ರಾಜ್ಯಸಭೆಯ 2 ಸ್ಥಾನಗಳಿಗೆ ಪ್ರತ್ಯೇಕ ಉಪಚುನಾವಣೆ; ಅಭಿಪ್ರಾಯ ತಿಳಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ

Update: 2019-06-19 16:57 GMT

ಹೊಸದಿಲ್ಲಿ, ಜೂ.19: ರಾಜ್ಯಸಭೆಯಲ್ಲಿ ಖಾಲಿಯಿರುವ ಎರಡು ಸ್ಥಾನಗಳಿಗೆ ಏಕಕಾಲದಲ್ಲಿ ಉಪಚುನಾವಣೆ ನಡೆಸಬೇಕೆಂದು ಕೋರಿ ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯ ಬಗ್ಗೆ ಜೂನ್ 24ರೊಳಗೆ ಪ್ರತಿಕ್ರಿಯಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಬಿಜೆಪಿ ಮುಖಂಡರಾದ ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಈ ಎರಡು ಸ್ಥಾನಗಳು ಖಾಲಿಯಿವೆ. ಜುಲೈ 5ರಂದು ಪ್ರತ್ಯೇಕ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ದಿನ ನಿಗದಿಗೊಳಿಸಿದೆ. ಆದರೆ ಎರಡು ಸ್ಥಾನಗಳಿಗೆ ಪ್ರತ್ಯೇಕ ಚುನಾವಣೆ ನಡೆಸುವುದು ನಿಯಮಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದ ಕಾಂಗ್ರೆಸ್, ಗುಜರಾತ್‌ನ ಕಾಂಗ್ರೆಸ್ ಮುಖಂಡ ಪರೇಶ್‌ಭಾಯ್ ಧನಾನಿ ಅವರ ಮೂಲಕ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಅಮಿತ್ ಶಾ ಅವರ ರಾಜ್ಯಸಭೆ ಸದಸ್ಯತ್ವ ತೆರವಾಗಿರುವ ಬಗ್ಗೆ ಮೇ 28ರಂದು ಪ್ರಕಟಿಸಲಾಗಿದ್ದರೆ, ಸ್ಮೃತಿ ಇರಾನಿಯವರ ರಾಜ್ಯಸಭೆ ಸದಸ್ಯತ್ವ ತೆರವಾಗಿರುವುದನ್ನು ಮೇ 29ರಂದು ಪ್ರಕಟಿಸಲಾಗಿತ್ತು. ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದ ಆಧಾರದಲ್ಲಿ ಈ ಪ್ರಕಟಣೆ ನೀಡಲಾಗಿತ್ತು. (ಶಾ ಗೆಲುವನ್ನು ಮೇ 23ರಂದು ಹಾಗೂ ಸ್ಮತಿ ಇರಾನಿ ಗೆಲುವನ್ನು ಆಯೋಗ ಮೇ 24ರಂದು ಪ್ರಕಟಿಸಿದೆ). ಪ್ರತ್ಯೇಕ ಉಪಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರ ಅಸಾಂವಿಧಾನಿಕ, ಕಾನೂನು ಬಾಹಿರ ಮತ್ತು ಸ್ವೇಚ್ಛಾಚಾರದ ಕ್ರಮವಾಗಿದೆ. ಅಧಿಕಾರದಲ್ಲಿರುವ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಆಯೋಗ ಈ ಸ್ವೇಚ್ಛಾಚಾರದ, ದುರುದ್ದೇಶದ ನಿರ್ಧಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಎರಡೂ ಸ್ಥಾನಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲಾಗದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಎರಡು ಸ್ಥಾನಗಳಿಗೆ ಪ್ರತ್ಯೇಕ ದಿನ ಚುನಾವಣೆ ನಡೆಸಿದರೆ ಬಿಜೆಪಿ ಪ್ರಥಮ ಪ್ರಾಶಸ್ಯ್ತದ ಮತದ ಆಧಾರದಲ್ಲಿ ಎರಡೂ ಸ್ಥಾನ ಗೆಲ್ಲಲಿದೆ. ಒಂದೇ ದಿನ ಚುನಾವಣೆ ನಡೆದರೆ ಆಗ ಒಂದು ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶವಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ. ಇದನ್ನು ಅಲ್ಲಗಳೆದಿರುವ ಬಿಜೆಪಿ, ಕಾಂಗ್ರೆಸ್ ಈಗ ಸುಳ್ಳು ಪ್ರಸಾರ ಮಾಡುವ ಯಂತ್ರದಂತೆ ಆಗಿದೆ. ಅವರು ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯಸಭೆಯ ಉಪಚುನಾವಣೆ ಯಾವತ್ತೂ ಪ್ರತ್ಯೇಕವಾಗಿಯೇ ನಡೆಯುತ್ತದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News