ಬಿಜೆಪಿಯ ಇಬ್ಬರು ಮಹಾನ್ ನಾಯಕಿಯರ ಇನಿಂಗ್ಸ್ ಅಂತ್ಯ ?

Update: 2019-06-19 04:00 GMT

ಹೊಸದಿಲ್ಲಿ: ಬಿಜೆಪಿಯ ಇಬ್ಬರು ಮಹಾನ್ ನಾಯಕಿಯರು ಎನಿಸಿಕೊಂಡ ವಿದೇಶಾಂಗ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ (67) ಹಾಗೂ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ (76) ಅವರ ರಾಜಕೀಯ ಇನಿಂಗ್ಸ್ ಮುಕ್ತಾಯದ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಿವೆ.

ಇಬ್ಬರೂ ಮಾಜಿ ಸಂಸದರಿಗೆ ನೀಡಲಾಗುವ ಗುರುತಿನ ಚೀಟಿಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದು, ಇದರಿಂದಾಗಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ಸಾಧ್ಯತೆಯೂ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.

ಹದಿನಾರನೇ ಲೋಕಸಭೆಯಲ್ಲಿ ಸುಷ್ಮಾ ಸ್ವರಾಜ್ ಹಾಗೂ ಸುಮಿತ್ರಾ ಕ್ರಮವಾಗಿ ಮಧ್ಯಪ್ರದೇಶದ ವಿದಿಶಾ ಹಾಗೂ ಇಂದೋರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅನಾರೋಗ್ಯ ಕಾರಣದಿಂದ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸುಷ್ಮಾ ಸ್ವರಾಜ್ ಒಂದು ವರ್ಷದ ಹಿಂದೆಯೇ ಘೋಷಿಸಿದ್ದರು.

ಎಂಟು ಬಾರಿ ಇಂಧೋರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಹಾಜನ್ ಕಳೆದ ಏಪ್ರಿಲ್‌ನಲ್ಲಿ ಬಹಿರಂಗ ಪತ್ರ ಬರೆದು, ಇಂಧೋರ್ ಅಭ್ಯರ್ಥಿ ಘೋಷಣೆಗೆ ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಆ ಬಳಿಕ ಘೋಷಿಸಿದ್ದರು. ಈ ಇಬ್ಬರು ಮುತ್ಸದ್ಧಿ ನಾಯಕಿಯರಿಗೆ ಮೇಲ್ಮನೆಯಲ್ಲಿ ಕೂಡಾ ಅವಕಾಶ ಇಲ್ಲ ಎನ್ನುವ ಸ್ಪಷ್ಟ ಸೂಚನೆ ಇದೀಗ ಸಿಕ್ಕಿದೆ.

ರಾಜಸ್ಥಾನದ ಕೋಟಾ ಸಂಸದ ಓಂ ಬಿರ್ಲಾ ಅವರನ್ನು 17ನೇ ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಬಿಜೆಪಿ ನೇಮಕ ಮಾಡಿದ ದಿನವೇ ಪಾರ್ಲಿಮೆಂಟರಿ ನೋಟಿಸ್ ಆಫೀಸ್ (ಪಿಎನ್‌ಓ) ಮಹಾಜನ್ ಅವರ ಅರ್ಜಿಯನ್ನು ಆಂಗೀಕರಿಸಿತ್ತು. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ವಿದಾಯ ಸಭೆ ನಡೆಸಿದ ಮಹಾಜನ್, ನೂತನ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಅಭಿನಂದಿಸಿದ್ದರು.

ಮಂಗಳವಾರ ಅವರಿಗೆ ಮಾಜಿ ಸಂಸದೆ ಎಂಬ ಗುರುತಿನ ಚೀಟಿ ನೀಡಲಾಗಿದೆ ಎಂದು ಅವರ ವಕ್ತಾರ ಪಂಕಜ್ ಕ್ಷೀರಸಾಗರ ದೃಢಪಡಿಸಿದ್ದಾರೆ.
ಆದರೆ ಏಳು ಬಾರಿ ಸಂಸದೆಯಾಗಿದ್ದ ಸುಷ್ಮಾ ಸ್ವರಾಜ್ ಅವರಿಗೆ ಮಾಜಿ ಸಂಸದೆ ಕಾರ್ಡ್ ನೀಡಿರುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಲೋಕಸಭೆ ಕಾರ್ಯಾಲಯ, ಸ್ವರಾಜ್ ಅವರು ಅರ್ಜಿ ಸಲ್ಲಿಸಿರುವುದನ್ನು ದೃಢಪಡಿಸಿದೆ.

"ಸದಸ್ಯರು ತಮ್ಮ ಹಾಲಿ ಕಾರ್ಡ್ ಒಪ್ಪಿಸಬೇಕು ಹಾಗೂ ಮೂರು ಪಾಸ್‌ಪೋರ್ಟ್ ಫೋಟೊ ಲಗತ್ತಿಸಿ ಅರ್ಜಿ ಸಲ್ಲಿಸಬೇಕು" ಎಂದು ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ. ಮೂರು ದಶಕಗಳ ಕಾಲ ಸಂಸತ್ತಿನಲ್ಲಿದ್ದ ಸುಷ್ಮಾ ಸ್ವರಾಜ್ 1998ರಲ್ಲಿ ಅಲ್ಪಾವಧಿಗೆ ದೆಹಲಿ ಮುಖ್ಯಮಂತ್ರಿಯೂ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News