ಎಸ್‌ಟಿಪಿ ದುರಂತ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಭೇಟಿ

Update: 2019-06-19 05:50 GMT

ಬೆಂಗಳೂರು: ಹೆಬ್ಬಾಳದ ಎಸ್‌ಟಿಪಿ ದುರಂತ ಸಂಬಂಧ ಈಗಾಗಲೇ ತನಿಖೆ ನಡೆಸಲಾಗುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಹೆಬ್ಬಾಳದ ಎಸ್‌ಟಿಪಿ ದುರಂತದ ಸ್ಥಳಕ್ಕೆ ಭೇಟಿ ನೀಡಿದ ಅವರು, ಸ್ಥಳ ಪರಿಶೀಲನೆ‌ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 

ಎಸ್‌ಟಿಪಿ ನಿರ್ಮಾಣದ ಹಂತದ ವೇಳೆ ಮೂರು ಜನ ಎಂಜಿನಿರ್ಸ್‌ ಸಾವನ್ನಪ್ಪಿರುವ ಘಟನೆ ಅತ್ಯಂತ ದುರದೃಷ್ಟಕರ. ಅವರ ಆತ್ಮಕ್ಕೆ ಶಾಂತಿ ದೊರೆಯಲಿದೆ. ಅವರ ಕುಟುಂಬ ವರ್ಗಕ್ಕೆ ಇಲಾಖೆಯಿಂದ ಪರಿಹಾರ ನೀಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. 

ಹೆಬ್ಬಾಳದಲ್ಲಿ ನಿರ್ಮಾಣವಾಗುತ್ತಿರುವ ಎಸ್‌ಟಿಪಿ ಎರಡನೇ ಅತಿ ದೊಡ್ಡ ಎಸ್‌ಟಿಪಿ ಆಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಎಲ್ಲಾ ರೀತಿಯ ನಿರ್ದೇಶನ ನೀಡಲಾಗಿತ್ತು. ಈ ಅವಧಿಯಲ್ಲಿ ಇಂಥ ಘಟನೆ  ನಡೆದಿದ್ದು ಬೇಸರ ತರಿಸಿದೆ. ಈ ಘಟನೆಗೆ ಏನು ದೋಷವಾಗಿದೆ ಎಂಬುದು ತನಿಖೆಯಿಂದಲೇ ಸತ್ಯ ತಿಳಿಯಲು ಸಾಧ್ಯ. ತನಿಖೆಗೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ ಹಾಗೂ ಕೇಂದ್ರದ ಇಲಾಖೆಯಿಂದಲೂ ತಾಂತ್ರಿಕ ದೋಷದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಇದರ ಜೊತೆಗೆ ಇಲಾಖೆಯಿಂದಲೂ ಸಹ ತನಿಖೆಗೆ ಸೂಚಿಸಲಾಗಿದೆ. ಆ ದಿನ ಯಾರೆಲ್ಲಾ ಅಧಿಕಾರಿಗಳು ಸ್ಥಳದಲ್ಲಿ ಇದ್ದರೂ, ಯಾಕೆ ಮುಂಜಾಗೃತಿ ತೆಗೆದುಕೊಂಡಿಲ್ಲ, ಈ ಬೇಜವಾಬ್ದಾರಿಗೆ ಯಾರು ಹೊಣೆ ಈ ಎಲ್ಲಾ ಅಂಶಗಳನ್ನು ಸಹ ಇಲಾಖೆ ಒಳಗೆ ತನಿಖೆ ಮಾಡಲಾಗುವುದು. ಇಂಥ ಘಟನೆ ಎಂದೂ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದರು.

ಬೆಳಂದೂರು ಬಳಿ ಇರುವ ಎಸ್‌ಟಿಪಿಯಿಂದ ನೀರು ಶುದ್ದೀಕರಿಸಲಾಗಿತ್ತಿದೆ.‌ ಅದೇ ಮಾದರಿಯಲ್ಲಿ ಹೆಬ್ಬಾಳದಲ್ಲಿಯೂ ಮಾಡಲಾಗುತ್ತಿದ್ದು, ಇದಕ್ಕಾಗಿ 365 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇನ್ನು ಸಾಕಷ್ಟು ಕಾಮಗಾರಿ ಬಾಕಿ ಇದ್ದು, ಈ ಎಲ್ಲವೂ ಅತಿ ಎಚ್ಚರಿಕೆಯಿಂದ ಮಾಡಲು ಸೂಚಿಸಿರುವುದಾಗಿ ಹೇಳಿದರು.

ಅಧಿಕಾರಿಗಳಿಗೆ ತರಾಟೆ

ಘಟನೆಯಲ್ಲಿ ಮೂರು ಜನ ಸಾವನ್ನಪ್ಪಿರುವುದಕ್ಕೆ ಬೇಸರಗೊಂಡ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಈ ಘಟನೆಗೆ ಯಾರು ಹೊಣೆ ? ಚೀಫ್‌ ಇಂಜಿನಿಯರ್‌ ನೀವು ಆ ಸ್ಥಳದಲ್ಲಿ ಇದ್ದರಾ ? ಚೀಫ್‌ ಇಂಜಿನಿಯರ್‌ ಆದವರು ಮುಂದಾಳತ್ವ ವಹಿಸಿ ಕೆಲಸ ಮಾಡಿಸಬೇಕು. ನೀವೆ ಹೋಗಿಲ್ಲ ಅಂದರೆ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತೀರಾ ? ಇಲಾಖೆಗೆ ಒಳ್ಳೆಯ ಹೆಸರು ಇದೆ. ಇಂಥ ಘಟನೆಯಿಂದ ಮುಂದೆ ಕಾಮಗಾರಿಗೆ ಯಾರು ಬರುತ್ತಾರೆ ? ಇಲಾಖೆ ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ ಎಂಬ ಕೆಟ್ಟ ಹೆಸರು ಇಲಾಖೆಗೆ ಬರುವುದಿಲ್ಲವೇ ? ಈ ಘಟನೆಗೆ ಕಾರಣರ್ಯಾರೆ ಆಗಲಿ ಕಠಿಣ ಕ್ರಮ ಆಗಬೇಕು. ಇಲಾಖೆಯಲ್ಲಿ ಇಂಥ ಬೇಜವಾಬ್ದಾರಿ ಯನ್ನು ಎಂದೂ ಸಹಿಸಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News