ಸೋನಿಯಾ-ರಾಹುಲ್ ಒತ್ತಾಯದ ಮೇರೆಗೆ ಸರಕಾರ ರಚನೆ: ಎಚ್.ಡಿ.ದೇವೇಗೌಡ

Update: 2019-06-20 14:22 GMT

ಬೆಂಗಳೂರು, ಜೂ.20: ಸಮ್ಮಿಶ್ರ ಸರಕಾರ ಮುಂದುವರಿದರೆ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗುತ್ತದೆ ಎಂದು ಕೆಲವು ನಾಯಕರು ಮಾಧ್ಯಮಗಳಲ್ಲಿ ಹೇಳುತ್ತಿದ್ದಾರೆ. ಮೈತ್ರಿ ಸರಕಾರವನ್ನು ನಾನು ರಚನೆ ಮಾಡಿಲ್ಲ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ  ಹಾಗೂ ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಈ ಸರಕಾರ ಆಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಗುರುವಾರ ನಗರದ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಅವತ್ತೇ ಕಾಂಗ್ರೆಸ್ ನಾಯಕರಿಗೆ ಸರಕಾರ ರಚನೆ ಬೇಡ ಎಂದಿದ್ದೆ. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಕೈ ಹಿಡಿದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ಮನವಿ ಮಾಡಿದರು ಎಂದರು.

ನಾನು ಆಗುವುದಿಲ್ಲವೆಂದು ಅವರಿಗೆ ಹೇಳಿ ಬಂದೆ. ಆದರೂ, ಬೆಳಗ್ಗೆ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಬೇಕೆಂದರು. ಅಲ್ಲಿಂದ ಇಲ್ಲಿಯವರೆಗೆ ಈ ಸರಕಾರ ಬಂದಿದೆ ಎಂದು ದೇವೇಗೌಡ ತಿಳಿಸಿದರು.

ಮೈತ್ರಿ ಸರಕಾರಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಾನು, ನಮ್ಮ ಪಕ್ಷದವರು ಮಾತನಾಡುವುದಿಲ್ಲ. ಮುಂದಿನ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ಕೆಲಸವನ್ನು ನಾನು ಮಾಡುತ್ತೇನೆ. ಬೇರೆ ಯಾವುದೇ ವಿಷಯಗಳಿಗೂ ಪ್ರತಿಕ್ರಿಯೆ ನೀಡುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಮ್ಮ ಅಭ್ಯರ್ಥಿಗೆ ಸನ್ಮಾನ ಮಾಡಲಾಗಿತ್ತು. ನಾಳೆ ನಮ್ಮ ಪರಾಜಿತ ಅಭ್ಯರ್ಥಿಗಳ ಸಭೆ ನಡೆಸಿ, ಅವರಿಗೂ ಗೌರವ ನೀಡುವ ಕೆಲಸವನ್ನು ಮಾಡುತ್ತೇವೆ ಎಂದು ಅವರು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದೇನೆ. ಇತ್ತೀಚೆಗೆ ಅವರನ್ನು ಭೇಟಿಯಾದಾಗ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಸಲಹೆ ನೀಡಿದೆ. ಅಲ್ಲದೇ, ಸರಕಾರದ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಯಾರೊಬ್ಬರೂ ಹೇಳಿಕೆಗಳನ್ನು ನೀಡದಂತೆ ನಿಯಂತ್ರಿಸಿ ಎಂದು ಮನವಿ ಮಾಡಿದ್ದೇನೆ. ನಾವು ಒಂದು ಸಚಿವ ಸ್ಥಾನ ಪಕ್ಷೇತರರಿಗೆ ನೀಡಿರುವ ವಿಚಾರವನ್ನು ರಾಹುಲ್ ಗಾಂಧಿ ಗಮನಕ್ಕೆ ತರಲಾಗಿದೆ ಎಂದು ದೇವೇಗೌಡ ಹೇಳಿದರು.

 ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದಾರೆ. ಹಿಂದುಳಿದ ವರ್ಗಗಳ ಮುಖಂಡರ ಸಭೆಯನ್ನು ಇಂದು ಕರೆದಿದ್ದೇನೆ. ಅಲ್ಲಿಗೆ ವಿಶ್ವನಾಥ್ ಕೂಡ ಬರುತ್ತಾರೆ. ಮತ್ತೊಮ್ಮೆ ಅವರ ಮನವೊಲಿಕೆಯ ಪ್ರಯತ್ನ ಮಾಡುತ್ತೇವೆ. ವಿಶ್ವನಾಥ್ ಅಧ್ಯಕ್ಷ ಸ್ಥಾನ ಬೇಡ ಎಂದಿದ್ದಾರೆಯೇ ಹೊರತು, ಪಕ್ಷ ಬಿಡುತ್ತೇನೆಂದು ಎಲ್ಲಿಯೂ ಹೇಳಿಲ್ಲ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ನಾಳೆಯಿಂದ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಈ ಹಿಂದೆ ತಮಿಳುನಾಡಿನಲ್ಲಿ ಕಾಮರಾಜರು ಮುಖ್ಯಮಂತ್ರಿ ಆಗಿದ್ದಾಗ ಈ ರೀತಿ ಮಾಡಿದ್ದರು. ಇದರಿಂದಾಗಿ, ಸ್ಥಳದಲ್ಲಿಯೇ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂದು ವಿಭಾಗ ಮಾಡದೇ, ರಾಜ್ಯದ 30 ಜಿಲ್ಲೆಗಳಲ್ಲೂ ಗ್ರಾಮ ವಾಸ್ತವ್ಯ ಮಾಡುವಂತೆ ಮುಖ್ಯಮಂತ್ರಿಗೆ ಸಲಹೆ ನೀಡಿರುವುದಾಗಿ ದೇವೇಗೌಡ ಹೇಳಿದರು.

ನಮ್ಮ ಪಾಲಿನ ಒಂದು ಸ್ಥಾನ ಹೋಯಿತು ಎಂದು  ನಾನು ಚಿಂತೆ ಮಾಡುವುದಿಲ್ಲ. ಸಿದ್ದರಾಮಯ್ಯ ಸಲಹೆ ಮೇರೆಗೆ ಒಂದು ಸ್ಥಾನವನ್ನು ಕಾಂಗ್ರೆಸ್ ‌ನವರಿಗೆ ನೀಡಿದ್ದೇವೆ. ಒಳ್ಳೆಯ ಕೆಲಸ ಮಾಡಿದರೂ ಮಾಧ್ಯಮಗಳು ಹೇಳಲ್ಲ. ಹಣದ ಸಮಸ್ಯೆಯಿಂದಾಗಿ ರಾಜ್ಯ ಸರಕಾರದ ಒಂದು ವರ್ಷಗಳ ಸಾಧನೆ ಬಗ್ಗೆ ಕೆಲವು ಪತ್ರಿಕೆಗಳಿಗೆ ಮಾತ್ರ ಜಾಹೀರಾತು ನೀಡಿದ್ದೇವೆ ಎಂದು ದೇವೇಗೌಡ ಹೇಳಿದರು.

ಇದೇ ವೇಳೆ ಸಂಪುಟ ವಿಸ್ತರಣೆ ವೇಳೆ ಅಲ್ಪಸಂಖ್ಯಾತರಿಗೆ ಅವಕಾಶ ಕೊಡಲಿಲ್ಲ ಅನ್ನೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಹಾಗೂ ದೇವೇಗೌಡರ ನಡುವೆ ಭಿನ್ನಾಭಿಪ್ರಾಯವಿದೆ ಅನ್ನೋದು ಮಾಧ್ಯಮಗಳ ಕಲ್ಪನೆ ಅಷ್ಟೇ. ಮುಸ್ಲಿಮರಿಗಾಗಿ ನಾವು ಅನೇಕ ಕೆಲಸಗಳನ್ನು ಮಾಡಿದ್ದೇವೆ. ಆದರೂ, ನಾನು ಅಲ್ಪಸಂಖ್ಯಾತರಿಗೆ ಏನು ಮಾಡಿಲ್ಲವೆಂದು ದೂರುವುದು ತಪ್ಪು ಎಂದರು.

ಆರು ತಿಂಗಳು ಅಥವಾ ಒಂದು ವರ್ಷಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. ಈ ಬಾರಿಯ ಸ್ಥಳೀಯ ಸಂಸ್ಥೆಯಲ್ಲಿ ನಮ್ಮ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿಯೂ 3-4 ಜನ ಗೆದ್ದಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ.50ರಷ್ಟು ಅಲ್ಪಸಂಖ್ಯಾತ ಸಮುದಾಯದವರು ಗೆದ್ದಿದ್ದಾರೆ. ಆದರೂ, ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಅನ್ನೋ ನೋವಿದೆ. ಅದಕ್ಕಾಗಿ ನಾನು ಅವರ ಕ್ಷಮೆ ಯಾಚಿಸುತ್ತೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News