ಸಾರಿಗೆ ವಾಹನ ಚಲಾಯಿಸಲು ಕನಿಷ್ಠ ವಿದ್ಯಾರ್ಹತೆ ನಿಯಮ ಕೈಬಿಡಲು ನಿರ್ಧರಿಸಿದ ಕೇಂದ್ರ

Update: 2019-06-19 07:15 GMT

ಹೊಸದಿಲ್ಲಿ: ಸಾರಿಗೆ ವಾಹನ ಚಲಾಯಿಸಲು ಈ ತನಕ ಅಗತ್ಯವಿದ್ದ ಕನಿಷ್ಠ ವಿದ್ಯಾರ್ಹತೆ ನಿಯಮವನ್ನು ಕೈ ಬಿಡಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.

ಕೇಂದ್ರ ಮೋಟಾರ್ ವಾಹನಗಳ ಕಾಯಿದೆ 1898ರ ನಿಯಮ 8 ಇದರ ತಿದ್ದುಪಡಿ ಹಾಗೂ ಕರಡು ಅಧಿಸೂಚನೆಯನ್ನು ಸದ್ಯದಲ್ಲಿಯೇ  ಹೊರಡಿಸಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಇಲ್ಲಿಯ ತನಕ ಸಾರಿಗೆ ವಾಹನ ಚಲಾಯಿಸಲು ಚಾಲಕ ಕನಿಷ್ಠ 8ನೇ ತರಗತಿ ತೇರ್ಗಡೆಯಾಗಬೇಕಿತ್ತು.

"ಆರ್ಥಿಕವಾಗಿ ಹಿಂದುಳಿದ ಹಾಗೂ ದುರ್ಬಲ ವರ್ಗದ  ಜನರಿಗೆ ಪ್ರಯೋಜನ ದೊರಕಿಸುವ ಉದ್ದೇಶದಿಂದ ಸಾರಿಗೆ ವಾಹನ ಚಾಲಕರಿಗಿರಬೇಕಾದ ಕನಿಷ್ಠ ವಿದ್ಯಾರ್ಹತೆಯನ್ನು ತೆಗೆದು ಹಾಕಲು ನಿರ್ಧರಿಸಲಾಗಿದೆ. ಈ ಕ್ರಮದಿಂದ ದೊಡ್ಡ ಸಂಖ್ಯೆಯಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶದ ಜತೆಗೆ ಸಾರಿಗೆ ಮತ್ತು ಸರಕು ಕ್ಷೇತ್ರದಲ್ಲಿರುವ 22 ಲಕ್ಷ ಚಾಲಕರ ಕೊರತೆಯನ್ನೂ ಅದು ನೀಗಿಸುವುದು,'' ಎಂದು ಹೇಳಿಕೆ ತಿಳಿಸಿದೆ.

ಕನಿಷ್ಠ ವಿದ್ಯಾರ್ಹತೆಯನ್ನು ತೆಗೆದು ಹಾಕಿದರೂ ರಸ್ತೆ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಲಾಗುವುದಿಲ್ಲ ಹಾಗೂ ಚಾಲಕರಿಗೆ ತರಬೇತಿ ಹಾಗೂ  ಅವರ ಚಾಲನಾ ಸಾಮರ್ಥ್ಯ ಒರೆಗೆ ಹಚ್ಚಲು ಕಠಿಣ ಪರೀಕ್ಷೆ ಅಗತ್ಯವಾಗಿದೆ ಎಂದು ಹೇಳಿಕೆಯಲ್ಲಿ ಒತ್ತಿ ಹೇಳಲಾಗಿದೆ.

ಇದರ ಹೊರತಾಗಿ ವಾಹನ ತರಬೇತಿ ಶಾಲೆಯಲ್ಲಿ ನೀಡಲಾಗುವ ತರಬೇತಿಯು ಚಾಲಕನಿಗೆ ಎಲ್ಲಾ ರಸ್ತೆ ಚಿಹ್ನೆಗಳು ಹಾಗೂ ಇತರ ಚಾಲಕರ ಕರ್ತವ್ಯಗಳಲ್ಲಿ ಪರಿಣತರನ್ನಾಗಿಸಬೇಕಿದೆ.

ಮೋಟಾರ್ ವಾಹನಗಳ (ತಿದ್ದುಪಡಿ)ಕಾಯಿದೆಯಡಿಯಲ್ಲಿ ಶೈಕ್ಷಣಿಕ ಅರ್ಹತೆಯನ್ನು ತೆಗೆದು ಹಾಕುವ ಪ್ರಸ್ತಾಪವನ್ನು ಸಚಿವಾಲಯ ಈಗಾಗಲೇ ಮಾಡಿದ್ದು ಅದು ಹಿಂದಿನ ಲೋಕಸಭೆಯಲ್ಲಿಯೇ ಅನುಮೋದನೆಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News