ರಾಜೀನಾಮೆ ಅಂಗೀಕರಿಸದಿದ್ದರೆ ಶಾಸಕ ಸ್ಥಾನವೂ ಬೇಡ: ಎಚ್.ವಿಶ್ವನಾಥ್

Update: 2019-06-20 09:31 GMT

ಬೆಂಗಳೂರು, ಜೂ.20: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ನೀಡಿರುವ ರಾಜೀನಾಮೆಯನ್ನು ಪಕ್ಷದ ವರಿಷ್ಠರು ಅಂಗೀಕರಿಸಬೇಕು ಎಂದು ಮಾಧ್ಯಮಗಳ ಮೂಲಕವೇ ಅವರನ್ನು ಮನವಿ ಮಾಡುತ್ತಿದ್ದೇನೆ. ರಾಜೀನಾಮೆ ಅಂಗೀಕರಿಸದಿದ್ದರೆ ನನಗೆ ಶಾಸಕ ಸ್ಥಾನವು ಬೇಡ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.

ಗುರುವಾರ ನಗರದ ಶಾಸಕರ ಭವನದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದೇನೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ ಅಂಗೀಕರಿಸದಿದ್ದರೆ, ಪಕ್ಷದ ಶಾಸಕತ್ವವೂ ನನಗೆ ಬೇಡ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ನೀಡಿರುವ ರಾಜೀನಾಮೆ ವಿಚಾರದ ಕುರಿತು ಚರ್ಚಿಸಲು ದೇವೇಗೌಡರ ಮನೆಗೆ ಬರುತ್ತೇನೆ ಎಂದು ನಾನು ಹೇಳಿದ್ದೆ. ಆದರೆ, ಅವರನ್ನು ಎದುರಿಸುವ ಶಕ್ತಿ ನನಗಿಲ್ಲ. ನನಗೆ ಅವರು ಮಾಡಿರುವ ಸಹಾಯ ಅಷ್ಟು ದೊಡ್ಡದು. ಆದುದರಿಂದ, ಮಾಧ್ಯಮಗಳ ಮೂಲಕವೇ ನನ್ನ ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡುತ್ತಿದ್ದೇನೆ. ನಾನು ಹಾಗೂ ನನ್ನ ಕುಟುಂಬ ಅವರಿಗೆ ಸದಾಕಾಲ ಚಿರಋಣಿಯಾಗಿರುತ್ತದೆ ಎಂದು ವಿಶ್ವನಾಥ್ ಹೇಳಿದರು.

ರಾಜ್ಯದಲ್ಲಿ ಯಾವಾಗ ಬೇಕಿದ್ದರೂ ಮಧ್ಯಂತರ ಚುನಾವಣೆ ಎದುರಾಗಬಹುದು ಎಂದು ಈ ಹಿಂದೆ ಕುಮಾರಸ್ವಾಮಿಯೇ ಹೇಳಿದ್ದಾರೆ. ಆದುದರಿಂದ, ಪಕ್ಷದ ಹಿತದಷ್ಟಿಯಿಂದ ಅವರೇ ರಾಜ್ಯಾಧ್ಯಕ್ಷರಾಗುವುದು ಉತ್ತಮ. ಇದರಿಂದ, ಪಕ್ಷ ಸಂಘಟನೆಗೂ ಸಹಕಾರಿಯಾಗುತ್ತದೆ ಎಂದು ವಿಶ್ವನಾಥ್ ಹೇಳಿದರು.

ಮುಖ್ಯಮಂತ್ರಿ ಜೊತೆ ಕೆಲಸ ಮಾಡಬೇಕೆಂಬ ಆಸೆ ನನಗಿತ್ತು. ಆದರೆ, ಸನ್ನಿವೇಶ ಅದಕ್ಕೆ ಆಸ್ಪದ ನೀಡಲಿಲ್ಲ. ಮುಖ್ಯಮಂತ್ರಿಯೂ ನನ್ನ ಅನುಭವವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎನ್ನುವ ಮೂಲಕ ಸಚಿವ ಸ್ಥಾನ ಅಥವಾ ಸಮನ್ವಯ ಸಮಿತಿಗೆ ಸೇರ್ಪಡೆ ಮಾಡದಿದ್ದಕ್ಕೆ ವಿಶ್ವನಾಥ್ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ಜೆಡಿಎಸ್ ಕೋಟಾದಲ್ಲಿ ಖಾಲಿ ಇರುವ ಸಚಿವ ಸ್ಥಾನವನ್ನು ಮುಖ್ಯಮಂತ್ರಿ ಶೀಘ್ರವೇ ಭರ್ತಿ ಮಾಡಬೇಕು. ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಮಾಡಬೇಕು. ಇದರಿಂದಾಗಿ, ಪಕ್ಷದ ಸಂಘಟನೆ ಆಗಲಿದೆ. ನನಗೆ ಸಚಿವನಾಗುವ ಅವಸರವಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಪಕ್ಕದಲ್ಲಿ ನಿಂತು ಸೆಣಸಾಡಲು ನಾನು ಸಿದ್ಧವಾಗಿದ್ದೇನೆ ಎಂದು ಅವರು ಹೇಳಿದರು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪಕ್ಷೇತರರಿಗೆ ಈವರೆಗೆ ಖಾತೆಗಳನ್ನು ಹಂಚಿಕೆ ಮಾಡದಿರುವುದು ಅವಮಾನಕರ ಸಂಗತಿ. ಇದರಿಂದಾಗಿ ಅವರು ಪ್ರತಿನಿಧಿಸುವ ಸಮುದಾಯಗಳಿಗೆ ನೋವುಂಟು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಒಬ್ಬ ನಾಯಕನನ್ನು ರಾಜಕೀಯವಾಗಿ ಕೊಲ್ಲುವುದು ಒಳ್ಳೆಯದಲ್ಲ. ತನ್ನನ್ನು ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ, ಅಲ್ಪಸಂಖ್ಯಾತ ಸಮುದಾಯದ ಮುಖಂಡ ರೋಷನ್ ಬೇಗ್‌ರನ್ನು ಪಕ್ಷದಿಂದ ಅಮಾನತ್ತು ಮಾಡಿಸಿದ್ದಾರೆ. ನಾನು ಕಾಂಗ್ರೆಸ್ ಪಕ್ಷದಲ್ಲೆ ಇದ್ದಿದ್ದರೆ ರೋಷನ್ ಬೇಗ್ ಸ್ಥಿತಿಯೇ ನನಗೂ ಬರುತ್ತಿತ್ತು ಎಂದ ಅವರು ಹೇಳಿದರು.

ಸಮನ್ವಯದ ಅರ್ಥವೇ ಗೊತ್ತಿಲ್ಲದ ಸಿದ್ದರಾಮಯ್ಯ ಯಾವ ಸೀಮೆಯ ಸಮನ್ವಯ ಸಮಿತಿ ಅಧ್ಯಕ್ಷ. ಸಚಿವ ಸ್ಥಾನಕ್ಕಾಗಿ ಯಾರ ಮನೆ ಬಾಗಿಲು ತಟ್ಟುವ ಜಾಯಮಾನವೂ ನನ್ನದಲ್ಲ. ಈ ವಿಶ್ವನಾಥ್ ಯಾವತ್ತಿದ್ದರೂ ವಿಶ್ವನಾಥನೇ. ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಬೇಡಿ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಶಿಕ್ಷಣ ಇಲಾಖೆಯು ಕಳೆದ 7 ತಿಂಗಳಿನಿಂದ ಸಚಿವರಿಲ್ಲದೆ ಖಾಲಿಯಿದೆ. ಅಧಿಕಾರಿಗಳದ್ದೇ ದರ್ಬಾರ್ ಆಗಿದೆ. ಮುಖ್ಯಮಂತ್ರಿಗೂ ಶಿಕ್ಷಣ ಇಲಾಖೆಯ ಮೇಲೆ ಆಸಕ್ತಿ ಇಲ್ಲದಂತೆ ಕಾಣುತ್ತಿದೆ. ಜಿ.ಟಿ.ದೇವೇಗೌಡ ಕೂಡ ತನಗೆ ಉನ್ನತ ಶಿಕ್ಷಣ ಇಲಾಖೆಯ ಜವಾಬ್ದಾರಿ ಬೇಡ ಎಂದಿದ್ದಾರೆ. ಆದರೂ, ಆ ಇಲಾಖೆಯನ್ನು ಅವರ ತಲೆಗೆ ಕಟ್ಟಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆಯು ನಾವಿಕನಿಲ್ಲದ ಹಡಗಿನಂತಾಗಿದೆ. ಮುಖ್ಯಮಂತ್ರಿಗಳು ತಕ್ಷಣ ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ, ಮಾನವ ಸಂಪನ್ಮೂಲ ಹಾಳು ಮಾಡಿದಂತಾಗುತ್ತದೆ. ಶಿಕ್ಷಣ ಇಲಾಖೆಯನ್ನು ನಿರ್ಲಕ್ಷಿಸುವ ಸರಕಾರವನ್ನು ಜನತೆ ಕ್ಷಮಿಸುವುದಿಲ್ಲ ಎಂದು ವಿಶ್ವನಾಥ್ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News