ಸತ್ಯ ಹೇಳುವುದು ಅಪರಾಧವೇ ? : ಕಾಂಗ್ರೆಸ್ ನಾಯಕರ ವಿರುದ್ಧ ರೋಷನ್ ಬೇಗ್ ವಾಗ್ದಾಳಿ

Update: 2019-06-19 12:42 GMT

ಬೆಂಗಳೂರು : ನಿನ್ನೆ ರಾತ್ರಿ ನನ್ನನ್ನು ಪಕ್ಷದಿಂದ ಅಮಾನತ್ತು ಮಾಡಿದ್ದಾರೆ ಎಂಬ ಸುದ್ದಿ ಬಂತು. ನನಗೆ ಅನಿಸುತ್ತದೆ ಸತ್ಯ ಹೇಳುವುದು ಅಪರಾಧವೇ ? ನಾನು ಹೇಳಿರುವುದು ಸತ್ಯ. ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಟೀಕೆ ಮಾಡಿಲ್ಲ. ಈ ಕ್ಷಣದ ವರೆಗೆ ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸತ್ಯ ಹೇಳಿದ್ದಕ್ಕೆ ನನ್ನ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಮಾಜಿ ಸಚಿವ ಆರ್. ರೋಷನ್ ಬೇಗ್ ವಾಗ್ದಾಳಿ ನಡೆಸಿದರು.

ಬುಧವಾರ ನಗರದ ಅವರ ನಿವಾಸದಲ್ಲಿ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ಪಕ್ಷದ ಹಿರಿಯ ನಾಯಕರು ಸ್ನೇಹಿತರಾದ ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ ಇವರನ್ನು ಭೇಟಿ ಮಾಡಿ  ನಾನು ಮುಂದೆ ದಿಲ್ಲಿಗೆ ಹೋಗಬೇಕೆ ಎಂಬುದರ ಕುರಿತು ಚರ್ಚೆ ಮಾಡಿ ನನ್ನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಲೋಕಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏಕಾಏಕಿ ರಾಜೀನಾಮೆ ನೀಡಿದರು. ಯಾರು ಎಷ್ಟೇ ಮನವೊಲಿಸಿದರು ತಮ್ಮ ನಿರ್ಧಾರವನ್ನು ಹಿಂಪಡೆಯುತ್ತಿಲ್ಲ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೇವಲ ಒಂದೇ ಒಂದು ಸ್ಥಾನ ಬಂತಲ್ಲ ಎಂದು ನಾವು ಚಿಂತನೆ ಮಾಡಿದೆವು ಅದು ತಪ್ಪೇ ಎಂದು ರೋಷನ್ ಬೇಗ್ ಪ್ರಶ್ನಿಸಿದರು.

ನಮ್ಮ ಪಕ್ಷದ ನಾಯಕರು, ಮುಖಂಡರು, ದಲಿತ ನಾಯಕ ಮುನಿಯಪ್ಪರನ್ನು  ಚುನಾವಣೆಯಲ್ಲಿ ಸೋಲಿಸಿದೆವು ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟರು ಅವರ ವಿರುದ್ಧ ಯಾವ ಕ್ರಮವು ಕೈಗೊಳ್ಳುವುದಿಲ್ಲವೇ ? ಮಂಡ್ಯದಲ್ಲಿ ನಮ್ಮ ಪಕ್ಷದ ನಾಯಕರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬಹಿರಂಗವಾಗಿ ಭೇಟಿ ಮಾಡುತ್ತಾರೆ, ಅವರ ಪರವಾಗಿ ಬಹಿರಂಗವಾಗಿ ಪ್ರಚಾರ ಮಾಡುತ್ತಾರೆ ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾನು ನನ್ನ ಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 14,900 ಮತಗಳ ಲೀಡ್ ಕೊಡಿಸಿದ್ದೇನೆ. ಇದೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಅವರ ಕ್ಷೇತ್ರದಲ್ಲಿ ಸುಮಾರು 25 ಸಾವಿರ ಮತಗಳ ಲೀಡ್ ಬಿಜೆಪಿ ಅಭ್ಯರ್ಥಿ ಗೆ ಬಂದಿದೆ. ನಮ್ಮ ಶಾಸಕಾಂಗ ಪಕ್ಷದ ನಾಯಕರು ಪ್ರತಿನಿಧಿಸುತ್ತಿದ್ದ ಹಳೆ ಕ್ಷೇತ್ರದಲ್ಲಿ 36 ಸಾವಿರ ಮತಗಳು ಬಿಜೆಪಿ ಅಭ್ಯರ್ಥಿಗೆ ಲೀಡ್ ಸಿಕ್ಕಿದೆ. ಬಾದಾಮಿಯಲ್ಲಿ ಬಿಜೆಪಿಗೆ 9 ಸಾವಿರ ಲೀಡ್ ಸಿಕ್ಕಿದೆ. ಈ ವಿಚಾರಗಳ ಬಗ್ಗೆ ನಮ್ಮನ್ನು ಕಾಂಗ್ರೆಸ್ ಕಚೇರಿಗೆ ಕರೆದು ಸಮಾಲೋಚನೆ ಮಾಡಬೇಕಿತ್ತು ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಬಹಿರಂಗವಾಗಿ ಚರ್ಚೆಗಳು ಆದರೇ ಮಾತ್ರ ಪಕ್ಷಗಳಿಗೆ ಶಕ್ತಿ ಬರುತ್ತದೆ. ನಾವು ಪಾರದರ್ಶಕವಾಗಿ ಇರಬೇಕು. ನಾನು ನಮ್ಮ ರಾಜ್ಯ ನಾಯಕರ ಬಗ್ಗೆ ನೀಡಿರುವ ಹೇಳಿಕೆಯು, ರಾಜ್ಯಾದ್ಯಂತ ಇರುವ ನಮ್ಮ ಲಕ್ಷಾಂತರ ಕಾರ್ಯಕರ್ತರ ಅಭಿಪ್ರಾಯ ತಿಳಿಸಿದ್ದೇನೆ. ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರು ನನ್ನನ್ನು ಸಂಪರ್ಕಿಸಿ ನನ್ನ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ರೋಷನ್ ಬೇಗ್ ತಿಳಿಸಿದರು.

ಚುನಾವಣೆಯ ಇವರ ಪ್ರಚಾರ ವೈಖರಿ ಹೇಗಿತ್ತು ಎಲ್ಲರಿಗೂ ಗೊತ್ತು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಮುದ್ದ ಹನುಮೇಗೌಡರನ್ನು ಬಲಿ ಕೊಟ್ಟರು. ಅವರು ಏನು ತಪ್ಪು ಮಾಡಿದ್ದರು. ಒಬ್ಬ ಪಕ್ಷದ ಕಾರ್ಯಕರ್ತ, ಮುಖಂಡರಾಗಿ ಸಂಸತ್ತಿನಲ್ಲಿ ಸಕ್ರಿಯವಾಗಿ, ಹಲವಾರು ಪ್ರಶ್ನೆಗಳನ್ನು ಎತ್ತಿದ್ದ ಅವರಿಗೆ ಮೋಸ ಮಾಡಿದರಲ್ಲ. ಮೈತ್ರಿ ಮೈತ್ರಿ ಎಂದು ಹೇಳಿಕೊಂಡು ಎಲ್ಲಾ ಅಭ್ಯರ್ಥಿಗಳನ್ನು, ದೇವೇಗೌಡರನ್ನು ಸೋಲಿಸಿದರು. ಸತ್ಯ ಹೇಳಿದ್ದು ದೊಡ್ಡ ಅಪರಾಧವಾಯಿತೇ ? ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಪಕ್ಷ ವಿರೋಧಿಯಲ್ಲ, ನಾನು ಪಕ್ಷದ ಶಿಸ್ತಿನ ಸಿಪಾಯಿ

ನನ್ನನ್ನೆ ಗುರಿಯನ್ನಾಗಿಸಿಕೊಂಡು ಯಾಕೆ ಕ್ರಮ ಕೈಗೊಂಡಿದ್ದಾರೆ ಅನ್ನೋದು ಪಕ್ಷದ ನಾಯಕರನ್ನೇ ಕೇಳಿ. ನಾನು ಹೇಳಿಕೆ ನೀಡಿರುವುದು ನಿಜ. ನಾನು ರಾಹುಲ್ ಗಾಂಧಿಯವರನ್ನು ಟೀಕಿಸಿಲ್ಲ. ನಾನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಗೆ ನಿಷ್ಠ. ಸಿದ್ದು ನ್ಯಾಷನಲ್ ಕಾಂಗ್ರೆಸ್ ಗೆ ನಿಷ್ಠನಲ್ಲ ಎಂದು ಅವರು ಹೇಳಿದರು.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಗೆ ನಮ್ಮ ‌ರಾಜ್ಯದಲ್ಲಿ ಈ ಪರಿಸ್ಥಿತಿ ಬಂತಲ್ಲ ಎಂದು ಬೇಸರವಾಯಿತು. ನಾನು ಹೇಳಿಕೆ‌ ಕೊಟ್ಟಾಗ ಇನ್ನೂ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿರಲಿಲ್ಲ. ಕೇವಲ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಂದಿತ್ತು. ಆಗಲೇ ಧೈರ್ಯ ಮಾಡಿ ನಾನು‌ ಹೇಳಿಕೆ‌ ನೀಡಿದೆ. ಅದನ್ನು ಸಹಿಸಿಕೊಳ್ಳಲು ಇವರಿಗೆ ಆಗಲಿಲ್ಲ ಎಂದು ರೋಷನ್ ಬೇಗ್ ಹೇಳಿದರು.

ಸಿದ್ದರಾಮಯ್ಯಗೆ ತಿರುಗೇಟು

ಪಕ್ಷದಲ್ಲಿ ಅಶಿಸ್ತು ಸಹಿಸುವುದಿಲ್ಲ, ನಾನಾಗಲಿ, ರೋಷನ್ ಬೇಗ್ ಆಗಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ರೋಷನ್ ಬೇಗ್, ರಮೇಶ್ ಜಾರಕಿಹೊಳಿ, ತುಮಕೂರಿನ ಕೆ.ಎನ್.ರಾಜಣ್ಣ ನೀಡಿದ ಹೇಳಿಕೆಗಳಿಗೆ ಏನಂತಾರೇ ? ಅವರ ಬಳಗದಲ್ಲಿ ಇರುವವರ ವಿರುದ್ಧ ಯಾವುದೇ ಕ್ರಮವಿಲ್ಲ.  ಮುನಿಯಪ್ಪರನ್ನು ಬಹಿರಂಗವಾಗಿ ಸೋಲಿಸಲು ಕರೆ ನೀಡಿದವರು ಉಪ್ಪು ತಿಂದಿಲ್ಲವೇ ? ಅವರು ನೀರು ಕುಡಿಯಬಾರದೇ ? ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News