಸಿಟ್ಟಾಗುವುದು ಸಹಜ. ಕೆಲವೊಮ್ಮೆ ವೈದ್ಯರ ಮೇಲೆ ಹಲ್ಲೆಯನ್ನೂ ನಡೆಸಬಹುದು. ಆದರೆ ಈ ಸಂದರ್ಭದಲ್ಲಿ ಸಂತ್ರಸ್ತರ ಒಳನೋವನ್ನು ವೈದ್ಯರು ಅರ್ಥೈಸಿಕೊಂಡು ಗರಿಷ್ಠ ಸಹನೆಯನ್ನು ವ್ಯಕ್ತಪಡಿಸಬೇಕು. ಹಾಗೆಯೇ ಕುಟುಂಬ ಸದಸ್ಯನನ್ನು ಕಳೆದುಕೊಂಡ ಆವೇಶದಲ್ಲಿ ಸಂತ್ರಸ್ತರು ವಿವೇಕವನ್ನು ಕಳೆದುಕೊಳ್ಳಬಾರದು. ವೈದ್ಯರ ಮಿತಿಯನ್ನೂ ಅವರು ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಈ ದೇಶದಲ್ಲಿ ವೈದ್ಯರೂ ಸಾಚಾ ಅಲ್ಲ ಎನ್ನುವುದು ಸ್ವತಃ ವೈದ್ಯಕೀಯ ಸಂಘಟನೆಗಳಿಗೇ ಗೊತ್ತಿದೆ. ವೃತ್ತಿಯನ್ನು ಸೇವೆ ಎಂದು ಬಗೆದು ರೋಗಿಗಳನ್ನು ಚಿಕಿತ್ಸೆಗೊಳಪಡಿಸುವ ವೈದ್ಯರ ಸಂಖ್ಯೆ ಇಳಿಮುಖವಾಗುತ್ತಾ ಬಂದಿದೆ. ವೈದ್ಯ ವೃತ್ತಿ ಉದ್ಯಮವಾಗಿ ಪರಿವರ್ತನೆಗೊಂಡಿದೆ. ಖಾಸಗಿ ಆಸ್ಪತ್ರೆಗಳು ಯಾವ ಮಾನವೀಯತೆಯೂ ಇಲ್ಲದೆ ಜನರನ್ನು ಸುಲಿಯುವ ಬಗೆ ಬಗೆಯ ತಂತ್ರಗಳನ್ನು ಅನುಸರಿಸುತ್ತಿವೆ. ರೋಗಿಯಲ್ಲದವನನ್ನೇ ರೋಗಿ ಎಂದು ಹೇಳಿ ಕ್ಯಾನ್ಸರ್ ಚಿಕಿತ್ಸೆ ನೀಡಿದ ವರದಿಗಳನ್ನು ಓದುತ್ತಿದ್ದೇವೆ. ವೈದ್ಯರು ಸ್ವಾರ್ಥಿಗಳಾದರೆ ಅದರ ನೇರ ಬಲಿಪಶುಗಳು ಶ್ರೀಸಾಮಾನ್ಯರು.

ಕಿಸೆ ತುಂಬಾ ಹಣವಿಲ್ಲದವನಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಪ್ರವೇಶವೇ ಇಲ್ಲ. ಇದೇ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಗಳು ಅತ್ಯಂತ ಕಳಪೆಯಾಗಿ ಕಾರ್ಯನಿರ್ವಹಿಸುತ್ತಿವೆ. ಬಡ ರೋಗಿಗಳ ಬದುಕಿಗೆ ಅಲ್ಲಿ ಬೆಲೆಯೇ ಇಲ್ಲ. ಕೆಲವು ಖಾಸಗಿ ವೈದ್ಯರು ಈ ಸರಕಾರಿ ಆಸ್ಪತ್ರೆಗಳನ್ನು ದುರುಪಯೋಗಗೊಳಿಸುತ್ತಿದ್ದಾರೆ. ಆದರೆ ಇಂದು ಮಾಧ್ಯಮಗಳಲ್ಲಿ ವೈದ್ಯರೇ ಭಾರೀ ಸಂತ್ರಸ್ತರಾಗಿ ಬಿಂಬಿತರಾಗುತ್ತಿದ್ದಾರೆ ಮತ್ತು ತಮ್ಮ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿ ದೇಶಾದ್ಯಂತ ಮುಷ್ಕರ ನಡೆಸುತ್ತಿದ್ದಾರೆ. ಹಲವು ದಿನಗಳ ಕಾಲ ನಡೆದ ಮುಷ್ಕರ ಕೊನೆಗೂ ಮುಕ್ತಾಯಕಂಡಿದೆಯಾದರೂ, ಅದು ಸಮಾಜದ ಮೇಲೆ, ಬಡವರ ಮೇಲೆ ಎಸಗಿದ ಅನ್ಯಾಯವನ್ನು ಸರಿಪಡಿಸುವುದು ಅಸಾಧ್ಯ.

    ವೈದ್ಯರ ಪ್ರಕಾರ ‘ಅವರ ಮೇಲೆ ನಿರಂತರ ಹಲ್ಲೆಗಳಾಗುತ್ತಿವೆ. ಅವರು ರಕ್ಷಣೆಯೇ ಇಲ್ಲದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ’’. ಆದರೆ ಆಸ್ಪತ್ರೆಗಳು ರೋಗಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯಗಳಿಗೆ ಹೋಲಿಸಿದರೆ, ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳು ಬೆರಳೆಣಿಕೆಯಷ್ಟು ಮಾತ್ರ. ಹಾಗೆಂದು ಆ ಹಲ್ಲೆಗಳನ್ನು ಸಮರ್ಥಿಸಬೇಕಾಗಿಲ್ಲ. ಖಂಡಿತವಾಗಿ ಅಂತಹ ಹಲ್ಲೆಗಳು ನಿಲ್ಲಬೇಕಾಗಿದೆ. ಯಾಕೆಂದರೆ ವೈದ್ಯರೂ ನಮ್ಮಂತೆಯೇ ಮನುಷ್ಯರು. ಆದರೆ ರೋಗಿಗಳು ಪ್ರತಿಭಟಿಸಲೇ ಬಾರದು ಎನ್ನುವ ನಿಲುವು ವೈದ್ಯೋದ್ಯಮದ ಅತ್ಯಂತ ಸರ್ವಾಧಿಕಾರವನ್ನು ಹೇಳುತ್ತದೆ. ವೈದ್ಯರ ಜೀವಕ್ಕೆ ಬೆಲೆಯಿದ್ದಂತೆಯೇ ರೋಗಿಗಳ ಜೀವಕ್ಕೂ ಬೆಲೆಯಿದೆ. ಇಷ್ಟಕ್ಕೂ ತಮ್ಮ ಆಪ್ತರಿಗೆ ಅನಾಹುತ ಸಂಭವಿಸಿದಾಗ ಒಮ್ಮೆಲೇ ಆಕ್ರೋಶಗೊಳ್ಳುವುದು ಸಹಜ.

ಅಷ್ಟಕ್ಕೇ ಅವರ ಮೇಲೆ ಗೂಂಡಾಕಾಯ್ದೆಗಳನ್ನು ಜಾರಿಗೊಳಿಸುವುದು, ಅವರ ಮೇಲೆ ಕ್ರಿಮಿನಲ್‌ಗಳ ಮೇಲೆ ಪ್ರಯೋಗಿಸುವ ಕಠಿಣ ಕಾಯ್ದೆಗಳನ್ನು ಪ್ರಯೋಗಿಸುವುದು ಅಮಾನವೀಯವಾಗಿದೆ. ರೋಗಿಗಳ ಆಕ್ರೋಶ ಯಾವುದೇ ದುರುದ್ದೇಶಗಳಿಂದ ಹೊಮ್ಮಿರುವುದಲ್ಲ, ಅಸಹಾಯಕತೆ, ಹತಾಶೆಯಿಂದ ಹೊರಬಂದಿರುವುದು. ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸುವ ರೋಗಿಗಳ ಮೇಲೆ ಕಠಿಣ ಕಾನೂನನ್ನು ಜಾರಿಗೊಳಿಸುವುದರ ಹಿಂದೆ ವೈದ್ಯೋದ್ಯಮದ ಕೈವಾಡಗಳಿವೆ. ಈ ಕಾನೂನನ್ನು ವೈದ್ಯರು ದುರುಪಯೋಗಗೊಳಿಸುವ ಎಲ್ಲ ಸಾಧ್ಯತೆಗಳೂ ಇವೆ. ನಾಳೆ ವೈದ್ಯರ ಲೋಪಗಳನ್ನು, ವೈದ್ಯರ ಹಣದ ದುರಾಸೆಯನ್ನು ಪ್ರತಿಭಟಿಸುವವರ ವಿರುದ್ಧವೂ ಈ ಕಾನೂನು ದುರ್ಬಳಕೆಗೊಳಿಸಬಹುದು. ಕಾರ್ಪೊರೇಟ್ ವೈದ್ಯೋದ್ಯಮ ತಮ್ಮನ್ನು ಯಾವ ರೋಗಿಗಳೂ ಪ್ರಶ್ನಿಸದಂತೆ ಮಾಡುವ ಸಂಚಿನ ಭಾಗವಾಗಿದೆ ಪಶ್ಚಿಮಬಂಗಾಳದಲ್ಲಿ ಹುಟ್ಟಿದ ಪ್ರತಿಭಟನೆ. ಈಗಾಗಲೇ ಪ್ರತಿಭಟನೆಗೆ ಪಶ್ಚಿಮಬಂಗಾಳ ಸರಕಾರ ಮಾತ್ರವಲ್ಲ, ಇಡೀ ದೇಶವೇ ಮಣಿದಿದೆ. ಅವರ ಪರವಾಗಿ ಕಠಿಣ ಕಾನೂನನ್ನು ರೂಪಿಸಲು ಕೇಂದ್ರ ಸರಕಾರವೇ ರಾಜ್ಯಗಳಿಗೆ ಆದೇಶ ನೀಡಿದೆ. ಇದು ಶ್ರೀಸಾಮಾನ್ಯರ ಪಾಲಿಗೆ ಅಪಾಯಕಾರಿ ನಿಲುವಾಗಿದೆ. ವೈದ್ಯರು ಮತ್ತು ರೋಗಿಗಳ ನಡುವಿನ ಗೋಡೆಗಳನ್ನು ಇದು ಹೆಚ್ಚಿಸಲಿದೆ.

ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಗಳನ್ನು ರಾಷ್ಟ್ರಮಟ್ಟದ ಸಮಸ್ಯೆಯಾಗಿಸಿ, ಲಕ್ಷಾಂತರ ರೋಗಿಗಳನ್ನು, ಅಸಹಾಯಕರನ್ನು ವೈದ್ಯರು ಬೀದಿಗೆ ತಳ್ಳಿದರು. ಒಂದು ರೀತಿಯಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ರೋಗಿಗಳನ್ನು ಒತ್ತೆಯಾಳುಗಳನ್ನಾಗಿಸಿ ಸರಕಾರವನ್ನು ಬ್ಲಾಕ್ ಮೇಲ್ ಮಾಡಿದರು. ಇದೇ ಸಂದರ್ಭದಲ್ಲಿ ಪಶ್ಚಿಮಬಂಗಾಳ ಸರಕಾರವನ್ನು ಮುಜುಗರಕ್ಕೆ ತಳ್ಳಲು ಬಿಜೆಪಿ ಮತ್ತು ಆರೆಸ್ಸೆಸ್ ವೈದ್ಯರನ್ನು ಬಳಸಿಕೊಂಡಿತು ಎನ್ನುವ ಆರೋಪಗಳಿವೆ. ಪಶ್ಚಿಮಬಂಗಾಳದಲ್ಲಿ ಶ್ರೀಸಾಮಾನ್ಯನ ಹಾಹಾಕಾರ ಸರಕಾರದ ವಿರುದ್ಧ ತಿರುಗುವುದಕ್ಕೆ ನಡೆಸಿದ ಪೂರ್ವನಿಯೋಜಿತ ಮುಷ್ಕರ ಎಂದೂ ವಿಶ್ಲೇಷಿಸಲಾಗುತ್ತಿದೆ. ವೃತ್ತಿಧರ್ಮವನ್ನು ಮರೆತು, ರೋಗಿಗಳ ಹಣೆಗೆ ಕೋವಿಯಿಟ್ಟು ತಮ್ಮ ಉದ್ದೇಶಸಾಧಿಸಲು ಹೊರಟ ವೈದ್ಯರ ವರ್ತನೆ ಕ್ರೌರ್ಯದ ಪರಮಾಧಿಯೇ ಸರಿ. ಇಂದು ದೇಶಾದ್ಯಂತ ಹಲ್ಲೆ ನಡೆಯುತ್ತಿರುವುದು ವೈದ್ಯರ ಮೇಲೆ ಮಾತ್ರ ಅಲ್ಲ. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪೊಲೀಸರೇ ಪರ್ತ್ರಕರ್ತರ ಮೇಲೆ ಬರ್ಬರವಾಗಿ ಹಲ್ಲೆ ನಡೆಸುತ್ತಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಮೇಲೆಯೂ ಹಲ್ಲೆಗಳು ಪದೇ ಪದೇ ನಡೆಯುತ್ತಿವೆ. ಆದರೆ ಅವರೆಂದೂ ತಮ್ಮ ಕರ್ತವ್ಯವನ್ನು ನಿಲ್ಲಿಸಿ ಬೀದಿಗಿಳಿದಿಲ್ಲ. ಅಷ್ಟೇ ಏಕೆ? ಸೇನೆಯಲ್ಲಿ ಸೈನಿಕರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂಬ ಆರೋಪ ಆಗಾಗ ಕೇಳಿ ಬರುತ್ತಿವೆ. ಆದರೆ ಯಾವತ್ತೂ ಅವರು ತಮ್ಮ ಕರ್ತವ್ಯ ತೊರೆದು ಪ್ರತಿಭಟನೆಗೆ ಇಳಿದಿಲ್ಲ. ಒಂದು ವೇಳೆ ಹಾಗೆ ಇಳಿದರೆ ಈ ದೇಶದ ಸ್ಥಿತಿ ಏನಾಗಬೇಕು? ವಿವಿಧ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಹಲ್ಲೆಗಳಿಗೆ ಹೋಲಿಸಿದರೆ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳ ಸಂಖ್ಯೆ ತೀರ ಕಡಿಮೆ. ಮಾತ್ರವಲ್ಲ, ಉಳಿದ ಹಲ್ಲೆಗಳಿಗೆ ಇರುವ ಕಾರಣಗಳಿಗಿಂತ ಭಿನ್ನವಾದುದು. ಆದುದರಿಂದ ವೈದ್ಯರ ಮೇಲೆ ನಡೆಯುವ ಹಲ್ಲೆಗಳನ್ನಷ್ಟೇ ವೈಭವೀಕರಿಸಿ, ಅವರ ಪರವಾಗಿ ಕಠಿಣ ಕಾನೂನುಗಳನ್ನು ರೂಪಿಸುವ ಬದಲು ಸಮಾಜದ ಸರ್ವರ ಹಿತ ಕಾಯುವ, ಅವರಿಗೆ ಅವರ ವೃತ್ತಿಯನ್ನು ನಿರ್ವಹಿಸಲು ಯಾವುದೇ ಅಡ್ಡಿ ಆತಂಕಗಳು ಇರದಂತೆ ಮಾಡುವ ಆದರ್ಶ ಕಾನೂನನ್ನು ರೂಪಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News