ವಿಶೇಷ ಸ್ಥಾನಮಾನ ಕೋರಿ ನಿರ್ಣಯ ಜಾರಿ ಮಾಡಿದ ಆಂಧ್ರ ವಿಧಾನಸಭೆ

Update: 2019-06-18 17:41 GMT

ಅಮರಾವತಿ, ಜೂ.18: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡಿ ಎಲ್ಲ ರೀತಿಯ ಆರ್ಥಿಕ ಮತ್ತು ಕೈಗಾರಿಕಾ ಲಾಭಗಳನ್ನು ಒದಗಿಸುವಂತೆ ಕೋರಿ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಮಂಗಳವಾರ ನಿರ್ಣಯ ಜಾರಿ ಮಾಡಲಾಗಿದೆ. 2014ರ ಆಂಧ್ರ ಪ್ರದೇಶ ಮರುಸಂಘಟನಾ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿರುವ ಎಲ್ಲ ಭರವಸೆಗಳು ಮತ್ತು ನಿಬಂಧನೆಗಳನ್ನು ಪೂರ್ಣಗೊಳಿಸುವಂತೆಯೂ ಈ ವೇಳೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಸರಕಾರ ನೀಡಿದರೂ ವಿಶೇಷ ಸ್ಥಾನಮಾನವನ್ನು ಪಡೆದುಕೊಳ್ಳುವಲ್ಲಿ ತೆಲುಗು ದೇಶಂ ಪಕ್ಷ ವಿಫಲವಾಗಿದೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಆರೋಪಿಸಿದೆ. ವಿಶೇಷ ಸ್ಥಾನಮಾನ ಒಂದು ಅತ್ಯಗತ್ಯ ಜೀವಧಾರೆಯಾಗಿದ್ದು ವಿಭಜನೆಯಿಂದ ಉಂಟಾಗಿರುವ ಆರ್ಥಿಕ ಮತ್ತು ವಿತ್ತೀಯ ಕೊರತೆಯನ್ನು ನಿಬಾಯಿಸಲು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ವೈ.ಎಸ್ ಜಗನ್‌ಮೋಹನ್ ರೆಡ್ಡಿ ತಿಳಿಸಿದ್ದಾರೆ. 2014ರ ಮಾರ್ಚ್ 2ರಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ನಿರ್ಣಯ ಕೈಗೊಳ್ಳಲಾಗಿತ್ತು ಮತ್ತು ಈ ನಿರ್ಧಾರವನ್ನು ಶೀಘ್ರ ಜಾರಿಗೆ ತರಲು ಯೋಜನಾ ಆಯೋಗಕ್ಕೆ ಸೂಚಿಸಲಾಗಿತ್ತು ಎಂದು ರೆಡ್ಡಿ ತನ್ನ ನಿರ್ಣಯದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News