ಇತರ ನಾಗರಿಕರ ವೆಚ್ಚದಲ್ಲಿ ವೈದ್ಯರಿಗೆ ರಕ್ಷಣೆಯೊದಗಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

Update: 2019-06-18 09:17 GMT

ಹೊಸದಿಲ್ಲಿ : ಪಶ್ಚಿಮ ಬಂಗಾಳದಲ್ಲಿ ವೈದ್ಯರು ತಮ್ಮ ಮುಷ್ಕರ ಕೈಬಿಟ್ಟಿರುವುದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ರಕ್ಷಣೆಯೊದಗಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅಪೀಲಿನ ಮೇಲಿನ ವಿಚಾರಣೆಯನ್ನು ನಡೆಸುವ ತುರ್ತು ಏನಿಲ್ಲ ಎಂದು ಮಂಗಳವಾರ ಹೇಳಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.

ಜಸ್ಟಿಸ್ ದೀಪಕ್ ಗುಪ್ತಾ ಹಾಗೂ ಜಸ್ಟಿಸ್ ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು ಕೇಂದ್ರಕ್ಕೆ ನೋಟಿಸ್ ನೀಡುವುದಿಲ್ಲ ಎಂದು ಹೇಳಿತು.

"ವೈದ್ಯರು ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಮುಷ್ಕರ ನಡೆಸುತ್ತಿದ್ದುದರಿಂದ ಈ ಅರ್ಜಿ ಮೇಲಿನ ವಿಚಾರಣೆಯನ್ನು ಇಂದು ನಡೆಸಲು ನಾವು ಒಪ್ಪಿದ್ದೆವು. ಆದರೆ ಈಗ ಮುಷ್ಕರ ಕೈಬಿಡಲಾಗಿರುವುದರಿಂದ ಈ ಪ್ರಕರಣವನ್ನು ಸೂಕ್ತ ಪೀಠದ ಮುಂದಿಡಲಾಗುವುದು,'' ಎಂದು ನ್ಯಾಯಪೀಠ ಹೇಳಿದೆ.

ಈಗಾಗಲೇ ಸಲ್ಲಿಕೆಯಾಗಿರುವ ಅಪೀಲಿನ ಆಧಾರದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕೂಡ ಇಂಪ್ಲೀಡ್ಮೆಂಟ್ ಅರ್ಜಿ ಸಲ್ಲಿಸಿದ್ದು ವೈದ್ಯರಿಗೆ ದೇಶಾದ್ಯಂತ ರಕ್ಷಣೆ ಒದಗಿಸಲು  ನ್ಯಾಯಾಲಯದ ಹಸ್ತಕ್ಷೇಪಕ್ಕೆ ಮನವಿ ಮಾಡಿದೆ. ಈ ವಿಚಾರವನ್ನು ಸಮಗ್ರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದ ನ್ಯಾಯಾಲಯ, "ಇದು ಗಂಭೀರ ವಿಚಾರ ಎಂದು ನಮಗೆ ಅರ್ಥವಾಗುತ್ತದೆ ಆದರೆ ಇತರ ನಾಗರಿಕರ ವೆಚ್ಚದಲ್ಲಿ ವೈದ್ಯರಿಗೆ ರಕ್ಷಣೆಯೊದಗಿಸಲು ಸಾಧ್ಯವಿಲ್ಲ. ಆದರೆ ನಾವು  ವೈದ್ಯರಿಗೆ ರಕ್ಷಣೆ ನೀಡುವುದಕ್ಕೆ ವಿರೋಧವಲ್ಲ,'' ಎಂದು ಪೀಠ ಸ್ಪಷ್ಟ ಪಡಿಸಿದೆ.

ದೇಶಾದ್ಯಂತ ಶೇ 75ಕ್ಕಿಂತಲೂ ಹೆಚ್ಚಿನ ವೈದ್ಯರು ಒಂದಲ್ಲಾ ಒಂದು ವಿಧದಲ್ಲಿ ಹಿಂಸೆ ಅನುಭವಿಸಿದ್ದಾರೆ, ಶೇ 50ರಷ್ಟು ಪ್ರಕರಣಗಳು ಐಸಿಯುವಿನಲ್ಲಿ ನಡೆದಿದ್ದರೆ ಶೇ 70ರಷ್ಟು ಪ್ರಕರಣಗಳಲ್ಲಿ ರೋಗಿಗಳ ಸಂಬಂಧಿಗಳೂ ಶಾಮೀಲಾಗಿದ್ದಾರೆಂಬ ಐಎಂಎ ಅಧ್ಯಯನಾ ವರದಿಯನ್ನು ಅಪೀಲುದಾರರು ಉಲ್ಲೇಖಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News