ಆದಿತ್ಯನಾಥ್, ಭಾಗವತ್ ವಿರುದ್ಧ ಸೋಶಿಯಲ್ ಮೀಡಿಯಾ ಪೋಸ್ಟ್: ಹರ್ದ್ ಕೌರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Update: 2019-06-20 07:38 GMT

ವಾರಣಾಸಿ, ಜೂ.20: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಟೀಕಿಸುವ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಹರ್ದ್ ಕೌರ್ ಎಂದೇ ಖ್ಯಾತರಾಗಿರುವ ಇಂಗ್ಲೆಡ್ ಮೂಲದ ರ್ಯಾಪರ್ ತರಣ್ ಕೌರ್ ಧಿಲ್ಲಾನ್ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣ ಸಹಿತ ಐಪಿಸಿಯ ವಿವಿಧ ಸೆಕ್ಷನ್ ಗಳನ್ವಯ ಪ್ರಕರಣ ದಾಖಲಿಸಿದ್ದಾರೆ.

ಸ್ಥಳೀಯ ವಕೀಲ ಶಶಾಂಕ್ ಶೇಖರ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಇಲ್ಲಿನ ಕೆಂಟೋನ್ಮೆಂಟ್ ಪೊಲೀಸರು ಬುಧವಾರ ಹರ್ದ್ ಕೌರ್ ವಿರುದ್ಧ ಸೆಕ್ಷನ್ 124ಎ (ದೇಶದ್ರೋಹ), ಸೆಕ್ಷನ್ 500(ಮಾನಹಾನಿ), ಸೆಕ್ಷನ್ 153 ( ವಿಭಿನ್ನ ಗುಂಪುಗಳ ನಡುವೆ ಧರ್ಮದ ಆಧಾರದಲ್ಲಿ ದ್ವೇಷ ಸೃಷ್ಟಿ), ಸೆಕ್ಷನ್ 505 ಹಾಗೂ ಐಟಿ ಕಾಯಿದೆಯ ಸೆಕ್ಷನ್ 66 ಅನ್ವಯ ಎಫ್‌ಐಆರ್ ದಾಖಲಿಸಿದ್ದಾರೆ.

ಕೌರ್ ತಮ್ಮ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಪುಟಗಳಲ್ಲಿ ಮಾಡಿರುವ ಪೋಸ್ಟ್ ಗಳಲ್ಲಿ ಆದಿತ್ಯನಾಥ್ ಅವರನ್ನು ‘‘ಅತ್ಯಾಚಾರಿ’’ ಎಂದು ಟೀಕಿಸಿದ್ದರಲ್ಲದೆ, ದೇಶದಲ್ಲಿ ನಡೆದ ಎಲ್ಲಾ ಉಗ್ರ ದಾಳಿಗಳಿಗೆ ಭಾಗವತ್ ಅವರನ್ನು ದೂರಿದ್ದಾರೆ.

ಕೌರ್ ಅವರ ಪೋಸ್ಟ್ ಗಳಿಂದ ತಮಗೆ ತೀವ್ರ ನೋವುಂಟಾಗಿದೆ ಎಂದು ದೂರುದಾರ ಶೇಖರ್ ಹೇಳಿದ್ದಾರೆ. ಪ್ರಕರಣದ ತನಿಖೆಯನ್ನು ಕ್ರೈಂ ಬ್ರ್ಯಾಂಚ್ ಘಟಕಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News