ಮುಝಫ್ಫರ್ ಪುರ: ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಬಹಿರಂಗ

Update: 2019-06-20 04:20 GMT

ಹೊಸದಿಲ್ಲಿ, ಜೂ.20: ಮೆದುಳು ಜ್ವರದಿಂದಾಗಿ ಮಕ್ಕಳ ಸಾವಿನ ಸರಣಿಯನ್ನು ಹತೋಟಿಗೆ ತರಲು ಕೇಂದ್ರ ಹಾಗೂ ಬಿಹಾರ ರಾಜ್ಯ ಸರ್ಕಾರ ಹೆಣಗಾಡುತ್ತಿರುವ ನಡುವೆಯೇ ಈ ಜಿಲ್ಲೆಯಲ್ಲಿ ಆರೋಗ್ಯ ಮೂಲಸೌಕರ್ಯಗಳು ಆಘಾತಕಾರಿ ಸ್ಥಿತಿಯಲ್ಲಿ ಇರುವುದು ಅಧಿಕೃತ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಸಚಿವಾಲಯದ ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆ (ಎಚ್‌ಎಂಐಎಸ್) ಪ್ರಕಾರ, ಜಿಲ್ಲೆಯ ಎಲ್ಲ 103 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಮೌಲ್ಯಮಾಪನಕ್ಕೂ ಅರ್ಹವಲ್ಲ ಅಥವಾ ಅವುಗಳಿಗೆ 5 ಮೌಲ್ಯಾಂಕಗಳ ಪೈಕಿ ಸೊನ್ನೆ ಮೌಲ್ಯಾಂಕ ನೀಡಲಾಗಿದೆ.

ಎಚ್‌ಎಂಐಎಸ್‌ನಲ್ಲಿ ಮೌಲ್ಯಮಾಪನಕ್ಕೆ ಒಳಪಡಬೇಕಾದರೆ ಪ್ರಾಥಮಿಕ ಆರೋಗ್ಯ ಕೇಂದ್ರವು ಕನಿಷ್ಠ ಒಬ್ಬ ವೈದ್ಯಾಧಿಕಾರಿ, ಎರಡಕ್ಕಿಂತ ಹೆಚ್ಚು ಮಂದಿ ದಾದಿಯರು ಹಾಗೂ ಒಂದು ಹೆರಿಗೆ ಕೊಠಡಿ ಹೊಂದಿದ 24/7 ಕೇಂದ್ರ ಇರಬೇಕು. 24/7 ಕೇಂದ್ರ ಹೊರತುಪಡಿಸಿ ಕನಿಷ್ಠ ಒಬ್ಬ ವೈದ್ಯಾಧಿಕಾರಿ ಹಾಗೂ ನರ್ಸ್ ಇರಬೇಕು. ಆದರೆ 103 ಪಿಎಚ್‌ಸಿಗಳ ಪೈಕಿ 98 ಕೇಂದ್ರಗಳು ಕನಿಷ್ಠ ಅಗತ್ಯತೆಯನ್ನೂ ಪೂರೈಸಿಲ್ಲ. ಆದ್ದರಿಂದ 2018-19ರ ಮೌಲ್ಯಮಾಪನದಲ್ಲಿ ಇವುಗಳಿಗೆ ಯಾವುದೇ ಗ್ರೇಡ್ ನೀಡಿಲ್ಲ.

ಉಳಿದ ಐದು ಕೇಂದ್ರಗಳಲ್ಲಿ ಪ್ರತಿಯೊಂದು ಕೂಡಾ ಶೂನ್ಯ ರೇಟಿಂಗ್ ಪಡೆದಿವೆ. ಈ ರೇಟಿಂಗ್‌ನಲ್ಲಿ ಮೂರು ಅಂಕಗಳನ್ನು ಮೂಲಸೌಕರ್ಯಕ್ಕೆ ಹಾಗೂ ಎರಡು ಅಂಕಗಳನ್ನು ವೈದ್ಯಕೀಯ ಸೇವೆಗಳಿಗೆ ನೀಡಲಾಗುತ್ತದೆ. ಅಂದರೆ ಐದು ಕೇಂದ್ರಗಳು ಈ ಎರಡೂ ಮಾನದಂಡಗಳ ಅನ್ವಯ ಅಂಕ ಪಡೆಯಲು ವಿಫಲವಾಗಿವೆ.

ಅಧಿಕೃತ ಮಾರ್ಗಸೂಚಿಯ ಪ್ರಕಾರ, 30 ಸಾವಿರ ಮಂದಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕು. ಅಂದರೆ ಮುಝಾಫರ್‌ಪುರ ಜಿಲ್ಲೆಯಲ್ಲಿ 51 ಲಕ್ಷ ಜನಸಂಖ್ಯೆಗೆ 170 ಪಿಎಚ್‌ಸಿಗಳು ಇರಬೇಕು.

ಜಿಲ್ಲೆಯಲ್ಲಿ ಇರುವ ಏಕೈಕ ಸಮುದಾಯ ಆರೋಗ್ಯ ಕೇಂದ್ರದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕನಿಷ್ಠ ಮಾನದಂಡಗಳನ್ನೂ ಪೂರೈಸದ ಹಿನ್ನೆಲೆಯಲ್ಲಿ 2017-18ರ ರೇಟಿಂಗ್‌ನಲ್ಲಿ ಇದು ಮೌಲ್ಯಮಾಪನಕ್ಕೆ ಅರ್ಹವಲ್ಲ ಎಂಬ ಸ್ಥಾನಮಾನ ಸಿಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News