ರಾಜ್ಯ ರಾಜಧಾನಿಯಲ್ಲಿ ಅಂತರ್ಜಲ ಬರಿದಾಗುವ ಕಾಲ ಸನ್ನಿಹಿತ

Update: 2019-06-18 14:35 GMT

ಬೆಂಗಳೂರು, ಜೂ.18: ರಾಜ್ಯದ ರಾಜಧಾನಿಯಲ್ಲಿ ಅಂತರ್ಜಲ ಮರುಪೂರಣ ಮಾಡದೇ ಕೇವಲ ಬಳಕೆಯತ್ತ ಗಮನ ಹರಿಸಿದರೆ ತೀವ್ರ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ನೀತಿ ಆಯೋಗ ಎಚ್ಚರಿಸಿದ್ದರೂ, ಪಾಲಿಕೆ ನಿರ್ಲಕ್ಷಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಬೆಂಗಳೂರು ನಗರದಲ್ಲಿ ಈಗ 3.70 ಲಕ್ಷ ಕೊಳವೆಬಾವಿಗಳಿವೆ. ಅದರಲ್ಲಿ ಬಹುತೇಕ ಕಡೆ ನೀರು ನಿಂತು ಹೋಗಿದ್ದು, ಕೆಲವು ಕಡೆ ಸಣ್ಣ ಪ್ರಮಾಣದಲ್ಲಿ ನೀರಿದೆ. ಕಳೆದ ವರ್ಷ ಕೊರೆಸಿದ ಶೇ.25 ರಷ್ಟು ಬೋರ್‌ವೆಲ್‌ಗಳಲ್ಲಿ ನೀರಿಲ್ಲ. ನಗರದಲ್ಲಿ ಮುಂದಿನ 8-10 ವರ್ಷಗಳಲ್ಲಿ ಶೇ.80 ರಷ್ಟು ನೀರು ಬರಿದಾಗುತ್ತದೆ. ಮುಂದಿನ 2-3 ವರ್ಷಗಳಲ್ಲಿ ಸಂಪೂರ್ಣ ಅಂತರ್ಜಲ ಖಾಲಿಯಾಗುತ್ತದೆ ಎಂದು 2017ರಲ್ಲಿ ನೀತಿ ಆಯೋಗ ಹೇಳಿದ್ದು, ಅಲ್ಲದೆ, ರಾಜಧಾನಿ ಸೇರಿ ರಾಜ್ಯದ ಎರಡು-ಮೂರು ಜಿಲ್ಲೆಗಳಲ್ಲಿಯೂ ಅಂತರ್ಜಲ ಮಟ್ಟ ತೀವ್ರ ಅಪಾಯದಲ್ಲಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿ ಎಚ್ಚರಿಕೆ ನೀಡಿತ್ತು. ಇದೀಗ ಅದು ನಿಜವಾಗುವ ಎಲ್ಲ ಸಾಧ್ಯತೆಗಳು ಎದ್ದು ಕಾಣುತ್ತಿವೆ.

ಬಿಬಿಸಿ ಪ್ರಕಟಿಸಿದ್ದ ನೀರಿನ ಮೂಲಗಳಿಲ್ಲದ ವಿಶ್ವದ 11 ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆದಿತ್ತು. ಬಳಿಕ ಯಾವುದೇ ಆತಂಕವಿಲ್ಲ ಎಂದು ಪ್ರಕಟಿಸಿದ್ದ ಸರಕಾರ, ಕಾವೇರಿ 5 ನೇ ಹಂತದ ವಿಸ್ತರಣೆ ಜತೆಗೆ ತುಂಗಭದ್ರೆವರೆಗೂ ಅವಕಾಶವಿದೆ ಎಂದು ಸಾರಿತ್ತು. ಆದರೆ, ಎಲ್ಲ ಜಲಾಶಯಗಳು ದೂರವಿರುವುದರಿಂದ ಇದು ಅನುಷ್ಠಾನ ಕಷ್ಟ ಎನ್ನಲಾಗುತ್ತಿದೆ.

ನಗರದಲ್ಲಿ ಆಗಬೇಕಾದ ಕೆಲಸಗಳೇನು?

-ಸರಕಾರ ಎಲ್ಲೆಡೆ ಮಳೆ ನೀರು ಸಂಗ್ರಹಕ್ಕೆ ಪ್ರಥಮ ಆದ್ಯತೆ ನೀಡಬೇಕು.

-ನೀರಿನ ಮಿತ ಬಳಕೆ ಕುರಿತು ಜಾಗೃತಿ ಮೂಡಿಸಬೇಕು

-ಕೆರೆಗಳ ಒತ್ತುವರಿ ತೆರವು ಮಾಡಿ, ನೀರು ತುಂಬಿಸಬೇಕು.

-ಹೆಚ್ಚು ಪರಿಸರದ ಅಭಿವೃದ್ಧಿ ಕಡೆಗೆ ಗಮನ ನೀಡಬೇಕು.

-ವಾಹನಗಳ ಸ್ವಚ್ಛತೆಗೆ ನೀರಿನ ಬಳಕೆ ಬದಲಿಗೆ ಡ್ರೈವಾಶ್‌ನತ್ತ ಮುಂದಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News