ಸಂಸತ್‌ನ ಘನತೆಗೆ ಧಕ್ಕೆಯಾಗದಿರಲಿ

Update: 2019-06-20 04:59 GMT

ರಾಜಕೀಯ ಪ್ರಚಾರಗಳ ಸಂದರ್ಭದಲ್ಲಿ ಸಾರ್ವಜನಿಕರನ್ನು ಭಾವನಾತ್ಮಕವಾಗಿ ಮರುಳುಗೊಳಿಸಲು ಈ ರಾಜಕೀಯ ನಾಯಕರು ಬೇರೆ ಬೇರೆ ಪ್ರಯತ್ನಗಳನ್ನು ನಡೆಸುವುದು ಸಹಜವಾಗಿಬಿಟ್ಟಿದೆ. ಧರ್ಮವನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಂಡು ಗೆದ್ದು ಬಂದ ಸಂಸದರು ಹಲವರು. ಆದರೆ ಯಾವಾಗ ಇವರು ಜನಪ್ರತಿನಿಧಿಗಳಾಗಿ ಸಂಸತ್‌ನ್ನು ಪ್ರವೇಶಿಸುತ್ತಾರೋ ಆಗ ತಮ್ಮ ಧರ್ಮ, ಜಾತಿ ಇತ್ಯಾದಿಗಳನ್ನೆಲ್ಲ ಕಳಚಿಟ್ಟು, ಭಾರತೀಯ ಸಂವಿಧಾನಕ್ಕೆ ಬದ್ಧರಾಗಬೇಕು. ದೇಶದ ಭವಿಷ್ಯವನ್ನುರೂಪಿಸುವ ವೇದಿಕೆಯಾಗಿರುವ ಸ್ಥಳವನ್ನು ಚುನಾವಣೆಯ ಸಾರ್ವಜನಿಕ ವೇದಿಕೆಯಾಗಿ ಕಾಣುವುದು ಸಂಸತ್‌ಗೆ ಸಲ್ಲಿಸುವ ಅಗೌರವವಾಗಿದೆ. ಇಂದು ಸಂಸತ್‌ನಲ್ಲಿ ನಡೆಯುವ ಕಲಾಪ ದೇಶಾದ್ಯಂತ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವುದರಿಂದ, ರಾಜಕಾರಣಿಗಳು ಸಂಸತ್ ಸಭೆಯ ಗೌರವವನ್ನು ಮರೆತು ಮಾತುಗಳನ್ನಾಡುವುದು, ಕೋಮುಪ್ರಚೋದಕ ಹೇಳಿಕೆಗಳನ್ನು ನೀಡುವುದು, ಪಕ್ಷದ ಕಚೇರಿಯೆಂಬಂತೆ ಭಾವಿಸಿ ಗದ್ದಲ ನಡೆಸಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವುದು ವ್ಯಾಪಕವಾಗುತ್ತಿದೆ. ಈ ಬಾರಿಯ ಲೋಕಸಭೆಗೆ ಆಯ್ಕೆಯಾದ ಸಂಸದರ ಪ್ರತಿಜ್ಞಾವಿಧಿಗಳ ಪ್ರಹಸನಗಳನ್ನು ಗಮನಿಸಿದರೆ ಸಂಸತ್‌ನಲ್ಲಿ ಮುಂದೆ ನಡೆಯಬಹುದಾದ ದುರಂತಗಳನ್ನು ನಾವು ಸುಲಭವಾಗಿ ಗ್ರಹಿಸಬಹುದಾಗಿದೆ.

  ‘ಕೊಟ್ಟ ಮಾತಿಗೆ ತಪ್ಪಲಾರೆನು’ ಎಂದ ಪುಣ್ಯಕೋಟಿ ಬಾಳಿದ ನಾಡಿದು. ತಂದೆಗೆ ಕೊಟ್ಟ ವಚನವನ್ನು ಮೀರಲಾಗದೆ ಕಾಡಿಗೆ ತೆರಳಿದ ಶ್ರೀರಾಮನ ಆದರ್ಶವನ್ನು ಗೌರವಿಸುವ ದೇಶ ನಮ್ಮದು. ಹರಿಶ್ಚಂದ್ರ, ಕರ್ಣ ಮೊದಲಾದವರು ಕೊಟ್ಟ ವಚನಗಳಿಗಾಗಿ ಮಾಡಿದ ತ್ಯಾಗಗಳನ್ನು ನಾವು ನಮ್ಮ ಮಕ್ಕಳಿಗೆ ಪ್ರತಿ ದಿನ ಉರು ಹೊಡೆಸುತ್ತೇವೆ. ಆದರೆ ಈ ದೇಶವನ್ನು ಉದ್ಧರಿಸಿ ಎಂದು ಮತದಾರರು ನಂಬಿ ಆರಿಸಿ ಕಳುಹಿಸಿದ ಜನರು ಮಾತ್ರ, ಈ ವಚನವಿಧಿಯನ್ನು ತಮಾಷೆಯ ವಿಷಯವನ್ನಾಗಿಸಿದ್ದಾರೆ. ಮುಖ್ಯವಾಗಿ, ರಾಜಕಾರಣಿಗಳು ಅದಾವ ದೇವರ ಮೇಲೆ ಪ್ರಮಾಣ ಮಾಡಿದರೂ ಅವರ ಭರವಸೆಗಳನ್ನು ಮತದಾರರು ಗಂಬೀರವಾಗಿ ಸ್ವೀಕರಿಸುವ ಸ್ಥಿತಿಯಲ್ಲಿ ಇಲ್ಲ. ಭರವಸೆಗಳನ್ನು ಕೊಡುವುದೇ ಅದನ್ನು ಮುರಿಯುವುದಕ್ಕಾಗಿ ಎಂದು ರಾಜಕಾರಣಿಗಳು ಬಲವಾಗಿ ನಂಬಿದ್ದಾರೆ. ಹಾಗೆಯೇ ರಾಜಕಾರಣಿಗಳು ಇರುವುದೇ ಸುಳ್ಳು ಭರವಸೆಗಳನ್ನು ನೀಡಲು ಎಂದು ಮತದಾರರು ಮೋಸ ಹೋಗುವುದಕ್ಕೆ ಸಿದ್ಧರಾಗಿಯೇ ಅವರನ್ನು ಸಂಸತ್ತಿಗೆ ಕಳುಹಿಸುತ್ತಾರೆ. ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆಯೋ, ಇಲ್ಲವೋ, ಆದರೆ ಕನಿಷ್ಠ ಪ್ರತಿಜ್ಞಾ ವಿಧಿ ಎನ್ನುವ ಪ್ರಕ್ರಿಯೆಗಾದರೂ ಗೌರವವನ್ನು ನೀಡುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಆದರೆ ಎರಡು ದಿನಗಳ ಹಿಂದೆ ಸಂಸತ್ತಿನಲ್ಲಿ ನಡೆದ ಪ್ರತಿಜ್ಞಾ ವಿಧಿ ನಮ್ಮ ಸಂವಿಧಾನವನ್ನು, ಪ್ರಜಾಸತ್ತೆಯನ್ನು ಅಣಕಿಸುವಂತಿತ್ತು. ಅಲ್ಲಿ ಪ್ರತಿಜ್ಞಾವಿಧಿಗಿಂತಲೂ ತಮ್ಮ ತಮ್ಮ ಸಿದ್ಧಾಂತ, ರಾಜಕೀಯಗಳ ಪ್ರದರ್ಶನವೇ ಎದ್ದು ಕಾಣುತ್ತಿತ್ತು. ಪ್ರತಿ ಪಕ್ಷಗಳ ಸಂಸದರು ಪ್ರತಿಜ್ಞಾವಿಧಿಗಾಗಿ ಎದ್ದು ನಿಂತಾಗ ಅವರನ್ನು ಅಣಕಿಸುವುದು, ಜೈ ಶ್ರೀರಾಮ್‌ನಂತಹ ಘೋಷಣೆಗಳನ್ನು ಕೂಗುವುದು ಒಟ್ಟು ಪ್ರಕ್ರಿಯೆಯ ಉದ್ದೇಶವನ್ನೇ ಹಾಳುಗೆಡಹಿತು.
    ಸಂವಿಧಾನಪ್ರಕಾರವಾಗಿ ಯಾರ ಹೆಸರಿನಲ್ಲಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಬೇಕು ಎಂಬ ತಿಳುವಳಿಕೆಯಿಲ್ಲದ ಸಂಸದರ ಸಂಖ್ಯೆ ಈ ಬಾರಿ ಹೆಚ್ಚಿದೆ. ಇತರರ ಪ್ರತಿಜ್ಞಾವಿಧಿಯ ಸಂದರ್ಭದಲ್ಲಿ ತಮ್ಮ ಹೊಣೆಗಾರಿಕೆಗಳೇನು ಎನ್ನುವುದನ್ನು ಅರಿಯದೇ, ಯಾವುದೋ ಪಕ್ಷದ ಬೀದಿ ಕಾರ್ಯಕರ್ತರಂತೆ ಅವುಗಳಿಗೆ ಅಡ್ಡಿಪಡಿಸುತ್ತಿದ್ದ ಸಂಸದರು ಈ ದೇಶವನ್ನು ಯಾವ ದಿಕ್ಕಿಗೆ ಒಯ್ಯಬಲ್ಲರು? ಭವಿಷ್ಯದಲ್ಲಿ ಈ ದೇಶದ ಅಭಿವೃದ್ಧಿಯ ಕುರಿತಂತೆ ಅವರು ಚರ್ಚಿಸಬಹುದಾದ ರೀತಿ ಹೇಗಿರಬಹುದು ಎನ್ನುವುದನ್ನು ಅವರ ವರ್ತನೆ ದೇಶಕ್ಕೆ ತಿಳಿಸಿದೆ. ಅತ್ಯಂತ ದುಃಖದಾಯಕ ಸಂಗತಿಯೆಂದರೆ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ, ಕೋಮುವಾದಿ ಘೋಷಣೆಗಳು ಸಂಸತ್ತಿನಲ್ಲಿ ಜೋರು ದನಿಯಲ್ಲಿ ಮೊಳಗಿರುವುದು. ಜೈ ಶ್ರೀರಾಮ್, ಅಲ್ಲಾಹು ಅಕ್ಬರ್ ಮೊದಲಾದ ಘೋಷಣೆಗಳು ಅವರವರ ಖಾಸಗಿ ನಂಬಿಕೆಗಳು. ಈ ದೇಶದಲ್ಲಿ ಧಾರ್ಮಿಕ ನಂಬಿಕೆಗಳ ಹಕ್ಕನ್ನು ಸಂವಿಧಾನವೇ ನೀಡಿದೆ. ಅದು ಸಾರ್ವಜನಿಕವಾಗಿ ಪ್ರದರ್ಶನಕ್ಕೆ ಇಡುವ ವಿಷಯವಲ್ಲ. ರಾಮ, ಅಲ್ಲಾನ ಹೆಸರುಗಳು ಕೂಗಲು ಈ ದೇಶದಲ್ಲಿ ಮಸೀದಿಗಳು ದೇವಸ್ಥಾನಗಳ ಕೊರತೆಗಳೇನೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಂದೇಮಾತರಂ, ಜೈ ಶ್ರೀರಾಮ್ ಹೆಸರುಗಳನ್ನು ಸಂಸತ್ತಿನಲ್ಲಿ ಘೋಷಿಸಿದ್ದು ಅದರ ಮೇಲಿನ ಗೌರವದಿಂದಲೂ ಅಲ್ಲ. ದಾಳಿಯ ರೂಪದಲ್ಲಿ ಅವರು ಅದನ್ನು ಬಳಸಿದರು. ಇಷ್ಟಕ್ಕೂ ಇಂತಹ ಘೋಷಣೆಗಳನ್ನು ಕೂಗಿ ಪ್ರತಿಜ್ಞಾ ಸ್ವೀಕಾರ ಮಾಡಿದವರು ಅದಕ್ಕೆ ಬದ್ಧರಾಗಿ, ಜನರ ಆಶೋತ್ತರಗಳನ್ನು ಈಡೇರಿಸುತ್ತಾರೆಯೇ ಎಂದರೆ ಅದೂ ಇಲ್ಲ. ಈ ಘೋಷಣೆಗಳನ್ನು ಕೂಗುತ್ತಲೇ ಜನರನ್ನು ವಂಚಿಸುವ ರಾಜಕಾರಣಿಗಳು ವಂದೇಮಾತರಂ, ಜೈಶ್ರೀರಾಮ್ ಪದಗಳಿಗೆ ಅವಮಾನವಾಗಿದ್ದಾರೆ.
ಒಬ್ಬ ಜೈಭೀಮ್, ಜೈಶ್ರೀರಾಮ್ ಅಥವಾ ಅಲ್ಲಾಹು ಅಕ್ಬರ್ ಎಂದು ಕೂಗಿದಾಕ್ಷಣ ಅದರಿಂದ ಈ ದೇಶಕ್ಕಾಗಲಿ, ಜನರಿಗಾಗಲಿ ಯಾವ ಪ್ರಯೋಜನವೂ ಇಲ್ಲ. ಅಂಬೇಡ್ಕರ್ ಅವರ ಆಶಯಗಳು ಪರಿಣಾಮಕಾರಿಯಾಗಿ ಜಾರಿಗೆ ತರುವ ಬದ್ಧತೆಯಿಲ್ಲದ, ಶ್ರೀರಾಮನ ಆದರ್ಶಗಳಿಗೆ ತದ್ವಿರುದ್ಧವಾಗಿ ನಡೆಯುವ, ಬದುಕುವ, ಇಸ್ಲಾಮಿನ ಸರಳತೆ, ಸತ್ಯ, ಪ್ರಾಮಾಣಿಕತೆಗೆ ತದ್ವಿರುದ್ಧವಾಗಿರುವ ರಾಜಕಾರಣಿಗಳು ಸಂಸತ್‌ನಲ್ಲಿ ಯಾವ ಘೋಷಣೆಕೂಗಿದರೂ ಅದರಿಂದ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆಗಳಾಗುವುದಿಲ್ಲ. ಈ ಬಾರಿಯ ಲೋಕಸಭೆಯಲ್ಲಿ ಆಯ್ಕೆಯಾದವರಲ್ಲಿ ಕ್ರಿಮಿನಲ್ ಹಿನ್ನೆಲೆ ಮತ್ತು ಕೋಮುವಾದಿ ಹಿನ್ನೆಲೆಯಿರುವ ಜನನಾಯಕರ ಸಂಖ್ಯೆ ಭಾರೀ ಪ್ರಮಾಣದಲ್ಲಿದೆ. ಜೊತೆಗೆ ರಾಜಕಾರಣದ ಬಾಲಪಾಠದ ಅರಿವೂ ಇಲ್ಲದ ಅಪ್ರಬುದ್ಧ ಜನಪ್ರತಿನಿಧಿಗಳ ಸಂಖ್ಯೆಯೂ ಹೆಚ್ಚಿದೆ. ಸಂಸತ್ತನ್ನು ಮುನ್ನಡೆಸಬಲ್ಲ ಹಲವು ಮುತ್ಸದ್ದಿ ನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ. ಕೆಲವರು ನಿವೃತ್ತರಾಗಿದ್ದಾರೆ. ಇದರ ಪರಿಣಾಮಗಳಿಗೆ ಮುಂದಿನ ದಿನಗಳಲ್ಲಿ ಸಂಸತ್ ಸಾಕ್ಷಿಯಾಗಲಿದೆ. ಸಂಸತ್ ಗದ್ದಲದ ಗೂಡಾಗಿ, ಅಭಿವೃದ್ಧಿಯ ಚರ್ಚೆ ಮೂಲೆ ಸರಿಯುವ ಸಾಧ್ಯತೆಗಳು ಕಾಣಿಸುತ್ತಿವೆ. ಅಳಿದುಳಿದ ಮುತ್ಸದ್ದಿ ಹಿರಿಯ ರಾಜಕಾರಣಿಗಳು ಗರಿಷ್ಠ ಮಟ್ಟದಲ್ಲಿ ಸಂಸತ್ತಿನ ಘನತೆಯನ್ನು ಕಾಪಾಡಬೇಕಾಗಿದೆ. ಆದರೆ ಕೂಗುಮಾರಿಗಳ ಮಧ್ಯೆ ಅವರ ಧ್ವನಿ ಸಂಸತ್ತಿನಲ್ಲಿ ಸ್ಪಷ್ಟವಾಗಿ ಕೇಳುವುದು ಕಷ್ಟವೇ ಸರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News