ಮುಂದಿನ ವರ್ಷ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದಲ್ಲಿ ಇರುವುದಿಲ್ಲ : ವಸೀಂ ಅಕ್ರಂ

Update: 2024-05-08 16:52 GMT

 ರೋಹಿತ್ ಶರ್ಮಾ ,  ವಸೀಂ ಅಕ್ರಂ | PC : NDTV 

ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದಾಗ ಕಳವಳ ವ್ಯಕ್ತಪಡಿಸಿದ್ದ ಪಾಕಿಸ್ತಾನದ ಮಾಜಿ ನಾಯಕ ವಸೀಂ ಅಕ್ರಂ, ಐದು ಬಾರಿ ಐಪಿಎಲ್ ಪ್ರಶಸ್ತಿ ವಿಜೇತ ನಾಯಕ ರೋಹಿತ್ ಮುಂಬರುವ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡೈನಾಮಿಕ್ ಓಪನರ್ ಮುಂಬರುವ ಋತುವಿನಲ್ಲಿ ಎರಡು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೇರುವ ಬಯಕೆಯನ್ನು ಅಕ್ರಂ ವ್ಯಕ್ತಪಡಿಸಿದ್ದಾರೆ.

ರೋಹಿತ್ ಮುಂಬರುವ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಇರಲಾರರು. ಅವರು ಕೆಕೆಆರ್ ತಂಡದಲ್ಲಿ ಇರುವುದನ್ನು ನೋಡಲು ಬಯಸುವೆ. ಕೆಕೆಆರ್ ತಂಡದಲ್ಲಿ ಗೌತಮ್ ಗಂಭೀರ್ ಮೆಂಟರ್ ಆಗಿದ್ದು, ಶ್ರೇಯಸ್ ಅಯ್ಯರ್ ನಾಯಕನಾಗಿದ್ದಾರೆ. ಈಡನ್ ಗಾರ್ಡನ್ಸ್ ಪಿಚ್‌ನಲ್ಲಿ ಕೆಕೆಆರ್ ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿದೆ. ರೋಹಿತ್ ಯಾವುದೇ ಪಿಚ್‌ನಲ್ಲಿ ಚೆನ್ನಾಗಿ ಆಡಬಲ್ಲರು. ಅವರೊಬ್ಬ ಶ್ರೇಷ್ಠ ಆಟಗಾರ. ಅವರು ಕೆಕೆಆರ್ ತಂಡದಲ್ಲಿದ್ದರೆ ಉತ್ತಮ ಎಂದು ಅಕ್ರಮ್ ಅವರು ಸ್ಪೋರ್ಟ್ಸ್ ಕ್ರೀಡಾಗೆ ತಿಳಿಸಿದ್ದಾರೆ.

ಎಪ್ರಿಲ್ 14ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶತಕ ಗಳಿಸಿದ ನಂತರ ರೋಹಿತ್ ಪ್ರಸಕ್ತ ಐಪಿಎಲ್ ಋತುವಿನಲ್ಲಿ ರನ್ ಬರ ಎದುರಿಸುತ್ತಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.

ರೋಹಿತ್ ಇತ್ತೀಚೆಗೆ ರಾಜಸ್ಥಾನ ರಾಯಲ್ಸ್ ವಿರುದ್ಧ 6, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8, ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ 4, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 11 ಹಾಗೂ ಹೈದರಾಬಾದ್ ವಿರುದ್ಧ 4 ರನ್ ಗಳಿಸಿದ್ದಾರೆ. ರೋಹಿತ್ ಸತತವಾಗಿ ಒಂದಂಕಿ ಸ್ಕೋರ್‌ಗೆ ವಿಕೆಟ್ ಒಪ್ಪಿಸುತ್ತಿರುವುದು ಚಿಂತೆಯ ವಿಚಾರವಾಗಿದೆ.

ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ಬಿಟ್ಟುಕೊಟ್ಟಿರುವ ರೋಹಿತ್ ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ನೇತೃತ್ವವಹಿಸಲಿದ್ದು, ಹಾರ್ದಿಕ್ ಉಪ ನಾಯಕನಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News