ಇವಿಎಂ ಬಗ್ಗೆ ಚರ್ಚೆ ನಡೆಸಲು ಸರ್ವ ಪಕ್ಷ ಸಭೆ ಕರೆದರೆ ಭಾಗವಹಿಸುತ್ತಿದ್ದೆ: ಮಾಯಾವತಿ

Update: 2019-06-19 10:46 GMT

ಲಕ್ನೋ : ಪ್ರಧಾನಿ ನರೇಂದ್ರ ಮೋದಿ ಇಂದು ಆಯೋಜಿಸಿರುವ ಸರ್ವ ಪಕ್ಷ ಸಭೆ ಇವಿಎಂಗಳ ಕುರಿತಾಗಿದ್ದರೆ ತಾವು ಭಾಗವಹಿಸುತ್ತಿದ್ದುದಾಗಿ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಸ್ತಾಪವು ಬಡತನ, ನಿರುದ್ಯೋಗ, ಹೆಚ್ಚುತ್ತಿರುವ  ಹಿಂಸೆ ಮತ್ತಿತರ ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿದೆ, ಒಂದು ದೇಶ ಒಂದು ಚುನಾವಣೆ ಎಂಬ  ಪರಿಕಲ್ಪನೆ ಕೇವಲ ಒಂದು ಭ್ರಮೆಯಾಗಿದೆ,'' ಎಂದು ಮಾಯಾವತಿ ಆರೋಪಿಸಿದ್ದಾರೆ.

"ಒಂದು ದೇಶ ಒಂದು ಚುನಾವಣೆ,'' ಮಹಾತ್ಮ ಗಾಂಧಿಯ 150ನೇ ಜಯಂತಿ ಆಚರಣೆ ಹಾಗೂ 2022ರಲ್ಲಿ  ಭಾರತದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಹಿತ ಹಲವಾರು ವಿಚಾರಗಳ ಚರ್ಚೆಗೆ ಪ್ರಧಾನಿ ಆಯೋಜಿಸಿರುವ ಸರ್ವ ಪಕ್ಷ ಸಭೆ ಆರಂಭಗೊಳ್ಳುವ ಕೆಲವೇ ಗಂಟೆಗಳ  ಮೊದಲು ಮಾಯಾವತಿಯ ಹೇಳಿಕೆ ಬಂದಿದೆ.

ಇವಿಎಂಗಳ ಮೇಲಿನ ಜನರ ವಿಶ್ವಾಸ ಕಡಿಮೆಯಾಗುತ್ತಿದೆ ಎಂದು ಹೇಳಿದ ಮಾಯಾವತಿ "ಮತಪತ್ರಗಳ ಮೂಲಕ ಚುನಾವಣೆ ನಡೆಸುವ ಬದಲು ಇವಿಎಂಗಳ ಮೂಲಕವೇ ಚುನಾವಣೆ ನಡೆಸುತ್ತೇವೆ ಎಂಬ ಹಠಮಾರಿ ಧೋರಣೆ ಪ್ರಜಾಸತ್ತೆ ಹಾಗೂ ದೇಶದ ಸಂವಿಧಾನಕ್ಕೆ ನಿಜವಾದ ಬೆದರಿಕೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಈ ವಿಚಾರ ಚರ್ಚಿಸಲು ಸಭೆ ನಡೆಸಿದ್ದರೆ ಖಂಡಿತವಾಗಿಯೂ ಭಾಗವಹಿಸುತ್ತಿದ್ದೆ,'' ಎಂದು ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News