ಶಾಲಾ ವಾಹನಗಳ ಮುಷ್ಕರ: ವಡೋದರಾದಲ್ಲಿ ಮಕ್ಕಳನ್ನು ಶಾಲೆಗೆ ಸಾಗಿಸಿದ ಪೊಲೀಸರು

Update: 2019-06-19 12:09 GMT
ಕೃಪೆ: indianexpress.com

ವಡೋದರಾ: ನಿಯಮಗಳನ್ನು ಉಲ್ಲಂಘಿಸಿದ ಶಾಲಾ ಮಕ್ಕಳನ್ನು ಕರೆದೊಯ್ಯುವ ವ್ಯಾನ್ ಹಾಗೂ ಆಟೋರಿಕ್ಷಾಗಳ ವಿರುದ್ಧ ಆರ್‍ಟಿಒ ಹಾಗೂ ಪೊಲೀಸರು ನಡೆಸಿದ ಕಾರ್ಯಾಚರಣೆಯನ್ನು ವಿರೋಧಿಸಿ ವಾಹನಗಳ ಚಾಲಕರು ನಡೆಸುತ್ತಿರುವ ಮುಷ್ಕರ ಇಂದು ಎರಡನೇ ದಿನ ತಲುಪಿದ್ದು ಇಂದು ಹಲವಾರು  ಮಕ್ಕಳನ್ನು ಪೊಲೀಸರೇ ಶಾಲೆಗೆ ಸಾಗಿಸಿ ಎಲ್ಲರ ಗಮನ ಸೆಳೆದಿದ್ದಾರೆ.  ಪಿಸಿಆರ್ ವ್ಯಾನುಗಳು ಹಾಗೂ ಮೋಟಾರ್ ಸೈಕಲ್ ಗಳಲ್ಲಿ ಮಕ್ಕಳನ್ನು ಶಾಲೆಗೆ ಪೊಲೀಸರೇ ಕರೆದೊಯ್ಯತ್ತಿರುವ ದೃಶ್ಯ ಹಲವೆಡೆ ಕಂಡು ಬಂದಿತ್ತು.

ಮಕ್ಕಳು ಶಾಲೆಗೆ ಸರಿಯಾದ ಸಮಯ ತಲುಪಲಿ ಎಂಬ ಉದ್ದೇಶದಿಂದ ಒಟ್ಟು 46 ಮೋಟಾರ್ ಸೈಕಲ್‍ಗಳು, 21 ಪಿಸಿಆರ್ ವ್ಯಾನುಗಳು ಹಾಗೂ 9 ಬೊಲೆರೋ ವಾಹನಗಳನ್ನು ಮಕ್ಕಳನ್ನು ಸಾಗಿಸಲೆಂದೇ ಇಂದು ಮೀಸಲಿರಿಸಲಾಗಿತ್ತು. ವಿವಿಧ ಶಾಲೆಗಳ 250ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಇಂದು ಪೊಲೀಸರೇ ತಮ್ಮ ವಾಹನದಲ್ಲಿ ಸಾಗಿಸಿದ್ದಾರೆ. ಮುಷ್ಕರ ಮುಗಿಯುವ ತನಕ ಈ ಕ್ರಮ ಮುಂದುವರಿಯಲಿದೆ ಎಂದು ವಡೋದರಾ ಟ್ರಾಫಿಕ್ ಎಎಸ್‍ಐ ಎ ಕೆ ವನನಿ ಹೇಳಿದ್ದಾರೆ.

ಅಹ್ಮದಾಬಾದ್ ನಲ್ಲಿ ಚಲಿಸುತ್ತಿರುವ ಶಾಲಾ ವ್ಯಾನ್ ನಿಂದ ಮೂವರು ವಿದ್ಯಾರ್ಥಿಗಳು ಹೊರಕ್ಕೆ ಉರುಳಿದ  ಘಟನೆಯ ನಂತರ ಕಾರ್ಯಾಚರಣೆ ಆರಂಭಗೊಂಡಿತ್ತು. ಈ ನಿರ್ದಿಷ್ಟ ವ್ಯಾನಿನಲ್ಲಿ 22 ಮಕ್ಕಳಿದ್ದರಲ್ಲದೆ ಅದರ ಬಾಗಿಲು ಕೂಡ ಸರಿಯಾಗಿ ಮುಚ್ಚುವುದು ಅಸಾಧ್ಯವಾಗಿದ್ದರಿಂದ ಮಕ್ಕಳು ಹೊರಕ್ಕೆ ಬಿದ್ದಿದ್ದರು.

ನಿಯಮಗಳನ್ನು ಪಾಲಿಸದ 3 ಶಾಲಾ ಬಸ್ಸುಗಳ ಚಾಲಕರ ಸಹಿತ 12 ಆಟೋ ಚಾಲಕರು ಹಾಗೂ 16 ವ್ಯಾನ್ ಚಾಲಕರನ್ನು ಪೊಲೀಸರು ಹಾಗೂ ಆರ್‍ಟಿಒ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದರು.

ನಿಯಮದ ಪ್ರಕಾರ ವ್ಯಾನ್ ನಲ್ಲಿ ಗರಿಷ್ಠ 14 ಮಕ್ಕಳನ್ನು ಸಾಗಿಸಬಹುದಾದರೆ ಆಟೋರಿಕ್ಷಾದಲ್ಲಿ ಗರಿಷ್ಠ ಆರು ಮಕ್ಕಳನ್ನು ಕೂರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News