ವಿದ್ಯಾರ್ಥಿಗಳಿಗೆ ಇತಿಹಾಸ ನೆನಪಿಸಬೇಕಾದ ಅಗತ್ಯವಿದೆ: ಡಾ.ಎಚ್.ರಾಮರಾವ್

Update: 2019-06-18 17:22 GMT

ಬೆಂಗಳೂರು, ಜೂ.18: ಇಂದಿನ ಕಂಪ್ಯೂಟರ್ ಯುಗದಲ್ಲಿ ಯುವ ಸಮುದಾಯಕ್ಕೆ ಇತಿಹಾಸವನ್ನು ನೆನಪಿಸಬೇಕಾದ ಅಗತ್ಯವಿದೆ ಎಂದು ನ್ಯಾಷನಲ್ ಕಾಲೇಜು ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ಎ.ಎಚ್.ರಾಮರಾವ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ನ್ಯಾಷನಲ್ ಕಾಲೇಜಿನಲ್ಲಿ ಸಮುದಾಯ ಸಂಘಟನೆಯಿಂದ ಆಯೋಜಿಸಿದ್ದ ಜಲಿಯನ್ ವಾಲಾಬಾಗ್ ಶತಮಾನದ ಸ್ಮರಣೆ, ವಿದ್ಯಾರ್ಥಿ-ಯುವಜನರ ಜೊತೆ ಸ್ವಾತಂತ್ರ ಸಂಗ್ರಾಮದ ನೆನಪುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಯುವ ಸಮುದಾಯ ಪ್ರತಿದಿನವೂ ಮೊಬೈಲ್‌ನಲ್ಲಿಯೇ ಕಾಲ ಕಳೆಯುತ್ತಾರೆ. ಅವರಿಗೆ ಇತಿಹಾಸವನ್ನು ಅರ್ಥ ಮಾಡಿಸಬೇಕಾದ ಅಗತ್ಯವಿದೆ ಎಂದು ನುಡಿದರು.

ಭಾರತ ದೇಶ ಸ್ವಾತಂತ್ರ ಪಡೆಯಲು ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ. ಅದರಲ್ಲಿ ಜಲಿಯನ್ ವಾಲಾಬಾಗ್ ದುರಂತವೂ ಒಂದಾಗಿದೆ. ಬ್ರಿಟಿಷ್ ಅಧಿಕಾರಿಯ ಕ್ರೂರತನದಿಂದ ಸಾವಿರಾರು ಸಂಖ್ಯೆಯಲ್ಲಿ ಅಮಾಯಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡು. ನಮ್ಮ ಇತಿಹಾಸವನ್ನು ಇಂದಿನ ವಿದ್ಯಾರ್ಥಿ-ಯುವಜನರು ಅರಿಯಬೇಕು. ಆ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ನುಡಿದರು.

ಪಂಜಾನ್‌ನ ಅಮೃತಸರದಲ್ಲಿರುವ ಜಲಿಯನ್ ವಾಲಾಬಾಗ್‌ನಲ್ಲಿ ಇಬ್ಬರು ದೇಶಪ್ರೇಮಿಗಳನ್ನು ಬ್ರಿಟಿಷರು ದೇಶದ್ರೋಹಿಗಳೆಂದು ಬಿಂಬಿಸಿ ಅಪಪ್ರಚಾರ ಮಾಡುತ್ತಿದ್ದರು. ಇದನ್ನು ಖಂಡಿಸುವ ಸಲುವಾಗಿ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಆದರೆ, ಅಂದಿನ ಬ್ರಿಟಿಷ್ ಅಧಿಕಾರಿ ಒಳಗೆ ಪ್ರವೇಶಿಸಲು ಇದ್ದ ಒಂದೇ ಬಾಗಿಲಿನಿಂದ ನೂರಾರು ಸಂಖ್ಯೆಯಲ್ಲಿ ಪೊಲೀಸರು ಒಳನುಸುಳಿ, ಬಾಗಿಲು ಮುಚ್ಚಿ ಗುಂಡು ಹಾರಿಸಿ ಕೊಂದರು. ಅದು ನಮ್ಮ ದೇಶದ ಸ್ವಾತಂತ್ರ ಹೋರಾಟ ಬಲಗೊಳ್ಳಲು ಮತ್ತಷ್ಟು ಆಕ್ರೋಶವನ್ನು ಹುಟ್ಟುಹಾಕಿತು ಎಂದು ತಿಳಿಸಿದರು.

ಸಮುದಾಯ ಸಂಘಟನೆಯ ಕೆ.ಎಸ್.ವಿಮಲಾ ಮಾತನಾಡಿ, ಭಾರತೀಯ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿರುವ ಜಲಿಯನ್ ವಾಲಾಬಾಗ್ ದುರಂತ ನಡೆದು ಇಂದಿಗೆ ನೂರು ವರ್ಷಗಳು ಕಳೆಯುತ್ತಿವೆ. ಆದರೆ, ಇಂದಿಗೂ ಬ್ರಿಟಿಷರು ನಡೆಸುತ್ತಿದ್ದ ದಬ್ಬಾಳಿಕೆ, ದೌರ್ಜನ್ಯವನ್ನು ನೆನಪಿಸುತ್ತಿದೆ. ಈ ದುರಂತದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲರೂ ಮಡಿದಿದ್ದರು ಎಂದು ಹೇಳಿದರು.

ಬ್ರಿಟಿಷರು ತಂದ ರೌಲಟ್ ಕಾಯ್ದೆಯನ್ನು ವಿರೋಧಿಸಿ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿನ ಜಲಿಯನ್ ವಾಲಾಬಾಗ್‌ನಲ್ಲಿ ಸೇರಿ ಸಿಖ್‌ರ ಪ್ರಮುಖ ಹಬ್ಬವಾದ ಬೈಸಾಖಿಯನ್ನು ಆಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಒಳನುಗ್ಗಿದ ಅಂದಿನ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಸಭೆ ಸೇರಿದ್ದ ಭಾರತೀಯರ ಮೇಲೆ ಗುಂಡು ಹಾರಿಸಿದ. ಈ ವೇಳೆ ಸಾವಿರಾರು ಜನರು ಮೃತಪಟ್ಟರೆ, ನೂರಾರು ಜನರಿಗೆ ತೀವ್ರವಾದ ಗಾಯಗಳಾದವು. ಈ ದುರಂತದಿಂದ ರೊಚ್ಚಿಗೆದ್ದ ಲಕ್ಷಾಂತರ ಜನರು ಬ್ರಿಟಿಷರ ವಿರುದ್ಧ ಅನೇಕ ಕ್ರಾಂತಿಕಾರಿ ಹೋರಾಟಗಳನ್ನು ಕಟ್ಟಿದರು ಎಂದು ತಿಳಿಸಿದರು.

ಜಲಿಯನ್ ವಾಲಾಬಾಗ್‌ನಲ್ಲಿ ಅಂದು ಮಕ್ಕಳು, ವಯಸ್ಕರು, ಯುವಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ಹೀಗೆ ಎಲ್ಲ ವರ್ಗಗಳಿಗೂ ಸೇರಿದವರಿದ್ದರು. ಬ್ರಿಟಿಷ್ ಪೊಲೀಸರು ಸುಟ್ಟ ಒಂದೇ ಒಂದು ಗುಂಡೂ ವ್ಯರ್ಥವಾಗಿರಲಿಲ್ಲ. ಇಂದಿಗೂ ಅಲ್ಲಿರುವ ಬೃಹತ್ ಗೋಡೆಯ ಮೇಲೆ ರಕ್ತದ ಕಲೆಗಳು ಹಾಗೂ ಗುಂಡು ಹೊಡೆದಿರುವ ಕಲೆಗಳು ಇವೆ ಎಂದರು. ಕಾರ್ಯಕ್ರಮದಲ್ಲಿ ನ್ಯಾಷನಲ್ ಪಿಯು ಕಾಲೇಜಿನ ಪ್ರಾಂಶುಪಾಲ ವಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News