ಸಂಸತ್ತಿನಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗಲು ಅನುಮತಿಸುವುದಿಲ್ಲ: ಸ್ಪೀಕರ್ ಓಂ ಬಿರ್ಲಾ

Update: 2019-06-20 08:28 GMT

ಹೊಸದಿಲ್ಲಿ, ಜೂ.20: ಮಂಗಳವಾರ ಕೆಲವು ವಿಪಕ್ಷ ಸಂಸದರು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಧಾರ್ಮಿಕ ಘೋಷಣೆಗಳನ್ನು ಕೂಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಸಭೆಯ ನೂತನ ಸ್ಪೀಕರ್ ಓಂ ಬಿರ್ಲಾ ತಾವು ಇಂತಹ ಘಟನೆಗಳನ್ನು ಮರುಕಳಿಸಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.

ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಓಂ ಬಿರ್ಲಾ, “ಘೋಷಣೆಗಳನ್ನು ಕೂಗಲು ಹಾಗೂ ಪೋಸ್ಟರುಗಳನ್ನು ಪ್ರ್ರದರ್ಶಿಸಲು ಸಂಸತ್ತು ಸರಿಯಾದ ಸ್ಥಳವಲ್ಲ. ಅಂತಹ ಕಾರ್ಯಗಳನ್ನು ರಸ್ತೆಯಲ್ಲಿ ಮಾಡಬಹುದು. ಆದರೆ ಸಂಸತ್ತಿನಲ್ಲಿ ಅವರಿಗೆ ಹೇಳಬೇಕಾಗಿದ್ದನ್ನು ಹೇಳಬಹುದು. ಆರೋಪಗಳನ್ನು ಹೊರಿಸಬಹುದು ಯಾ ಸರಕಾರವನ್ನು ಟೀಕಿಸಬಹುದು, ಆದರೆ ಈ ರೀತಿ ಮಾಡಲು ಅವಕಾಶವಿಲ್ಲ'' ಎಂದು 17ನೇ ಲೋಕಸಭೆಯ ಸ್ಪೀಕರ್ ಆಗಿ ಸರ್ವಾನುಮತದಿಂದ ಆಯ್ಕೆಯಾದ ಓಂ ಬಿರ್ಲಾ ಹೇಳಿದ್ದಾರೆ.

ಇಂತಹ ಘಟನೆಗಳು ಮರುಕಳಿಸದು ಎಂದು ಭರವಸೆ ನೀಡಬಲ್ಲಿರಾ ಎಂಬ ಪ್ರಶ್ನೆಗೆ ಅವರು ನಕಾರಾತ್ಮಕವಾಗಿ ಉತ್ತರಿಸಿದರು. “ಹೀಗೆ ಮತ್ತೊಮ್ಮೆ ನಡೆಯಬಹುದೇ ಎಂದು ಗೊತ್ತಿಲ್ಲ. ಆದರೆ ನಿಯಮದ ಪ್ರಕಾರ ಸಂಸತ್ತನ್ನು ನಡೆಸಲು ಪ್ರಯತ್ನಿಸುತ್ತೇವೆ, ಸಂಸತ್ತು ಪ್ರಜಾಪ್ರಭುತ್ವದ ದೇವಾಲಯವಿದ್ದಂತೆ, ಈ ಸ್ಥಳದ ಗೌರವವನ್ನು ಎಲ್ಲಾ ಪಕ್ಷಗಳೂ ಕಾಪಾಡಬೇಕು'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News