ಬಿಹಾರ: ಮೆದುಳುರೋಗಕ್ಕೆ ಬಲಿಯಾಗಿರುವ ಮಾಧ್ಯಮಗಳು

Update: 2019-06-21 05:13 GMT

‘‘ಸ್ಕೋರ್ ಎಷ್ಟಾಯಿತು?’’ ಹೀಗೆಂದು ಅತ್ಯಾಸಕ್ತಿಯಿಂದ ವಿಚಾರಿಸಿದ್ದು ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ. ಇದರಲ್ಲೇನು ವಿಶೇಷ? ಸಚಿವನೊಬ್ಬ ಕ್ರಿಕೆಟ್ ಅಭಿಮಾನಿಯಾಗಿರಕೂಡದೇ? ಎಂಬ ಪ್ರಶ್ನೆ ಉದ್ಭವಿಸಬಹುದು. ಅದೂ ಅಲ್ಲದೆ ಭಾರತ-ಪಾಕ್ ನಡುವೆ ಮ್ಯಾಚ್ ನಡೆಯುತ್ತಿರುವುದರಿಂದ ಸ್ಕೋರ್‌ನ ಬಗ್ಗೆ ವಿವರ ಸಂಗ್ರಹಿಸುವುದು ದೇಶಪ್ರೇಮದ ಭಾಗವೂ ಕೂಡ. ಆದರೆ ಅದೊಂದು ಅಸಂಗತ ಪ್ರಶ್ನೆಯಾಗಿ ಮಾರ್ಪಡಲು ಕಾರಣ, ಅವರು ಸ್ಕೋರ್ ಕುರಿತಂತೆ ಆಸಕ್ತಿ ತೋರಿಸಿದ್ದು ಮುಝಫ್ಫರ್‌ಪುರದಲ್ಲಿ ಮಕ್ಕಳ ನಿಗೂಢ ಸಾವಿಗೆ ಸಂಬಂಧಿಸಿ ಚರ್ಚಿಸುವುದಕ್ಕೆ ಕರೆದ ಸಭೆಯಲ್ಲಿ. ಬಿಹಾರದ ಮುಝಫ್ಫರ್‌ಪುರದಲ್ಲಿರುವ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಎಸ್‌ಕೆಎಂಸಿಎಚ್) ಯಲ್ಲಿ ನೂರಕ್ಕೂ ಅಧಿಕ ಮಕ್ಕಳನ್ನು ಬಲಿಪಡೆದುಕೊಂಡಿರುವ ಮೆದುಳು ಕಾಯಿಲೆಯನ್ನು ನಿಯಂತ್ರಿಸಲು ಕ್ರಮಗಳನ್ನು ಚರ್ಚಿಸಲು ಆಯೋಜಿಸಲಾಗಿದ್ದ ಆರೋಗ್ಯ ಇಲಾಖೆಯ ಸಭೆಯ ಮಧ್ಯೆ ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ ವಿಶ್ವಕಪ್‌ನ ಭಾರತ-ಪಾಕಿಸ್ತಾನ ಪಂದ್ಯದ ಸ್ಥಿತಿಗತಿ ಬಗ್ಗೆ ವಿಚಾರಿಸಿದ್ದರು. ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಸಹಾಯಕ ಸಚಿವ ಅಶ್ವನಿ ಕುಮಾರ್ ಚೌಬೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಇವರು ಯಾವ ಸ್ಕೋರನ್ನು ವಿಚಾರಿಸುತ್ತಿದ್ದಾರೆ? ಸಾಯುತ್ತಿರುವ ಮಕ್ಕಳ ಸಂಖ್ಯೆ ಎಲ್ಲಿಗೆ ತಲುಪಿತು ಎನ್ನುವುದನ್ನು ವ್ಯಂಗ್ಯವಾಗಿ ಕೇಳುತ್ತಿದ್ದಾರೆಯೇ ಅಥವಾ ಕ್ರಿಕೆಟ್ ಸ್ಕೋರ್ ವಿಚಾರಿಸುತ್ತಿದ್ದಾರೆಯೇ ಎಂದು ಗೊಂದಲಗೊಳ್ಳುವ ಸರದಿ ಅಧಿಕಾರಿಗಳದ್ದು.

ದೇಶದ ವರ್ಚಸ್ಸಿಗೆ ಧಕ್ಕೆ ತಂದಿರುವ ಮಕ್ಕಳ ಸಾವಿನ ಸಂಖ್ಯೆ 150ನ್ನು ದಾಟಿದೆ. ಆದರೆ ಸಚಿವರ ಹೃದಯವನ್ನು ಈ ಸಂಗತಿ ಕಲಕಿಯೇ ಇರಲಿಲ್ಲ. ಮಕ್ಕಳ ಸಾವಿಗಿಂತಲೂ ಕ್ರಿಕೆಟ್ ಕುರಿತಂತೆಯೇ ತಲೆಕೆಡಿಸಿಕೊಂಡ ಸಚಿವರಲ್ಲಿ ಪಾಂಡೆ ಏಕಾಂಗಿಯಲ್ಲ. ಈ ಸಭೆಗೂ ಮುನ್ನ ಡಾ.ಹರ್ಷವರ್ಧನ್ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಸಹಾಯಕ ಸಚಿವ ಚೌಬೆ ನಿದ್ದೆ ಹೋಗಿರುವುದು ಕಂಡುಬಂದಿತ್ತು. ಆದರೆ ತಾನು ಮಲಗಿರಲಿಲ್ಲ ಬದಲಿಗೆ ಧ್ಯಾನದಿಂದ ವಿಷಯವನ್ನು ಆಲಿಸುತ್ತಿದ್ದೆ ಎಂದು ಹೇಳುವ ಮೂಲಕ ಅವರು ಟೀಕೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಬಿಹಾರದ ಆಸ್ಪತ್ರೆಗಳ ತುರ್ತುನಿಗಾ ವಿಭಾಗಗಳಲ್ಲಿ ಹಾಸಿಗೆಗಳ ಕೊರತೆಯಿರುವುದನ್ನು ಇಡೀ ದೇಶವೇ ಕಾಣುತ್ತಿದೆ. ಒಂದು ಹಾಸಿಗೆಯಲ್ಲಿ ಮೂರರಿಂದ ನಾಲ್ಕು ಮಕ್ಕಳನ್ನು ಮಲಗಿಸಲಾಗಿದೆ. ಈ ಆಸ್ಪತ್ರೆಗಳಲ್ಲಿರುವ ವೈದ್ಯರೂ ಸಾಕಷ್ಟು ಸಂಖ್ಯೆಯಲ್ಲಿಲ್ಲ ಎನ್ನುವುದಕ್ಕೂ ದೇಶ ಸಾಕ್ಷಿಯಾಗಿದೆ. ಮೆದುಳು ಉರಿಯೂತಕ್ಕೆ ನೀಡುವಂತಹ ಔಷಧಿಗಳು ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿಲ್ಲ ಎಂದು ವೈದ್ಯರು ಕ್ಯಾಮರಾಗಳ ಮುಂದೆ ಹೇಳುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ದೇಶದಲ್ಲಿ ಮೆದುಳಿನ ಉರಿಯೂತ ಅಂದರೆ ಅಕ್ಯೂಟ್ ಎನ್ಸೆಫಲೈಟಿಸ್ ಸಿಂಡ್ರೊಮ್ (ಎಇಎಸ್) ಮಕ್ಕಳನ್ನು ಬಲಿಪಡೆಯುತ್ತಿರುವುದು ಇದೇ ಮೊದಲೇನಲ್ಲ. ಎಇಎಸ್ ಜೊತೆ ಜಪಾನೀಸ್ ಎನ್ಸೆಫಲೈಟಿಸ್ ಭಾರತದಲ್ಲಿ ಪದೇಪದೇ ತಲೆದೋರುವ ಮಹಾಮಾರಿಯಾಗಿದೆ. ಉತ್ತರ ಪ್ರದೇಶದ ಗೋರಖ್‌ಪುರದ ಬಾಬಾ ರಾಘವದಾಸ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯೊಂದರಲ್ಲೇ ಒಟ್ಟು 26,000 ಮಕ್ಕಳು ಈ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದಾರೆ. 2014ರಲ್ಲಿ ಮುಝಫ್ಫರ್‌ಪುರದ ಎಸ್‌ಕೆಎಂಸಿಎಚ್ ಆಸ್ಪತ್ರೆಯಲ್ಲಿ 379 ಮಕ್ಕಳು ಈ ಮಹಾಮಾರಿಗೆ ಜೀವತೆತ್ತಿದ್ದರು. ಅಂದು ಮತ್ತು ಈಗಿನ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅವರು ಆಗಲೂ ಮೊನ್ನೆಯಂತೆ ಮುಝಫ್ಫರ್‌ಪುರಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ, ನೂರು ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮಕ್ಕಳ ಚಿಕಿತ್ಸೆಗಾಗಿ ಹತ್ತು ಹಾಸಿಗೆಗಳ ಸೌಲಭ್ಯವನ್ನು ನಿರ್ಮಿಸುವುದು ಸೇರಿದಂತೆ ಅನೇಕ ಕ್ರಮಗಳನ್ನು ಘೋಷಿಸಿದ್ದರು. ಸೀತಾಮಡಿ ಮತ್ತು ಮೋತಿಗಡಿ ಮುಂತಾದ ಆಸುಪಾಸಿನ ಜಿಲ್ಲೆಯ ಜನರು ಅವಲಂಬಿರತರಾಗಿರುವ ಏಕೈಕ ಆಸ್ಪತ್ರೆಯಿರುವ ಮುಝಫ್ಫರ್‌ಪುರ್‌ನಲ್ಲಿ ವೈರಾಣು ಸಂಶೋಧನಾಲಯ ನಿರ್ಮಿಸುವ ಭರವಸೆಯನ್ನೂ ಅವರು ನೀಡಿದ್ದರು. ಸದ್ಯ 2019ರಲ್ಲಿ, ಆ ಭರವಸೆಗಳನ್ನು ನೀಡಿ ಐದು ವರ್ಷಗಳ ನಂತರ ಮತ್ತು ನೂತನ ಸರಕಾರದಲ್ಲಿ ಮತ್ತೆ ಕೇಂದ್ರ ಆರೋಗ್ಯ ಸಚಿವರಾಗಿ ನೇಮಕಗೊಂಡಿರುವ ಡಾ. ಹರ್ಷವರ್ಧನ್ ಮತ್ತೆ ಎಸ್‌ಕೆಎಂಸಿಎಚ್ ಆಸ್ಪತ್ರೆಗೆ ಭೇಟಿ ನೀಡಿ , ತನ್ನ ಸಹಾಯಕ ಸಚಿವ ಚೌಬೆ ಅವರು ನಿದ್ದೆಯಲ್ಲಿರುವ ಅಥವಾ ಧ್ಯಾನದಲ್ಲಿರುವ ಸಂದರ್ಭದಲ್ಲಿ ಮತ್ತದೇ ಭರವಸೆಗಳನ್ನು ಪುನರುಚ್ಚರಿಸಿದ್ದಾರೆ. ಎರಡನೇ ಬಾರಿ ಇಂತಹ ದುರಂತ ನಡೆಯುವವರೆಗೂ 2014ರಲ್ಲಿ ನೀಡಿದ ಭರವಸೆಗಳನ್ನು ಯಾಕೆ ಪೂರ್ಣಗೊಳಿಸಿಲ್ಲ ಎಂದು ಸಚಿವರನ್ನು ಗೋಷ್ಠಿಯಲ್ಲಿದ್ದ ಯಾವ ಪತ್ರಕರ್ತನೂ ಪ್ರಶ್ನಿಸಲಿಲ್ಲ. ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಾಗ ಅಮಿತ್ ಶಾ ಅದನ್ನು ‘ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಇನ್ನೊಂದು ದಾಳಿ’ ಎಂದು ವರ್ಣಿಸಿದ್ದರು. ಆದರೆ ನಿಜಕ್ಕೂ ಭಾರತ ನಡೆಸಬೇಕಾದ ದಾಳಿಯ ಸ್ಥಳ ಯಾವುದು? ಪಾಕಿಸ್ತಾನವನ್ನು ತೋರಿಸಿಯೇ ತನ್ನ ಸಾಧನೆಗಳನ್ನು ಹೇಳಿಕೊಳ್ಳುವ, ಕ್ರಿಕೆಟ್‌ನಂತಹ ಆಟಗಳನ್ನೇ ವೈಭವೀಕರಿಸಿ ಜನರನ್ನು ಮರುಳುಗೊಳಿಸುವ ಈ ನಾಯಕರು ಪ್ರತಿ ದಿನ ಏರುತ್ತಿರುವ ಮಕ್ಕಳ ಸಾವಿನ ಸಂಖ್ಯೆಗೆ ಯಾವ ಪ್ರತಿಕ್ರಿಯೆಯನ್ನೂ ತೋರುತ್ತಿಲ್ಲ. ಬಿಹಾರ ಪಾಕಿಸ್ತಾನದಲ್ಲಿದೆಯೇ? ಬಿಹಾರದಲ್ಲಿ ನಡೆಯುತ್ತಿರುವ ಮಕ್ಕಳ ಮಾರಣಹೋಮ ಈ ದೇಶಕ್ಕೆ ಅವಮಾನವಲ್ಲವೇ? ಅದು ಭಾರತದಂತಹ ದೇಶದ ಸೋಲಲ್ಲವೆ? ಪ್ರಧಾನಿ ಮೋದಿಯವರಿಗೆ ಅವಮಾನವಲ್ಲವೆ? ಸರಕಾರ ತನ್ನ ದಾಳಿಯನ್ನು ನಡೆಸಬೇಕಾದುದು ಈ ರೋಗದ ವಿರುದ್ಧವಲ್ಲವೇ? ಇಂತಹ ಪ್ರಶ್ನೆಗಳನ್ನು ಕೇಳಬೇಕಾದ ಪತ್ರಕರ್ತ್ಜಡಿ ಮೆದುಳು ರೋಗಕ್ಕೆ ಒಳಗಾದವರಂತೆ ವೌನವಾಗಿದ್ದಾರೆ. ಈ ವೌನವೇ ಸರಕಾರವನ್ನು ಸಂವೇದನಾರಹಿತವಾಗಿಸಿದೆ. ಅತ್ಯಂತ ವೇದನೀಯ ಸಂಗತಿಯೆಂದರೆ ಮಾಧ್ಯಮದ ನಿರೂಪಕನೊಬ್ಬ ಗೌನ್, ಕೈಗವುಸು ಮತ್ತು ಮುಖಕವಚವನ್ನು ಧರಿಸದೆಯೇ ಆಸ್ಪತ್ರೆಯ ತೀವ್ರ ನಿಗಾ ಘಟಕ ಪ್ರವೇಶಿಸಿ ಅಲ್ಲಿ ತಮ್ಮ ಕೆಲಸ ಮಾಡುತ್ತಿದ್ದ ವೈದ್ಯರು ಮತ್ತು ನರ್ಸ್‌ಗಳ ಬಾಯಿಯೊಳಗೆ ತನ್ನ ಮೈಕನ್ನು ತೂರಿಸಿ ಪ್ರಶ್ನೆ ಕೇಳಲು ಆರಂಭಿಸಿದ; ‘‘ಯಾಕೆ ಇಲ್ಲಿ ಸಾಕಷ್ಟು ಹಾಸಿಗೆಗಳಿಲ್ಲ? ಈ ಮಗುವನ್ನು ನೀವು ಯಾಕೆ ಪರೀಕ್ಷಿಸುತ್ತಿಲ್ಲ (ವೈದ್ಯರು ಬೇರೆ ಮಗುವನ್ನು ಪರೀಕ್ಷಿಸುತ್ತಿದ್ದರು)? ನಿಮ್ಮ ಬಳಿ ಅಗತ್ಯ ಸಲಕರಣೆಗಳು ಯಾಕಿಲ್ಲ?’’ ಆದರೆ ಈ ಯಾವ ಪ್ರಶ್ನೆಗಳನ್ನೂ ಆತ ಇವುಗಳನ್ನು ಒದಗಿಸುವ ಜವಾಬ್ದಾರಿ ಹೊಂದಿದ್ದ ಸಂಬಂಧಿತ ವ್ಯಕ್ತಿಗಳಲ್ಲಿ ಕೇಳಿರಲಿಲ್ಲ. ನಿಜಕ್ಕೂ ಮೆದುಳು ರೋಗಕ್ಕೆ ಬಲಿಯಾದವರು ಯಾರು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News