ವೈದ್ಯರ ಮೇಲೆ ಹಲ್ಲೆಗಳ ತಡೆಗೆ ಕಾನೂನು ಮಾರ್ಪಾಡು: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-06-20 12:59 GMT

ಬೆಂಗಳೂರು, ಜೂ.20: ರಾಜ್ಯದಲ್ಲಿ ವೈದ್ಯರ ಮೇಲೆ, ಹಲ್ಲೆ, ದೌರ್ಜನ್ಯ ಪ್ರಕರಣಗಳು ನಡೆಯದಂತೆ ತಡೆಯಲು ಕಾನೂನುಗಳನ್ನು ಮಾರ್ಪಾಡು ಮಾಡಿ, ತಪ್ಪು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ನಗರದ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಆವರಣದಲ್ಲಿ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ದೇಶದ ಎಲ್ಲೆಡೆ ವೈದ್ಯರ ಮೇಲೆ ಹಲ್ಲೆಗಳು ಅಧಿಕವಾಗುತ್ತಿರುವುದು ಖಂಡನಾರ್ಹ. ಹಲ್ಲೆ ಖಂಡಿಸಿ ವೈದ್ಯರು ಮುಷ್ಕರ ನಡೆಸಿದ್ದರಿಂದ ನೂರಾರು ಸಂಖ್ಯೆಯಲ್ಲಿನ ರೋಗಿಗಳು ಪರದಾಡುವಂತಾಯಿತು. ಈ ನಿಟ್ಟಿನಲ್ಲಿ ವೈದ್ಯರ ಹಿತದೃಷ್ಟಿಯಿಂದ ಹಾಗೂ ಅವರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವೈದ್ಯರಿಗೆ ರಕ್ಷಣೆ ನೀಡುವ ಸಲುವಾಗಿ ಕರ್ನಾಟಕ ಸರಕಾರ 2006 ನೆ ಸಾಲಿನಲ್ಲಿ ಒಂದು ಕಾನೂನು ತಂದಿದೆ. ಅದರ ಅಡಿಯಲ್ಲಿ ವೈದ್ಯರ ಮೇಲೆ ಹಲ್ಲೆ, ದೌರ್ಜನ್ಯ ನಡೆಸುವ ಆರೋಪಿಗಳಿಗೆ ಮೂರು ವರ್ಷ ಜೈಲುವಾಸ ಅಂಶ ಸೇರ್ಪಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾನೂನು ಮಾರ್ಪಾಡು ಮಾಡಿ, ವೈದ್ಯರಿಗೆ ಮತ್ತಷ್ಟು ರಕ್ಷಣೆ ನೀಡಲು ಸರಕಾರ ಬದ್ಧವಾಗಿದೆ ಎಂದು ನುಡಿದರು.

ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯ ಜನ ಸೇವೆಯ ಕ್ಷೇತ್ರಗಳು. ಇದರಲ್ಲಿ ದಾನಿಗಳ ಪಾತ್ರವೂ ಬಹುಮುಖ್ಯ ಎಂದ ಅವರು, ಕಾರವಾರ ಸಮೀಪದ ಮೈದನಿ ಗ್ರಾಮದ 8 ಕಿ.ಮೀ. ರಸ್ತೆ ನವೀಕರಣಕ್ಕೆ ಇನ್ಫೋಸಿಸ್ ಫೌಂಡೇಶನ್ ಮುಂದಾಗಿದೆ. ಇದಕ್ಕೆ ಸಂಬಂಧಿಸಿದ ಸಹಕಾರ ನೀಡಲು ಸರಕಾರ ಮುಂದಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಕಿದ್ವಾಯಿಗೆ ಅನೇಕ ಕೊಡುಗೆಗಳು ಹರಿದು ಬಂದಿದೆ. ಈ ಪೈಕಿ, ಇನ್ಫೋಸಿಸ್ ಫೌಂಡೇಶನ್‌ನ ಸುಧಾಮೂರ್ತಿ ಅವರು ಅತಿದೊಡ್ಡ ದಾನಿ. ಇದೇ ರೀತಿ, ಸರಕಾರಿ ಆಸ್ಪತ್ರೆಗಳಿಗೆ ಸಂಘ-ಸಂಸ್ಥೆಗಳ ಸಹಕಾರ ದೊರೆತರೆ, ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ನುಡಿದರು.

ಸಚಿವ ಇ.ತುಕಾರಾಂ ಮಾತನಾಡಿ, 45 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಿದ್ದಾರೆ. ಇದು ರಾಜಕೀಯ ಭಾಷಣ ಅಲ್ಲ. ಆರೋಗ್ಯ ಸೇವೆಯ ಜೊತೆ ಅನ್ನದಾತರ ಸೇವೆ ಮಾಡುವ ಕೆಲಸ ಎಂದ ಅವರು, ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕಾಂತ್ರಿಗೆ ಮುಂದಾಗೋಣ. ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆ ನೀಗಿಸಿ, ಜನರಿಗೆ ಉತ್ತಮ ಸೇವೆ ನೀಡಲು ಮುಂದಾಗಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು.

ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ರಾಮಚಂದ್ರ ಮಾತನಾಡಿ, ಕಿದ್ವಾಯಿಯಲ್ಲಿ ಈಗಾಗಲೇ 8 ಕೊಠಡಿಗಳಿತ್ತು. ಈಗ 5 ಹೆಚ್ಚಿನ ಕೊಠಡಿಗಳನ್ನು ಇನ್ಫೋಸಿಸ್ ಫೌಂಡೇಶನ್ ವತಿಯಿಂದ ದೊರಕಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಯೂ ಶಸ್ತ್ರಚಿಕಿತ್ಸೆಗಾಗಿ ಕಾಯುವ ಅಗತ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಫೌಂಡೇಶನ್‌ನ ಸಂಸ್ಥಾಪಕಿ ಸುಧಾ ಮೂರ್ತಿ, ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News