ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಡೋಸೇಜ್ ಹೆಚ್ಚಳ

Update: 2019-06-20 16:58 GMT

ಬೆಂಗಳೂರು, ಜೂ.20 : ರಾಸುಗಳ ಕಾಲು ಬಾಯಿ ಜ್ವರ ನಿಯಂತ್ರಣ್ಕಕಾಗಿ ನೀಡುವ ಲಸಿಕೆ ಉತ್ಪಾದನೆಯನ್ನು 200 ಮಿಲಿಯನ್ ಡೋಸೇಜ್‌ನಿಂದ 500 ಮಿಲಿಯನ್ ಡೋಸೇಜ್‌ಗೆ ಹೆಚ್ಚಿಸಲು 200 ಕೋಟಿ ರೂ.ಗಳ ಹೂಡಿಕೆ ಮಾಡಿರುವುದಾಗಿ ಬಯೋವೆಟ್ ಕಂಪನಿ ಸಂಸ್ಥಾಪಕ ಡಾ.ಕೃಷ್ಣ ಪ್ರಕಟಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಂಗಳೂರು ಸಮೀಪದ ಮಾಲೂರಿನಲ್ಲಿ ಕಾಲು ಬಾಯಿ ಜ್ವರಕ್ಕೆ ಲಸಿಕೆ ತಯಾರಿಕಾ ಘಟಕವಿದ್ದು, ಸದ್ಯ ವಾರ್ಷಿಕ 200 ಮಿಲಿಯನ್ ಡೊಸೇಜ್ ಲಸಿಕೆ ತಯಾರಿಸುತ್ತಿದ್ದೇವೆ. ದೇಶದಲ್ಲಿ 1000 ಮಿಲಿಯನ್ ಡೋಸೇಜ್ ಲಸಿಕೆ ಅಗತ್ಯವಿದ್ದು, 500 ಮಿಲಿಯನ್ ಡೋಸೇಜ್ ಮಾತ್ರ ಪೂರೈಕೆಯಾಗುತ್ತಿದೆ. ಶೇ.50 ರಷ್ಟು ಲಸಿಕೆ ಕೊರತೆ ಇದೆ. ಹಾಗಾಗಿ ನಾವು ಕೊರತೆಗೆ ಪೂರಕವಾಗಿ ಹೆಚ್ಚುವರಿ ವ್ಯಾಕ್ಸಿನ್ ತಯಾರಿಕೆಗೆ ಮುಂದಾಗಿದ್ದೇವೆ ಎಂದರು.

ನಮ್ಮ ಮಾಲೂರು ಘಟಕದ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಣೆ ಮಾಡುತ್ತಿದ್ದೇವೆ. ಹೆಚ್ಚುವರಿಯಾಗಿ 300 ಮಿಲಿಯನ್ ಡೋಸೇಜ್ ತಯಾರಿಕೆ ಮಾಡುವ ಮೂಲಕ ವಾರ್ಷಿಕ 500 ಮಿಲಿಯನ್ ಡೋಸೇಜ್‌ಗೆ ಸಾಮರ್ಥ್ಯವನ್ನು ಹೆಚ್ಚಿಸಲಿದ್ದೇವೆ. ಜೊತೆಗೆ ಬ್ರುಸೆಲ್ಲಾಸಿಸ್ ಲಸಿಕೆಯನ್ನು ವಾರ್ಷಿಕ 100 ಮಿಲಿಯನ್ ಡೋಸೇಜ್ ತಯಾರಿಕೆ ಮಾಡುತ್ತೇವೆ. ಇದಕ್ಕಾಗಿ ಈಗ 200 ಕೋಟಿ ರೂ.ಗಳನ್ನು ಹೂಡಿಕೆ ಮಾಡುತ್ತಿದ್ದು ಮುಂದಿನ ವರ್ಷದ ಎರಡನೇ ತ್ರೈಮಾಸಿಕದ ವೇಳೆಗೆ ವಿಸ್ತರಣಾ ಘಟಕ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

ಕಾಲುಬಾಯಿ ಜ್ವರಕ್ಕೆ ಲಸಿಕೆ ಪೂರೈಕೆಯನ್ನು ದೇಶದಲ್ಲಿ ಮೂರು ಕಂಪನಿಗಳು ಮಾಡುತ್ತಿದ್ದರೂ ಕೂಡ ಬಿಎಸ್‌ಎಲ್-3 ಕಂಟೈನ್ಮೆಂಟ್ ವ್ಯವಸ್ಥೆ ಅಳವಡಿಸಿ ಕೊಂಡಿರುವ ದೇಶದ ಮೊದಲ ಹಾಗೂ ಜಗತ್ತಿನ ಎರಡನೇ ಕಂಪನಿ ನಮ್ಮದಾಗಿದೆ. ಭವಿಷ್ಯದ ದೃಷ್ಟಿಯಿಂದ ಹೆಚ್ಚಿನ ತಂತ್ರಜ್ಞಾನ ಅಳವಡಿಸಿಕೊಂಡಿದ್ದೇವೆ. ಪೋಲಿಯೋ ಲಸಿಕೆ ಪೂರೈಕೆಯಲ್ಲಿಯೂ ನಮ್ಮ ಕಂಪನಿ ಹೆಚ್ಚಿನ ಪಾಲು ಹೊಂದಿತ್ತು, ಕಾಲುಬಾಯಿ ಜ್ವರದ ಲಸಿಕೆ ಪೂರೈಕೆಯಲ್ಲಿಯೂ ಹೆಚ್ಚಿನ ಪಾಲು ಹೊಂದಿದೆ ಎಂದರು.

ಹೈನುಗಾರಿಕೆ ಅವಲಂಭಿಸಿರುವ ರೈತರಿಗೆ ನೆರವಾಗುವ ಕಾರಣಕ್ಕೆ ನಾವು ಲಸಿಕೆ ತಯಾರಿಕೆಗೆ ಆದ್ಯತೆ ನೀಡಿದ್ದೇವೆ. ಒಂದು ವೇಳೆ ರೈತರು ತಮ್ಮ ರಾಸುಗಳಿಗೆ ಲಸಿಕೆ ಹಾಕಿಸದೇ ಇದ್ದರೆ ಕಾಲುಬಾಯಿ ಜ್ವರದ ವೈರಸ್ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಜ್ವರ ಬಂದರೆ ಹಾಲಿನ ಉತ್ಪಾದನೆಯಲ್ಲಿ ಕುಂಠಿತವಾಗಿ ರೈತ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಈ ರೀತಿ ಕಾಲು ಬಾಯಿ ಜ್ವರದ ವೈರಸ್ ಹರಡುವಿಕೆಯಿಂದಾಗಿ ಪ್ರತಿ ವರ್ಷ ಅಂದಾಜು 25 ಸಾವಿರ ಕೋಟಿ ರೂ.ಗಳ ಆರ್ಥಿಕ ನಷ್ಟವಾಗುತ್ತಿದೆ. ಹಾಗಾಗಿ ಎಫ್‌ಎಂಡಿ ಲಸಿಕೆ ಬಹಳ ಪ್ರಮುಖವಾಗಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News