ಹಿರಿಯ ರಂಗಕರ್ಮಿ ಡಿ.ಕೆ. ಚೌಟ ನಿಧನ

Update: 2019-06-19 12:26 GMT

ಬೆಂಗಳೂರು, ಜೂ.19: ಕೃಷಿಕ, ಲೇಖಕ, ಕಲಾ ಪೋಷಕ, ರಂಗ ಸಂಘಟಕ, ರಂಗ ನಿರಂತರ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ.ಚೌಟ ಅವರು ಜಯದೇವ ಆಸ್ಪತ್ರೆಯಲ್ಲಿಂದು ನಿಧನ ಹೊಂದಿದ್ದಾರೆ.

82 ವರ್ಷದ ಚೌಟ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆ ಇಲ್ಲಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬಸವೇಶ್ವರ ನಗರ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಳೆ(ಗುರುವಾರ) ಮುಂಜಾನೆ 7 ಗಂಟೆಗೆ ಹರಿಶ್ಚಂದ್ರಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ಹೇಳಿದ್ದಾರೆ.

ದರ್ಬೆ ಕೃಷ್ಣಾನಂದ ಚೌಟ ಅವರು 1938ರ ಜೂ.1ರಂದು ಕಾಸರಗೋಡು ಜಿಲ್ಲೆಯಲ್ಲಿ ಜನಿಸಿದರು. ಚೌಟ ಅವರಿಗೆ ಚಿತ್ರಕಲೆ ಹಾಗೂ ರಂಗಭೂಮಿಯಲ್ಲಿ ಅಪಾರ ಆಸಕ್ತಿಯಿತ್ತು. ಕಲಾ ಪೋಷಕರೂ ಆಗಿದ್ದರು. ಅಲ್ಲದೆ, ಕಳೆದ ವರ್ಷ ನಡೆದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಅಧ್ಯಕ್ಷರಾಗಿದ್ದರು. ಜತೆಗೆ, ಅವರು ಬೆಂಗಳೂರು ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ತುಳು-ಕನ್ನಡ ಸಾಹಿತಿಯಾಗಿದ್ದ ಚೌಟ ಮಿತ್ತಬಯಲ್ ಯಮುನಕ್ಕ ಮತ್ತು ಕರಿಯ ವಜ್ಜೆರೆನ ಕಥೆ ಎಂಬ ಕಾದಂಬರಿ, ಪಿಲಿಪತ್ತಿ ಗಡಸ್, ಮೂಜಿ ಮುಟ್ಟು ಮೂಜಿ ಲೋಕ, ಪಾಟ್ ಪಜ್ಜೆಲು ಎಂಬ ತುಳು ನಾಟಕಗಳನ್ನು ರಚಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಚೌಟ ಅವರು ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು.

ಸಂತಾಪ: ಹಿರಿಯ ರಂಗ ಸಂಘಟಕ ಡಿ.ಕೆ.ಚೌಟ ಅವರ ನಿಧನವಾರ್ತೆ ಬೇಸರ ತಂದಿದೆ. ಉದ್ಯಮಿಯಾಗಿದ್ದರೂ ರಂಗಭೂಮಿ, ಸಾಹಿತ್ಯ ಹಾಗೂ ಕಲಾಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಚೌಟ ಅವರು ವಿಶೇಷ ವ್ಯಕ್ತಿತ್ವ ಹೊಂದಿದ್ದರು. ಆನಂದ, ಕೃಷ್ಣ ಎಂಬ ಕಾವ್ಯನಾಮದಿಂದ ಖ್ಯಾತಿ ಪಡೆದಿದ್ದ ಅವರು ‘ಕರಿಯಜ್ಜನ ಕಥೆಗಳು’, ‘ಪಿಲಪತ್ತಿ ಗಡಸ್’, ‘ಪಟ್ಟು ಪಜ್ಜೆಲು’, ‘ಉರಿ ಉಷ್ಣದ ಮಾಯೆ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ತುಳು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರಿಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ರಾಜ್ಯ ಸರಕಾರ ಗೌರವಿಸಿದೆ. ಸಾಹಿತ್ಯರಚನೆ ಜತೆಗೆ ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿದ್ದರು. ಅಲ್ಲದೆ, ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದ ಚೌಟ ಅವರ ನಿಧನ ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

ರಂಗಭೂಮಿಯಲ್ಲಿ ಪೋಷಕರಾಗಿದ್ದ ಚೌಟ ಅವರು, 90 ರ ದಶಕದಲ್ಲಿ ಸಿಜಿಕೆ ಮೂಲಕ ರಂಗಭೂಮಿ ಪ್ರವೇಶಿಸಿದ್ದರು. ಅದರ ಬಳಿಕ ಸಮುದಾಯ ಸೇರಿದಂತೆ ವಿವಿಧ ಸಂಘಟನೆಗಳ ಮಹಾಪೋಷಕರಾಗಿದ್ದಾರೆ. ಸಮುದಾಯದ ರುಡಾಲಿ, ಜುಗಾರಿಕ್ರಾಸ್ ಸೇರಿದಂತೆ ಸಮುದಾಯದ ಹಲವಾರು ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ಸಿಗುವಂತೆ ಮಾಡಿದ್ದಾರೆ. ಸಿಜಿಕೆ ಬಳಿಕ ರಂಗನಿರಂತರ ತಂಡವನ್ನು ಮುನ್ನಡೆಸುವ ಜವಾಬ್ದಾರಿ ತೆಗೆದುಕೊಂಡು ತಂಡಕ್ಕೆ ಸಾಕಷ್ಟು ಬಲ ತುಂಬಿದ್ದಾರೆ. ಅವರ ಕೊಡುಗೆ ಗಮನಾರ್ಹ. ಅವರ ಅಗಲಿಕೆಯಿಂದ ಸಾಂಸ್ಕೃತಿಕ ಲೋಕ ಬಡವಾಗಿದೆ ಎಂದು ರಂಗ ನಿರ್ದೇಶಕ ಶಶಿಧರ ಭಾರಿಘಾಟ್ ಸಂತಾಪ ಸೂಚಿಸಿದ್ದಾರೆ.

ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಹೆಸರು ಡಿ.ಕೆ.ಚೌಟ ಅವರದ್ದು. ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ, ರಂಗನಿರಂತರ ತಂಡದ ಪೋಷಕರಾಗಿ, ಅಧ್ಯಕ್ಷರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಚಿತ್ರಸಂತೆ ಮೂಲಕ ಚಿತ್ರಕಲಾ ಪರಿಷತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆಯುವಂತೆ ಮಾಡುವಲ್ಲಿ ಇವರ ಪಾತ್ರವೂ ಇದೆ. ಕಲಾವಿದರಿಗೆ ನೆರವು ನೀಡುತ್ತಿದ್ದ ಚೌಟ ಅವರು, ಸ್ವತಃ ಬರಹಗಾರರಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ತುಳು ಸಾಹಿತ್ಯಕ್ಕೆ ಅವರ ಕೊಡುಗೆ ದೊಡ್ಡದಿದೆ. ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ದೊಡ್ಡ ನಷ್ಟ ಅನುಭವಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ಸಂತಾಪದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News